ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ‘ಮಕ್ಕಳ ಸಂತೆ’ ವ್ಯವಹಾರ ಮೇಳ

0

ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್‌ನ ಶ್ರೀ ರಾಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಕೌಶಲ್ಯ ವೃದ್ಧಿಸುವ ಸಲುವಾಗಿ ಮಕ್ಕಳ ಸಂತೆ ಎಂಬ ವ್ಯವಹಾರ ಮೇಳವನ್ನು ನಡೆಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಆಯೋಜಿಸಲಾದ ಈ ಮಕ್ಕಳ ಸಂತೆ ಎಂಬ ವ್ಯವಹಾರ ಮೇಳವು ಮಕ್ಕಳ ವ್ಯವಹಾರಿಕ ಕೌಶಲ್ಯ ವೃದ್ಧಿಗೆ ಕಾರಣವಾಗಲಿದೆ ಎಂದರು.


ಮಕ್ಕಳು ಮನೆಯ ತೋಟದಲ್ಲಿ ಬೆಳೆಸಲಾದ ಹಸಿ ಸೊಪ್ಪು ತರಕಾರಿ, ಹಣ್ಣು ಹಂಪಲುಗಳನ್ನು , ತಂದು ಮಾರಾಟ ಮಾಡಿದರೆ, ಇನ್ನು ಕೆಲವರು ವಿದ್ಯಾರ್ಥಿಗಳು ಚರುಂಬುರಿ, ಹಣ್ಣಿನ ತುಂಡುಗಳ ಮಾರಾಟ, ಲಕ್ಕಿ ನಂಬರ್ , ಹಣ್ಣಿನ ರಸಗಳ ಮಾರಾಟ ಮಳಿಗೆಯನ್ನು ಇರಿಸಿ ವ್ಯಾಪಾರ ಮಾಡಿದರು.
ಕೆಲ ವಿದ್ಯಾರ್ಥಿಗಳು ಚೌಕಾಸಿಗೆ ಮಣಿದು ಗ್ರಾಹಕರ ಕೇಳಿದ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ, ಇನ್ನು ಕೆಲ ವಿದ್ಯಾರ್ಥಿಗಳು ಮಾರುಕಟ್ಟೆಗಳಲ್ಲಿ ಇರುವ ದರಕ್ಕಿಂತ ಕಡಿಮೆ ದರ ನಿಗದಿ ಪಡಿಸಿದ್ದೇವೆ ಎಂದು ವಾದಿಸಿ ಚೌಕಾಸಿಗೂ ಮಣಿಯದೇ ವ್ಯವಹಾರ ನಡೆಸುತ್ತಿರುವುದು ಕಂಡು ಬಂತು. ಸಂತೆಯ ಮುಕ್ತಾಯದ ಹಂತಕ್ಕೆ ಗ್ರಾಹಕರು ಕೇಳಿದ ದರಕ್ಕೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ತಮ್ಮ ಮಳಿಗೆಗಳನ್ನು ತ್ವರಿತವಾಗಿ ಮುಚ್ಚಲು ಮುಂದಾಗಿರುವುದು ಕಂಡು ಬಂತು.
ಈ ವ್ಯವಹಾರಿಕ ಸಂತೆಯಲ್ಲಿ ವಿದ್ಯಾಲಯದ ಸಂಚಾಲಕ ಯು.ಜಿ. ರಾಧ, ಪ್ರಮುಖರಾದ ಜಯಂತ ಪುರೋಳಿ, ಗಣೇಶ್ ಕುಲಾಲ್, ಗುಣಕರ ಅಗ್ನಾಡಿ, ಗೀತಾಲಕ್ಷ್ಮಿ ತಾಳ್ತಜೆ, ಉದಯ ಅತ್ರಮಜಲು, ಕಂಗ್ವೆ ವಿಶ್ವನಾಥ ಶೆಟ್ಟಿ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here