ಉಪ್ಪಿನಂಗಡಿ ಭಾಗದಲ್ಲಿ ಶಾಂತಿಯುತ ಮತದಾನ

0

ಉಪ್ಪಿನಂಗಡಿ: ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಉಪ್ಪಿನಂಗಡಿ ಭಾಗದಲ್ಲಿ ಶಾಂತಿಯುತವಾಗಿ ನಡೆದಿದ್ದು, ಕೆಲವು ಮತಗಟ್ಟೆಗಳಲ್ಲಿ ಮತದಾರರು ಬಿರುಸಿನಿಂದ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರೆ, ಇನ್ನು ಕೆಲವಡೆ ನಿಧಾನಗತಿಯಲ್ಲಿ ಆಗಮಿಸಿ, ಮತ ಚಲಾವಣೆ ಮಾಡಿ ಹೋಗುವುದು ಕಂಡು ಬಂತು. ಕೆಲವು ಕಡೆ ಅಧಿಕಾರಿಗಳಿಂದಾಗಿ ನಿಧಾನಗತಿಯಲ್ಲಿ ಮತದಾನ ನಡೆದಿರುವ, ಅನಾರೋಗ್ಯ ಪೀಡಿತರೊಂದಿಗೆ ಬರುವ ಸಹಾಯಕರನ್ನು ಮತದಾನ ಕೇಂದ್ರದೊಳಗಿನಿಂದ ಹೊರಗೆ ಕಳುಹಿಸಿದ ಬಗ್ಗೆ ಆರೋಪಗಳು ಕೇಳಿ ಬಂದವು.


ಪುಳಿತ್ತಡಿಯ ಬೂತ್ ಸಂಖ್ಯೆ 40ರಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಮತದಾನ ನಡೆಯಿತು. ಇಲ್ಲಿ ಬೆಳಗ್ಗೆ ಮತಗಟ್ಟೆಗೆ ಬಂದವರು ಮತದಾನ ಕೇಂದ್ರದೊಳಗೆ ಹೋಗಲು ಸುಮಾರು ಒಂದೂವರೆ ಗಂಟೆಗಳಷ್ಟು ಹೊತ್ತು ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ ಬಳಿಕ ಮತಗಟ್ಟೆ ಅಧಿಕಾರಿಗಳು ಮತದಾನದ ಪ್ರಕ್ರಿಯೆಗೆ ಸ್ವಲ್ಪ ವೇಗ ನೀಡಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗೆಯ ಸಮಯದಲ್ಲಿ ಮತದಾರರ ಉದ್ದದ ಸಾಲುಗಳು ಕಂಡು ಬಂದವು. ಬಿಸಿಲ ತಾಪ ಏರಿಕೆಯಾಗುತ್ತಲೇ ಸರದಿ ಸಾಲುಗಳು ಕರಗತೊಡಗಿದವು. ಆದರೆ ಕೊಕ್ಕಡದ ಮತಗಟ್ಟೆ ಸಂಖ್ಯೆ ೨೩ರಲ್ಲಿ ಮಧ್ಯಾಹ್ನದ ಒಂದು ಗಂಟೆಯ ಹೊತ್ತಿಗೂ ಮತದಾನಕ್ಕೆ ಉತ್ಸಾಹದಿಂದ ಜನರು ಬಂದು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು.


ತಳಿರು- ತೋರಣದ ಅಲಂಕಾರ:
ಬಜತ್ತೂರು ಗ್ರಾಮದ ಮತಗಟ್ಟೆ ಸಂಖ್ಯೆ 44ನ್ನು ಪಿಂಕ್ ಮತಗಟ್ಟೆಯಾಗಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಕೊಕ್ಕಡದ ಉಪ್ಪಾರಪಳಿಕೆಯ ವಿಶೇಷ ಚೇತನರ ಮತಗಟ್ಟೆಯನ್ನು ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತಲ್ಲದೆ, ಮದುವೆ ಮಂಟಪಕ್ಕೆ ದ್ವಾರವನ್ನು ನಿರ್ಮಿಸುವಂತೆ ಬಲೂನ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಇಲ್ಲಿಯೂ ದ್ವಾರವನ್ನು ಅಲಂಕರಿಸಲಾಗಿತ್ತು.


ಸೌಹಾರ್ದತೆಗೆ ಸಾಕ್ಷಿಯಾದ ಬೂತ್:
ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಇನ್ನಿತರ ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದರು. ಮತಗಟ್ಟೆಯ ಹೊರಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ಬೂತ್‌ಗಳು ಮಾತ್ರ ಕಂಡು ಬಂದವು. ಅವುಗಳೂ ಹೆಚ್ಚಿನ ಕಡೆಗಳಲ್ಲಿ ಒಂದು ಪಕ್ಷದ ಬೂತ್ ಇನ್ನೊಂದು ಪಕ್ಷದ ಬೂತ್‌ಗಿಂತ ಅಂತರ ಕಾಯ್ದುಕೊಂಡಿದ್ದರೆ, ಪೆರ್ನೆಯಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೂತ್‌ಗಳನ್ನು ಒಂದಕ್ಕೊಂದು ತಾಗಿಕೊಂಡು ಹಾಕಲಾಗಿತ್ತು. ಇಲ್ಲಿ ಕಾರ್ಯಕರ್ತರೂ ಕೂಡಾ ಪರಸ್ಪರ ಅನ್ಯೋನ್ಯವಾಗಿ ಒಬ್ಬರೊಂದಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು.


ನಿಧಾನಗತಿಯ ಮತದಾನ:
ಕೌಕ್ರಾಡಿಯ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಮುಖವನ್ನು ಮತ್ತು ಅವರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದುದ್ದರಿಂದ ಮತದಾನವು ನಿಧಾನಗತಿಯಲ್ಲಿ ನಡೆಯುವಂತಾಗಿದೆ ಎಂಬ ಆರೋಪ ಕೇಳಿಬಂತು. ಇಳಂತಿಲ ಗ್ರಾಮದ ಅಂಡೆತ್ತಡ್ಕದ ಮತಗಟ್ಟೆಯೊಂದರಲ್ಲಿ ಬೆಳಗ್ಗೆ 7ರಿಂದ 8.30ರವರೆಗೆ ನಿಧಾನಗತಿಯಲ್ಲಿ ನಡೆಯಿತು. ಹಾಗಾಗಿ ಮತದಾರರು ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಲ್ಲುವಂತಹ ಪರಿಸ್ಥಿತಿ ಎದುರಾಗಿತ್ತು. ಮತದಾರರೋರ್ವರು ಇದರ ಕಾರಣ ಹುಡುಕಿದಾಗ ಮತಗಟ್ಟೆ ಅಧಿಕಾರಿಯೋರ್ವರು ಸ್ವಲ್ಪ ಮಂದ ದೃಷ್ಟಿಯಿಂದಾಗಿ ಮತದಾರರ ಸೀರಿಯಲ್ ನಂಬರ್‌ಗಳನ್ನು ತಾಳೆ ಮಾಡಲು ಕಷ್ಟಪಡುತ್ತಿರುವುದು ಕಂಡು ಬಂತು. ಇವರ ಮತದಾನದ ಸರದಿ ಬಂದಾಗ ಇವರ ಸೀರಿಯಲ್ ನಂಬರನ್ನು ಇವರೇ ಜೋರಾಗಿ ಅಧಿಕಾರಿಗೆ ಹೇಳಿದರು. ಬಳಿಕ ಉಳಿದ ಮತದಾರರಿಗೂ ಇದೇ ರೀತಿ ಮಾಡಲು ಹೇಳಿದರು. ಇದು ಅಧಿಕಾರಿಗೆ ಕೂಡಾ ನೆರವಾಗಿ ಮತ್ತೆ ಮತದಾನ ಪ್ರಕ್ರಿಯೆ ಬಿರುಸು ಪಡೆಯಿತು.


ಕಮಾಂಡೋಗಳ ಭದ್ರತೆ:
ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಕಡಬ ತಾಲೂಕು ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರಾಡಿಯ ಮತಗಟ್ಟೆ ಸಂಖ್ಯೆ 34ರಲ್ಲಿ ಹಾಗೂ ಅಡ್ಡಹೊಳೆಯ ಮತಗಟ್ಟೆ ಸಂಖ್ಯೆ 35ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ವಿಶೇಷ ಭದ್ರತೆ ಒದಗಿಸಿದರು. ಮತಗಟ್ಟೆ ಸಂಖ್ಯೆ 35ರಲ್ಲಿ ಮಧ್ಯಾಹ್ನ 2.30ರ ವೇಳೆಗೆ ಶೇ.45 ಮತದಾನವಾಗಿದ್ದರೆ, ಮತಗಟ್ಟೆ ಸಂಖ್ಯೆ 34ರಲ್ಲಿ ಮಧ್ಯಾಹ್ನ 2.52ರ ವೇಳೆಗೆ ಶೇ.67 ಮತದಾನವಾಗಿತ್ತು.

ನವದುರ್ಗೆಯರ ಸಂಕಲ್ಪ ಈಡೇರಿಸಿದ ಮತದಾರರು
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವುದಕ್ಕಾಗಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಪ್ರತಿ ಬೂತ್‌ನ ಪ್ರತಿ ಮತಗಟ್ಟೆಯಲ್ಲಿ 9 ಮಂದಿ ಮಹಿಳೆಯರು ಮೊದಲಾಗಿ ಮತದಾನ ಮಾಡಿ ನವದುರ್ಗೆಯರಂತೆ ಮೋದಿ ಅವರಿಗೆ ಆಶೀರ್ವಾದ ಮಾಡುವ ಸಂಕಲ್ಪ ತೊಟ್ಟಿದ್ದು, ಅದರಂತೆ ಉಪ್ಪಿನಂಗಡಿಯ ಮತಗಟ್ಟೆ ಸಂಖ್ಯೆ 37 ಮತ್ತು 38ರಲ್ಲಿ ತಲಾ 9ರಂತೆ 18 ಮಂದಿ ಮಹಿಳೆಯರು ಬೆಳ್ಳಂಬೆಳಗ್ಗೆನೇ ಮತದಾನ ಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ಮೊದಲಾಗಿ ಮತದಾನ ಮಾಡುವ ಮೂಲಕ ಸಂಕಲ್ಪ ಈಡೇರಿಸಿದರು.

ಸಹಾಯಕರನ್ನು ಒಳಬಿಡದ ಆರೋಪ !
ಅನಾರೋಗ್ಯ ಪೀಡಿತರನ್ನು ಅವರಿಗೆ ಸಹಾಯಕರಾಗಿ ಸಂಬಂಧಿಗಳು ಮತದಾನ ಕೇಂದ್ರದೊಳಗೆ ಮತ ಹಾಕಲು ಕರೆದೊಯ್ದಾಗ ಸಹಾಯಕರನ್ನು ಬಜತ್ತೂರು ಗ್ರಾಮದ ಹೊಸಗದ್ದೆ ಮತಗಟ್ಟೆ ಸಂಖ್ಯೆ 46ರಲ್ಲಿನ ಮತಗಟ್ಟೆ ಅಧಿಕಾರಿಯು ಹೊರಗೆ ಕಳುಹಿಸಿದ್ದಾರೆ ಎಂಬ ಆರೋಪ ಬಿಜೆಪಿ ಕಾರ್ಯಕರ್ತರಿಂದ ವ್ಯಕ್ತವಾಗಿದೆ.
ಎಂಡೋ ಸಂತ್ರಸ್ಥೆಯಾದ ಉಮಾವತಿ (45) ಎಂಬವರು ಮತಿ ಭ್ರಮಣೆಯಂತೆ ವರ್ತಿಸುತ್ತಿದ್ದು, ಅವರನ್ನು ಮತ ಹಾಕಿಸಲು ಅವರ ಸಹೋದರನ ಪತ್ನಿ ಪದ್ಮಾವತಿ ಎಂಬವರು ಮತಗಟ್ಟೆ ಕೇಂದ್ರದೊಳಗೆ ಅವರೊಂದಿಗೆ ಸಹಾಯಕರಾಗಿ ತೆರಳಿದ್ದರು. ಆಗ ಅಲ್ಲಿನ ಮತಗಟ್ಟೆ ಅಧಿಕಾರಿಯು ಪದ್ಮಾವತಿಯವರನ್ನು ಹೊರಗೆ ಕಳುಹಿಸಿದ್ದು, ಉಮಾವತಿಯವರಲ್ಲೇ ಮತ ಹಾಕಿಸಿದ್ದಾರೆ. ಇನ್ನು ಕೆಲವು ಇಂತಹ ಘಟನೆಗಳು ಇಲ್ಲಿ ನಡೆದಿವೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಮತದಾನಕ್ಕಾಗಿ ತೆರೆಯುವ ಶಾಲೆ
ಶಿರಾಡಿಯ ದಕ್ಷಿಣ ಕನ್ನಡ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದ ಎರಡ್ಮೂರು ವರ್ಷಗಳಿಂದ ಮುಚ್ಚಲಾಗಿದ್ದು, ಇಲ್ಲಿ ಮತಗಟ್ಟೆ ಸಂಖ್ಯೆ ೩೪ರ ಮತಗಟ್ಟೆ ಇಲ್ಲಿ ಬರುತ್ತದೆ. ಈ ಮತಗಟ್ಟೆಯು ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊತ್ತಿದೆ. ಮತದಾನದ ಸಂದರ್ಭದಲ್ಲಿ ಮಾತ್ರ ಈ ಶಾಲೆಯನ್ನು ತೆರೆದು ಮತದಾನ ನಡೆಸಲಾಗುತ್ತದೆ. ಬಳಿಕ ಮುಚ್ಚಲಾಗುವುದರಿಂದ ಈ ಶಾಲೆ ಮತ್ತು ಇದರ ಆವರಣದಲ್ಲಿ ಸ್ಮಶಾನ ಮೌನ ಗೋಚರಿಸುತ್ತದೆ.

LEAVE A REPLY

Please enter your comment!
Please enter your name here