ನೆಲ್ಯಾಡಿ: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಆರನೆಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.ಮುಖ್ಯ ಅತಿಥಿ ನೂಜಿಬಾಳ್ತಿಲ ಬೆಥನಿ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಕಾಲೇಜು ಆರಂಭವಾಗಿ ಆರು ವರ್ಷಗಳಲ್ಲಿಯೇ ಅನೇಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ವಿಯ ಹಾದಿಯತ್ತ ಬೆಳೆಯುತ್ತಿದೆ. ಈ ಬೆಳವಣಿಗೆಯ ಹಾದಿಯು ನಮ್ಮಲ್ಲಿ ಹಾಗೂ ನೆಲ್ಯಾಡಿ ಭಾಗದ ಶಿಕ್ಷಣ ಪ್ರೇಮಿಗಳಲ್ಲಿ ಹೊಸ ಉತ್ಸಾಹ ತಂದಿದೆ. ಶಿಕ್ಷಣ ಎನ್ನುವುದು ಕೇವಲ ಅಂಕ ಗಳಿಕೆಯಷ್ಟೇ ಅಲ್ಲ, ಬದುಕಿನ ಸರ್ವತೋಮುಖ ಬೆಳವಣಿಗೆಯ ಮೂಲಕ ಸಮಾಜದ ಶ್ರೇಯಸ್ಸಿನಲ್ಲಿ ತೊಡಗುವಂತೆ ಮಾಡುವುದೇ ಶಿಕ್ಷಣ. ಹಿಂದೆ ಗುರು ಮುಂದೆ ಗುರಿಯನ್ನು ಇಟ್ಟುಕೊಂಡು ಹೋಗುವ ಈ ವಿಕಾಸದ ಹಾದಿಯು ಈಗ ಕಡಿಮೆಯಾಗಿ ಮೊಬೈಲ್ ವಾಟ್ಸಪ್ ಮೂಲಕ ಗುರು ಮತ್ತು ಗುರಿಯಿಲ್ಲದ ಪಯಣ ಹೆಚ್ಚಾಗುತ್ತಿದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ನಿಂದ ಅಂತರ ಕಾಪಾಡಿಕೊಂಡು ಓದು ಬರಹದ ಜೊತೆಗೆ ಅನೇಕ ಪಠ್ಯೇತರ ಚಟುವಟಿಕೆಗಳ ಮೂಲಕ ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳುವುದು ಮುಖ್ಯವಾಗಿದೆ. ಇಂತಹ ಮೌಲ್ಯಯುತ ಶಿಕ್ಷಣವನ್ನು ಈ ವಿಶ್ವವಿದ್ಯಾನಿಲಯ ಕಾಲೇಜು ನೀಡುತ್ತಿರುವುದು ನಮ್ಮ ಭಾಗದ ಹೆಮ್ಮೆಯ ವಿಷಯ. ಕೆ. ಆರ್ ನಾರಾಯಣನ್ ಅವರು ಹೇಗೆ ಕೇರಳದ ಅತ್ಯಂತ ಬಡತನದಲ್ಲಿ ಹುಟ್ಟಿ ಅನೇಕ ಸಮಸ್ಯೆಗಳ ಮಧ್ಯೆ ರಾಷ್ಟ್ರಪತಿ ಹುದ್ದೆಯವರೆಗೂ ಬೆಳೆದರು, ಅವರು ಸಾಗಿದ ಹಾದಿಯನ್ನು ಪ್ರಸ್ತಾಪಿಸಿದ ಅತಿಥಿಗಳು ನಮಗೆಲ್ಲ ಇಂತಹ ಶ್ರೇಷ್ಠ ವ್ಯಕ್ತಿಗಳ ದಾರಿಯು ಮಾದರಿಯಾಗಬೇಕು. ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಾತನಾಡುತ್ತಾ ಈ ವಿಶ್ವವಿದ್ಯಾನಿಲಯ ಘಟಕ ಕಾಲೇಜು ನಮ್ಮ ನೆಲ್ಯಾಡಿಯ ಹೆಮ್ಮೆಯ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಸಮಯವನ್ನು ವ್ಯರ್ಥ ಮಾಡದೆ ಸತತ ಪರಿಶ್ರಮದಿಂದ ಅಜ್ಞಾನವನ್ನು ಕಳಚಿ ಸುಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ವಿದ್ಯಾರ್ಥಿ ಜೀವನ ಸಾರ್ಥಕ ಆಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ಅವರು ಮಾತನಾಡುತ್ತಾ ಮಂಗಳೂರು ವಿಶ್ವವಿದ್ಯಾನಿಲಯದ ಈ ನಮ್ಮ ಘಟಕ ಕಾಲೇಜು ಈ ಭಾಗದ ವಿದ್ಯಾರ್ಥಿಗಳಿಗೆ ಕಳೆದ ಆರು ವರ್ಷಗಳಿಂದ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಹೊಸ ಆಶಾಕಿರಣವನ್ನು ತಂದಿದೆ. ಅನೇಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಈ ಕಾಲೇಜಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದರು.
ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ನೂರಂದಪ್ಪ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವೆರೊಣಿಕ ಪ್ರಭಾ ಹಾಗೂ ಉಪನ್ಯಾಸಕ ಅಶ್ವಥ್ ಸಾಲಿಯಾನ್ ಅವರು ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. ಲಲಿತ ಕಲಾ ಸಂಘದ ಸಂಚಾಲಕಿ ದಿವ್ಯಶ್ರೀ ಜಿ. ಅವರು ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ್ ಪಿ. ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಸಚಿನ್ ಎನ್. ಟಿ ಹಾಗೂ ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್, ಕಾರ್ಯದರ್ಶಿಗಳಾದ ಶಿವಪ್ರಸಾದ್, ಅಂಗು, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಐಐಸಿಟಿ ಕಂಪ್ಯೂಟರ್ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಸಿ.ಹೆಚ್, ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿಗಳಾದ ರವಿಚಂದ್ರ ಹೊಸವೊಕ್ಲು, ಸುಪ್ರೀತಾ ಹೊಸವೊಕ್ಲು, ನೆಲ್ಯಾಡಿ ವರ್ತಕರ ಸಂಘದ ಕಾರ್ಯದರ್ಶಿಗಳಾದ ಸತೀಶ್ ದುರ್ಗಾಶ್ರೀ, ಅರಸಿನಮಕ್ಕಿ ಕಾಲೇಜಿನ ಪ್ರಾಂಶುಪಾಲ ರಾಮಯ್ಯ ಶೆಟ್ಟಿ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಸುರೇಶ್ ಕೆ, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.