ಪುತ್ತೂರು: ನಗರಸಭೆ ಹಾಗೂ ಆರ್ಯಾಪು ಗ್ರಾ.ಪಂನ ಗಡಿ ಭಾಗದಲ್ಲಿರುವ ಮಚ್ಚಿಮಲೆ ಎಂಬಲ್ಲಿ ಜು.19ರಂದು ಬೆಳಿಗ್ಗೆ ಗುಡ್ಡ ಕುಸಿತಗೊಂಡು ರಸ್ತೆ ಅಂಚಿನ ತನಕ ಬಂದಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಮಚ್ಚಿಮಲೆ-ಬಂಗಾರಡ್ಕ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಪುತ್ತೂರು-ಬೆಳೆಯೂರುಕಟ್ಟೆ ರಸ್ತೆಯ ಮಚ್ಚಿಮಲೆ ಎಕ್ರೆಜಾಲ್‌ನಿಂದ ಮಚ್ಚಿಮಲೆ ಮೂಲಕ ಬಲ್ನಾಡು ಮೊರಾರ್ಜಿದೇಸಾಯಿ ಶಾಲೆ ಬಳಿ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಗುಡ್ಡ ಕುಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಗುಡ್ಡ ಕುಸಿತಗೊಂಡು ಕೆಲ ಭಾಗದಲ್ಲಿ ಸುಮಾರು 150 ಅಡಿ ಆಳದಲ್ಲಿರುವ ಲೇ ಔಟ್ ಮಾಡಲಾಗಿರುವ ಜಾಗದ ಮೇಲೆ ಬಿದ್ದಿದೆ. ಕೆಲ ಭಾಗದಲ್ಲಿ ಯಾವುದೇ ಮನೆಗಳಿಲ್ಲದೇ ಇರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಗುಡ್ಡವು ಕುಸಿತಗೊಂಡು ಮಚ್ಚಿಮಲೆ- ಬಲ್ನಾಡು ಸಂಪರ್ಕ ರಸ್ತೆಯ ಅಂಚಿನ ತನಕ ಬಂದಿದೆ. ಕುಸಿತಗೊಂಡ ಭಾಗದಲ್ಲಿ ಗುಡ್ಡ ಒಡೆದು ನಿಂತಿದ್ದು ಇನ್ನಷ್ಟು ಕುಸಿಯುವ ಭೀತಿಯಲ್ಲಿದೆ. ಇನ್ನಷ್ಟು ಕುಸಿದರೆ ಮಚ್ಚಿಮಲೆಯಿಂದ ಬಲ್ನಾಡು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಇಓ, ಕಮಿಷನರ್ ಭೇಟಿ-ರಸ್ತೆ ಸಂಚಾರ್ ಬಂದ್:
ಘಟನೆ ನಡೆದ ಸ್ಥಳಕ್ಕೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಎಸ್. ಮನೋಹರ್, ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ., ಆರ್ಯಾಪು ಗ್ರಾಮ ಆಡಳಿತಾಧಿಕಾರಿ ಅಶ್ವಿನಿ, ಆರ್ಯಾಪು ಗ್ರಾ.ಪಂ ಸದಸ್ಯ ವಸಂತ ಶ್ರೀದುರ್ಗಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಡ್ಡವು ಇನ್ನಷ್ಟು ಕುಸಿಯುವ ಭೀತಿಯಲ್ಲಿರುವುದನ್ನು ಮನಗಂಡ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದು ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಲಾಗಿದೆ.
ಕೆಲ ದಿನಗಳ ಹಿಂದೆ ಗುಡ್ಡ ಕುಸಿತಗೊಂಡಿತ್ತು:
ಗುಡ್ಡ ಕುಸಿತಗೊಂಡಿರುವ ಪ್ರದೇಶದ ಮೇಲ್ಭಾಗದಲ್ಲಿ ಕೆಲ ದಿನಗಳ ಹಿಂದೆ ಕುಸಿತಗೊಂಡು ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಇದನ್ನು ಆರ್ಯಾಪು ಗ್ರಾ.ಪಂನ ವತಿಯಿಂದ ತೆರವುಗೊಳಿಸಲಾಗಿತ್ತು. ಇದೀಗ ಈ ಹಿಂದೆ ಗುಡ್ಡ ಕುಸಿತಗೊಂಡಿರುವ ಕೆಲ ಭಾಗದಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿತಗೊಂಡಿದೆ.
ಮನೆ ಕಟ್ಟುವ ಸಿದ್ದತೆಯಲ್ಲಿದ್ದ ಕುಟುಂಬ;
ಗುಡ್ಡ ಕುಸಿತಗೊಂಡಿರುವ ಕೆಲ ಭಾಗದಲ್ಲಿ ಕುಟುಂಬವೊಂದು ಮನೆ ಕಟ್ಟುವ ಸಿದ್ದತೆಯಲ್ಲಿದ್ದರು. ಇದಕ್ಕಾಗಿ ಕಲ್ಲು, ಜಲ್ಲಿ ಹಾಗೂ ಹೊಗೆಯನ್ನು ಸಂಗ್ರಹಿಸಿಟ್ಟಿದ್ದರು. ಗುಡ್ಡ ಕುಸಿತದಿಂದ ಅವೆಲ್ಲವೂ ಮಣ್ಣ ಪಾಲಾಗಿದೆ. ಮನೆ ನಿರ್ಮಾಣಗೊಂಡು ಅದರಲ್ಲಿ ವಾಸ್ತವ್ಯವಿರುತ್ತಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.