ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವರ್ಷಂಪ್ರತಿ ನಡೆಯುವ ಕಂಬಳಕ್ಕೆ ಸರಕಾರದಿಂದ ಅನುದಾನ ನೀಡುವಂತೆ ಆಗ್ರಹಿಸಿ ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ಶಾಸಕ ಅಶೋಕ್ ರೈಯವರು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ರವರಿಗೆ ಮನವಿ ಸಲ್ಲಿಸಿದ್ದಾರೆ.
ಕಂಬಳ ವಿಚಾರದ ಕುರಿತು ವಿಧಾನಸೌಧದಲ್ಲಿ ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಉಭಯ ಜಿಲ್ಲೆಗಳಲ್ಲಿ ನಡೆಯುವ ಒಟ್ಟು ಕಂಬಳದ ಬಗ್ಗೆ ಸಚಿವರಲ್ಲಿ ವಿವರಿಸಲಾಯಿತು. ಕಂಬಳ ಸಾಂಪ್ರದಾಯಿಕ ಕಲೆ ಮತ್ತು ತುಳುನಾಡಿನ ಜನಪದ ಕಲೆಯಾಗಿದ್ದು ಇದನ್ನು ವರ್ಷಂಪ್ರತಿ ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ನಡೆಸಲಾಗುತ್ತದೆ. ಕಂಬಳಕ್ಕೆ ಲಕ್ಷಾಂತರ ರೂ ಖರ್ಚು ಇದ್ದು ಸರಕಾರದಿಂದ ಇದಕ್ಕೆ ವಿಶೇಷ ಅನುದಾನ ನೀಡುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಸಭೆಯ ಬಳಿಕ ಸಚಿವರಲ್ಲಿ ಮನವಿ ಸಲ್ಲಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ರವರು ಮಾತನಾಡಿ ಉಭಯ ಜಿಲ್ಲೆಗಳಲ್ಲಿ ನಡೆಯುವ ಜನಪದ ಕ್ರೀಡೆ ಕಂಬಳಕ್ಕೆ ಇಷ್ಟು ವರ್ಷಗಳಲ್ಲಿ ಸರಕಾರದಿಂದ ಯಾವುದೇ ಅನುದಾನ ದೊರೆಯಲಿಲ್ಲ. ಜನಪದ ಕಲೆಯನ್ನು ಉಳಿಸಿಬೆಳೆಸುವಲ್ಲಿ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಪುತ್ತೂರು ಶಾಸಕರಾದ ಅಶೋಕ್ ರೈಯವರು ಮಾತನಾಡಿ ಕಂಬಳ ಹೇಗೆ? ಏನು ಎಂಬುದನ್ನು ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಮೂಲಕ ಸರಕಾರಕ್ಕೆ ,ಕರ್ನಾಟಕದ ಜನತೆಗೆ ಸೇರಿದಂತೆ ವಿಶ್ವಕ್ಕೆ ಪರಿಚಯಿಸಲಾಗಿದೆ. ತುಳುನಾಡಿನ ಅತ್ಯಂತ ಜನಪ್ರಿಯ ಜನಪದ ಕಲೆಯನ್ನು ಉಳಿಸಬೇಕಾಗಿದೆ.ಎಲ್ಲರಿಗೂ ಈ ಕ್ರೀಡೆ ಅತ್ಯಂತ ಇಷ್ಟವಾಗಿದೆ ಎಂಬುದು ಬೆಂಗಳೂರು ಕಂಬಳಕ್ಕೆ ಸೇರಿದ್ದ ಜನ ಸಾಗರವೇ ಸಾಕ್ಷಿಯಾಗಿತ್ತು. ಕಂಬಳವನ್ನು ಉಳಿಸಲು ಸುಪ್ರಿಂ ಕೋರ್ಟು ಮೆಟ್ಟಿಲೇರುವ ಮೂಲಕ ಹೋರಾಟ ನಡೆಸಿದ್ದೇನೆ, ಯಾವುದೇ ಕಾರಣಕ್ಕೂ ಮುಂದೆ ಕಂಬಳ ನಿಲ್ಲಬಾರದು. ಕಂಬಳಕ್ಕೆ ಸರಕಾರದ ನೆರವು ಅತೀ ಅಗತ್ಯವಾಗಿದೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.ಮನವಿಗೆ ಸ್ಪಂದಿಸಿದ ಸಚಿವರು ಕಂಬಳಕ್ಕೆ ಸರಕಾರದಿಂದ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ದ ಕ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಸಹಿತ ಕಂಬಳ ಸಮಿತಿಯ ಪ್ರಮುಖರು ಸಭೆಯಲ್ಲಿ ಉಪಸ್ತಿತರಿದ್ದರು.
ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟಿನಲ್ಲಿ ನ್ಯಾಯಯುತ ಹೋರಾಟ ಮಾಡುವ ಮೂಲಕ ಅದರಲ್ಲಿ ಜಯಶಾಲಿಯಾಗಿದ್ದೇವೆ. ಮುಂದೆ ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಸರಕಾರದ ಸಹಾಯ ಅಗತ್ಯವಾಗಿದೆ. ಕಂಬಳಕ್ಕೆ ಅನುದಾನ ನೀಡುವಂತೆ ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ಕರೆದಿದ್ದೇವೆ. ಅನುದಾನ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಕಂಬಳಕ್ಕೆ ಅನುದಾನ ನೀಡುವಂತೆ ಅಂದಿನಿಂದ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ ಈ ಬಾರಿ ಅದು ಕೈಗೂಡುವ ವಿಶ್ವಾಸ ಇದೆ
ಅಶೋಕ್ ರೈ ಶಾಸಕರು ,ಪುತ್ತೂರು