ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಹಾಗೂ ಶ್ರೀ ರಾಮ ಗ್ರಾಮ ವಿಕಾಸ ನೆಲ್ಯಾಡಿ ಇದರ ಸಹಯೋಗದಲ್ಲಿ ಪ್ರಕೃತಿ ವಂದನಾ ಕಾರ್ಯಕ್ರಮದ ಸಲುವಾಗಿ “ಮನೆಗೊಂದು ಗಿಡ, ಪರಿಸರಕೊಂದು ಶಕ್ತಿ” ಶೀರ್ಷಿಕೆಯಡಿಯಲ್ಲಿ ಸೆ.4ರಂದು ಶ್ರೀರಾಮ ಶಾಲಾ ವ್ಯಾಪ್ತಿಯ ಮನೆಗಳಲ್ಲಿ ಶ್ರೀರಾಮ ಶಾಲಾ ವಿದ್ಯಾರ್ಥಿಗಳಿಂದ ಗಿಡ ನೆಡುವುದರ ಮೂಲಕ ನಡೆಸಲಾಯಿತು.
ಪ್ರಶಾಂತ್ ಶೆಟ್ಟಿ ಪರಾರಿ ಅವರ ಮನೆಯ ಆವರಣದಲ್ಲಿ ನೆಲ್ಲಿಕಾಯಿ ಮರಕ್ಕೆ ಪೂಜೆ ಮಾಡಿ ಮನೆಯ ದಂಪತಿಗಳಿಂದ ರಕ್ಷೆ ಕಟ್ಟಿ ಪೂಜೆ ಮಾಡಲಾಯಿತು. ನಂತರ ಶ್ರೀರಾಮ ಶಾಲಾ ವ್ಯಾಪ್ತಿಯಲ್ಲಿ ಬರುವ ಸುಮಾರು ಹತ್ತಕ್ಕಿಂತ ಅಧಿಕ ಮನೆಗಳಲ್ಲಿ ಉತ್ತಮ ಜಾತಿಯ ಗಿಡಗಳನ್ನು ಶಾಲಾ ವಿದ್ಯಾರ್ಥಿಗಳಿಂದ ಗ್ರಾಮ ವಿಕಾಸದ ಸದಸ್ಯರ ಸಹಯೋಗದಿಂದ ನೆಟ್ಟು, ನೀರು ಹಾಕಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮವಿಕಾಸದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ, ಸದಸ್ಯರಾದ ತುಕಾರಾಮ ಶೆಟ್ಟಿ, ಅರಣ್ಯ ಇಲಾಖೆಯ ದೇವಿಪ್ರಸಾದ್ ಉಪಸ್ಥಿತರಿದ್ದರು.
ಶ್ರೀರಾಮ ಶಾಲಾ ಆಡಳಿತ ಸಮಿತಿ ಸದಸ್ಯರಾದ ಸುಬ್ರಾಯ ಪುಣಚರವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಶಾಲಾ ಮುಖ್ಯಗುರು ಗಣೇಶ್ ವಾಗ್ಲೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಶಿಕ್ಷಕಿಯರಾದ ಕೋಮಲಾಂಗಿ ಸ್ವಾಗತಿಸಿ, ಅಪೂರ್ವ ವಂದಿಸಿದರು. ಕಾವ್ಯ ನಿರೂಪಿಸಿದರು.