@ಡಾ. ವರ್ಷಿಣಿ ಶೆಣೈ, ವಿಜಯ ಹೋಮಿಯೋ ಕ್ಲಿನಿಕ್, ಬೆಳ್ಳಾರೆ
ಅದು ನನ್ನ 3ನೇ ವರ್ಷದ BHMS ದಿನಗಳು. ನಾನು ನನ್ನ ಸ್ನೇಹಿತೆಯರ ಜೊತೆ ಪ್ರವಾಸಕ್ಕೆ ಹೋಗಿದ್ದೆ. ಪ್ರಕೃತಿ ಸೌಂದರ್ಯದಲ್ಲಿ ಮೈ ಮರೆತಿದ್ದ ನಮ್ಮನ್ನು ಬೇರೆಡೆ ಸೆಳೆದಿದ್ದು ಒಬ್ಬ ಹುಡುಗಿಯ ಧ್ವನಿ. ಹೋಗಿ ನೋಡಿದರೆ ಸುಮಾರು 12-15 ವಯಸ್ಸಿನ ಹುಡುಗಿ ನೆಲದ ಮೇಲೆ ಬಿದ್ದು ಮುಟ್ಟಿನ ನೋವಿನಿಂದ ಒದ್ದಾಡುತ್ತಿದ್ದಳು. ನನ್ನ ಗುಂಪಿನಲ್ಲಿದ್ದುದು ನಾನೊಬ್ಬಳೇ ವೈದ್ಯೆ. ನನ್ನ ಡಿಗ್ರೀ ಕೂಡ ಪೂರ್ಣಗೊಂಡಿರಲಿಲ್ಲವಾದರೂ ನಾನು ಕೊಂಡು ಹೋದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿಂದ ಹೋಮಿಯೋ ಮದ್ದನ್ನು ಅವಳ ಬಾಯಿಗೆ ಹಾಕಿ ಅವಳ ಪಕ್ಕದಲ್ಲಿಯೇ ಕುಳಿತೆ. ಮದ್ದು ಹೇಗೆ ಕೆಲಸ ಮಾಡುವುದೆಂಬ ಕುತೂಹಲ ನನಗೆ!. ಆಶ್ಚರ್ಯವೆಂಬಂತೆ ನೆಲದ ಮೇಲೆ ಒದ್ದಾಡುವಷ್ಟು ನೋವಿದ್ದ ಅವಳು ಸುಮಾರು 20 ನಿಮಿಷದ ನಂತರ ನಿಧಾನವಾಗಿ ಮೇಲೆದ್ದು ಸಣ್ಣಗೆ ನಗುತ್ತ “ ನನ್ನ ನೋವು ಕಡಿಮೆಯಾಗಿದೆ, ಥ್ಯಾಂಕ್ ಯು” ಎಂದಳು. ನನ್ನ ಆನಂದಕ್ಕೆ, ಸಾರ್ಥಕತೆಗೆ ಪಾರವೇ ಇರಲಿಲ್ಲ.
“ಡಾಕ್ಟ್ರೇ, ನನ್ನ ಮಗಳಿಗೆ ಇನ್ನು 8 ವರ್ಷ, ಈಗಲೇ ಅವಳು ದೊಡ್ಡವಳಾಗುವ ಲಕ್ಷಣಗಳು ಕಾಣಿಸುತ್ತಿವೆಯಲ್ಲಾ” ಎಂಬುದು ಬಹು ತಾಯಂದಿರ ಪ್ರಶ್ನೆ. ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡಗಳು, ಸಾಮಾಜಿಕ ಹಾಗು ಕೌಟುಂಬಿಕ ತೊಂದರೆಗಳಿಗೆ ಒಗ್ಗಿಕೊಳ್ಳಲು ಕಷ್ಟವಾದಾಗ ಮನಸ್ಸು ಒತ್ತಡಕ್ಕೀಡಾಗುತ್ತದೆ. ಹಾಗಾಗಿಯೇ ದೇಹದಲ್ಲಿ ವಯಸ್ಸಿಗೆ ಮುಂಚೆಯೇ ಈ ರೀತಿಯ ಏರುಪೇರುಗಳು ಉಂಟಾಗುತ್ತದೆ. ಇಂತಹ ಒತ್ತಡಗಳು ಒಬ್ಬೊಬ್ಬರ ಮೇಲೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಒಬ್ಬ ಮಹಿಳೆಗೆ ಆಕೆಯ ಋತು ಚಕ್ರದಲ್ಲಿ ಏರುಪೇರು ಉಂಟಾದರೆ, ಮತ್ತೊಬ್ಬರಲ್ಲಿ ಥೈರಾಯಿಡ್ ಸಮಸ್ಯೆಯೋ, ನರದೌರ್ಬಲ್ಯವೋ, ಕೀಲು ನೋವು ಮೈಗ್ರೇನ್ ತಲೆನೋವು, ಉಸಿರಾಟದ ತೊಂದರೆ, ಮುಂತಾದ ಇನ್ನಿತರ ತೊಂದರೆಗಳು ಅವರವರ ಮೈ ದಿನಸಿನ ಪ್ರಕಾರ ಬರುತ್ತದೆ. ಈ ರೀತಿಯ ಸಮಸ್ಯೆಗಳಲ್ಲಿ ರೋಗದ ಮೂಲ ಹುಡುಕಿ ಮದ್ದು ನೀಡುವುದರಿಂದ ರೋಗವನ್ನು ಬುಡಸಮೇತ ನಾಶ ಮಾಡಬಹುದು. ಇದು ಹೋಮಿಯೋಪತಿ ಪದ್ದತಿಯ ಹೆಗ್ಗಳಿಕೆ.
“ಮದ್ವೆ ಆಗಿ 5 ವರ್ಷ ಆಯ್ತು ಡಾಕ್ಟ್ರೇ , ಹೋಗದ ಆಸ್ಪತ್ರೆ ಇಲ್ಲ..! ತೋರಿಸದ ಡಾಕ್ಟರ್ ಇಲ್ಲ..!! ಎಲ್ಲಾ ರಿಪೋರ್ಟ್ ನಾರ್ಮಲ್ ಇದ್ರೂ ಕೂಡ ಮಕ್ಕಳಾಗ್ತಿಲ್ಲ” ಎಂಬ ಎಷ್ಟೋ ಮಹಿಳೆಯರ ಕೊರಗಿಗೆ ಹೋಮಿಯೋಪತಿ ನೆರವಾಗಿದೆ.
“ನನ್ನ ಮೊದಲ ಬಸುರು ಬಹಳ ಆರಾಮಾಗಿಯೇ ಇತ್ತು, ಎರಡನೇ ಬಾರಿ ಗರ್ಭಿಣಿಯಾದಾಗ ನನಗೆ ಥೈರಾಯಿಡ್ ಸ್ವಲ್ಪ ಜಾಸ್ತಿ ಆಗಿದೆ ಅಂತ ಡಾಕ್ಟರ್ ಹೇಳಿದ್ದಾರೆ”, ಎಂದು ಅನಾವಶ್ಯಕವಾಗಿ ಹಲವರು ಗಾಬರಿಗೊಳ್ಳುತ್ತಾರೆ. ಮತ್ತೂ ಹಲವರಲ್ಲಿ ಅತಿಯಾದ ರಕ್ತದೊತ್ತಡ ಅಥವಾ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವಿಕೆಯನ್ನು ಕಾಣಬಹುದು. ಗರ್ಭಿಣಿಯ ಹಾಗು ಶಿಶುವಿನ ಸ್ವಾಸ್ಥ್ಯಮತ್ತು ಬೆಳವಣಿಗೆಗಾಗಿ ರಕ್ತದಲ್ಲಿ ಇವುಗಳ ಅಂಶ ಸ್ವಲ್ಪ ಮಟ್ಟಿಗೆ ಹೆಚ್ಚುವುದು ಸಹಜ. ಆದರೆ ಇವುಗಳು ಅತಿಯಾದಾಗ ಮಾತ್ರ ಚಿಕಿತ್ಸೆ ನೀಡಬೇಕಾಗುತ್ತದೆ. ಇದರ ಸತ್ಯಅಸತ್ಯತೆಗಳನ್ನೂ ತಿಳಿಯಲು ನಿಮ್ಮ ಹೋಮಿಯ ವೈದ್ಯರನ್ನು ಭೇಟಿ ಮಾಡಬಹುದು.
ಗರ್ಭಕೋಶದ ಗಡ್ಡೆ, ಗರ್ಭ ಕಂಠದ (cervix) ಹಾಗು ಯೋನಿಯ (vagina) ತೊಂದರೆಗಳು, ಶ್ರೋಣಿಯ ಸೋಂಕು (pelvic infection), ಉರಿ ಮೂತ್ರ, ಗರ್ಭಕೋಶ ಜಾರುವಿಕೆ, ಸ್ತನಗಳಲ್ಲಿ ಹಾಲು ಕಟ್ಟುವಿಕೆ, ಎದೆ ಹಾಲಿನ ಕೊರತೆ ಹಾಗು ಹೆಚ್ಚುವಿಕೆ, ಗರ್ಭಪಾತ ಪ್ರವೃತ್ತಿ (recurrent abortion), ಬಿಳಿ ಮುಟ್ಟು, ಮುಟ್ಟಿನ ಚಕ್ರ ನಿಂತ ಬಳಿಕ ರಕ್ತಸ್ರಾವವಾಗುವುದು, ಕ್ಯಾನ್ಸರ್, ಪ್ರಸೂತಿಯ ನಂತರದ ಮನೋರೋಗ (puerperal psychosis) ಇತರ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದೆ.
ಋತುಬಂಧವೆಂಬುದು (menopause) ಒಂದು ನೈಸರ್ಗಿಕ ಕ್ರಿಯೆ. ಸಾಮಾನ್ಯವಾಗಿ ಆ ಸಮಯದಲ್ಲಾಗುವ ದೈಹಿಕ ಹಾಗು ಮಾನಸಿಕ ಬದಲಾವಣೆಗಳಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ಇಂತಹ ಬದಲಾವಣೆಗಳು ಮಹಿಳೆಯ ದೈನಂದಿನ ಜೀವನಕ್ಕೆ ಅಥವಾ ಮಾನಸಿಕ ನೆಮ್ಮದಿಗೆ ತೊಂದರೆಕೊಟ್ಟಾಗ ಮಾತ್ರ ಔಷಧಿಯನ್ನು ನೀಡಬೇಕಾಗುತ್ತದೆ. ರೋಗಿಯ ವಿಶಿಷ್ಟ ಗುಣಲಕ್ಷಣಗಳ(individualisation) ಆಧಾರದ ಮೇಲೆ ಮದ್ದು ನೀಡುವುದು ಹೋಮಿಯೋಪತಿಯ ವಿಶೇಷತೆಯಾಗಿರುವುದರಿಂದ ಸಮಸ್ಯೆ ಋತುಚಕ್ರದ್ದೇ ಆಗಿದ್ದರೂ ಅವರಿಗೆ ಕೊಡುವ ಹೋಮಿಯೋ ಔಷಧಿ ಬೇರೆ ಬೇರೆಯಾಗಿರುತ್ತದೆ.
“ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ (Precaution is better than cure)” ಎಂಬ ಮಾತಿನಂತೆ ನಮ್ಮ ದೇಹವನ್ನು ಮೊದಲಿನಿಂದಲೇ ಆರೋಗ್ಯವಾಗಿಟ್ಟುಕೊಳ್ಳುವುದು ನಮ್ಮ ಕೈಯ್ಯಲ್ಲಿಯೇ ಇದೆ. ಸರಿಯಾದ ಆಹಾರ, ನಿದ್ದೆ, ವ್ಯಾಯಾಮ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದರಿಂದ ರೋಗವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಯಾವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯು ಜಾಗೃತವಾಗಿರುತ್ತದೆಯೋ ಅಂತಹವರಿಗೆ ರೋಗವು ಬಂದರೂ ಬೇಗನೆ ವಾಸಿಯಾಗುತ್ತದೆ. ಹೋಮಿಯೋಪತಿ ಔಷಧಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವೆಡೆ ಕೆಲಸ ಮಾಡುವುದರಿಂದ ದೇಹವು ನೈಸರ್ಗಿಕವಾಗಿಯೇ ಶಕ್ತಿಯುತವಾಗಿ ರೋಗವು ಕಡಿಮೆ ಅವಧಿಯಲ್ಲಿಯೇ ಗುಣವಾಗುತ್ತದೆ.