ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ನೇ ಸಾಲಿನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಶಿಕ್ಷಣ ಕಾರ್ಯಕ್ರಮ

0

ಎನ್. ಎಸ್. ಎಸ್. ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡುವ ಅದ್ಬುತ ವೇದಿಕೆ: ಡಾ. ಲಕ್ಷ್ಮೀನಾರಾಯಣ ಕೆ.ಎಸ್.

ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ನೇ ಸಾಲಿನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಶಿಕ್ಷಣ ಕಾರ್ಯಕ್ರಮವು ಮಹಾವಿದ್ಯಾಲಯದ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿ(ಸ್ವಾಯತ್ತ)ನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಎಸ್. ಹಿರಿಯ ಯೋಜನಾಧಿಕಾರಿ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ನಂತರ ‘ರಾಷ್ಟ್ರೀಯ ಸೇವಾ ಯೋಜನೆ ಎಂಬ ವೇದಿಕೆ ಮತ್ತು ವಿದ್ಯಾರ್ಥಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಪ್ರಶಿಕ್ಷಣ ಕಾರ್ಯಕ್ರಮ ನಡೆಸಿಕೊಟ್ಟರು. ಎನ್.ಎಸ್.ಎಸ್.ನ ಹುಟ್ಟು, ಬೆಳವಣಿಗೆ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿದ್ಯಾರ್ಥಿಗಳು ಯಾವ ರೀತಿ ಈ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಬಹುದು ಎಂಬುದನ್ನು ವಿವರಿಸಿದರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಓದು ಎನ್ನುವುದು ಅಂಕಕ್ಕೆ ಸೀಮಿತವಾಗುತ್ತಿದೆ. ಆದರೆ ಕಾನೂನು ವಿದ್ಯಾರ್ಥಿಗಳು ಅಂಕಕ್ಕೆ ಮಾತ್ರ ಸೀಮಿತರಾಗದೇ, ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕಾದುದು ಅನಿವಾರ್ಯವಾಗಿದೆ. ಈ ಹಿನ್ನಲೆನಲ್ಲಿ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಪಠ್ಯದ ಜೊತೆಗೆ ತನ್ನ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುತ್ತದೆ. ಎನ್.ಎಸ್.ಎಸ್. ಘಟಕದಲ್ಲಿ ನಡೆಸುವ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಯು ತೊಡಗಿಸಿಕೊಳ್ಳುವುದರಿಂದ ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಹೊಸ ಸ್ಪರ್ಶ ಕೊಡುವ ಪ್ರಮುಖ ಪಾತ್ರವಹಿಸುತ್ತದೆ ಎಂದರು. ಇದೇ ವೇಳೆ ಎನ್. ಎಸ್. ಎಸ್. ಘಟಕದ ವತಿಯಿಂದ ನಿರ್ವಹಿಸುವ ‘ಸೇವಾಬಿಂಬ’ ಎಂಬ ಭಿತ್ತಿಪತ್ರಿಕೆಯ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಖಜಾಂಚಿ ಯಶೋಧರ ಜೈನ್ ಮಾತನಾಡಿ, ಬದಲಾಗುತ್ತಿರುವ ಭಾರತದಲ್ಲಿ ಯುವಶಕ್ತಿಯ ಸದ್ಭಳಕೆಯಾದಾಗ ದೇಶದ ಅಭಿವೃದ್ಧಿಯಾಗುತ್ತಿದೆ. ಇದಕ್ಕಾಗಿ ಯುವಶಕ್ತಿಯ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಕಾನೂನು ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂತಹ ಅವಕಾಶವನ್ನು ನಮ್ಮ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ನೀಡುತ್ತದೆ. ಇದನ್ನು ಪ್ರತಿಯೊಬ್ಬರೂ ಬಳಸಿಕೊಂಡು ಪ್ರತಿಯೊಬ್ಬ ಎನ್. ಎಸ್. ಎಸ್. ಸ್ವಯಂಸೇವಕರು ದೇಶದ ಸಂಪತ್ತುಗಳಾಗಿ ರೂಪುಗೊಳ್ಳಿ ಎಂದು ಕರೆ ನೀಡಿದರು. ಗೌರವ ಉಪಸ್ಥಿತರಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಮಾತನಾಡಿ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ಎ. ಪ್ರಾಸ್ತವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀರಕ್ಷಾ, ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ ಪ್ರಣಾಮ್ಯ ಪಕಳ, ಸಂಪ್ರೀತಾ ಹಾಗೂ ಧನಿಷ್ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕ ದ್ವಿತೀಯ ಎಲ್.ಎಲ್.ಬಿ.ಯ ಪೃಥ್ವಿ ಸಾಗರ್ ಸ್ವಾಗತಿಸಿ, ಎನ್.ಎಸ್.ಎಸ್. ಸ್ವಯಂಸೇವಕಿ ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ ಅಕೃತಿ ಕೆ. ವಂದಿಸಿದರು. ಕಾರ್ಯಕ್ರಮವನ್ನು ಎನ್.ಎಸ್.ಎಸ್. ಸ್ವಯಂಸೇವಕಿ ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ ಭೂಮಿಕಾ ಬಿ. ಬಿ. ನಿರೂಪಿಸಿದರು.

LEAVE A REPLY

Please enter your comment!
Please enter your name here