ಪುತ್ತೂರು: ಸ್ವಚ್ಛ ಗ್ರಾಮ, ಸ್ವಚ್ಛ ಪೇಟೆ ಎಂಬ ಧ್ಯೇಯದೊಂದಿಗೆ ಒಳಮೊಗ್ರು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ಗ್ರಾಮ ನೈರ್ಮಲ್ಯ ಸಮಿತಿಯ ವತಿಯಿಂದ ದ.13 ರಂದು ಕುಂಬ್ರ ಪೇಟೆಯ ಹಲವು ಹೊಟೇಲ್, ಬಾರ್, ಕೋಳಿ ಫಾರಂ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ತ್ಯಾಜ್ಯ ನೀರು ಇಂಗಲು ಇಂಗುಗುಂಡಿ ಸೇರಿದಂತೆ ಅಂಗಡಿಮುಂಗಟ್ಟು ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಯಿತು. ಕೋಳಿ, ಮೀನು ಮಾಂಸ ಇತ್ಯಾದಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡುವಂತೆ ಹಾಗೇ ಒಣಕಸ, ಹಸಿ ಕಸಗಳನ್ನು ಪಂಚಾಯತ್‌ನ ಸ್ವಚ್ಛ ವಾಹಿನಿಗೆ ನೀಡುವಂತೆ ತಿಳಿಸಲಾಯಿತು.
ಕಡ್ಡಾಯ ಇಂಗುಗುಂಡಿ ಮಾಡಲು ಸೂಚನೆ
ಬೇಸಿಗೆ ಕಾಲದಲ್ಲಿ ಕೊಳಚೆ ನೀರಲ್ಲಿ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗುವ ಅಪಾಯವಿರುವುದರಿಂದ ಪ್ರತಿ ಹೊಟೇಲ್‌ನವರು ತಮ್ಮಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ರಸ್ತೆ ಬದಿಗೆ ಬಿಡದೆ ಕಡ್ಡಾಯವಾಗಿ ಇಂಗುಗುಂಡಿ ರಚನೆ ಮಾಡಿ ಅದಕ್ಕೆ ಬಿಡುವಂತೆ ಸೂಚಿಸಲಾಯಿತು. ಯಾವ ಹೊಟೇಲ್, ಮಾಂಸದಂಗಡಿಗಳಲ್ಲಿ ಇಂಗುಗುಂಡಿ ಇಲ್ಲವೋ ಅವರಿಗೆ ತಕ್ಷಣವೇ ಇಂಗುಗುಂಡಿ ರಚನೆ ಮಾಡಲು ತಿಳಿಸಲಾಯಿತು. ಇಂಗುಗುಂಡಿ ಇಲ್ಲದೇ ಕೊಳಚೆ ನೀರನ್ನು ರಸ್ತೆ ಬದಿಯ ಚರಂಡಿಗೆ ಬಿಡುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಮನ್ಮಥ ಅಜಿರಂಗಳರವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಅಧ್ಯಕ್ಷೆ ರೇಖಾ ಯತೀಶ್, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ವಿದ್ಯಾಶ್ರೀ, ಶಶಿಕಲಾ, ಪ್ರಾಥಮಿಕ ಆರೋಗ್ಯ ಸಹಾಯಕಿ ಪ್ರಮೀಳಾ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಗಿರಿಜಾ, ಶಶಿಕಲಾ, ಸರೋಜಿನಿ ಉಪಸ್ಥಿತರಿದ್ದರು.
ಹೊಟೇಲ್,ಬಾರ್,ಮಾಂಸದಂಗಡಿಗಳಿಗೆ ಭೇಟಿ
ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯವರು ಪೇಟೆಯ ವಿವಿಧ ಹೊಟೇಲ್, ಬಾರ್, ಕೋಳಿ, ಮೀನು ಇತ್ಯಾದಿ ಮಾಂಸದಂಗಡಿಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ರಸ್ತೆ ಬದಿಗಳಲ್ಲಿ ಕೊಳಚೆ ನೀರು ಹರಿದು ಹೋಗುತ್ತಿರುವ ಬಗ್ಗೆ ಸಂಬಂಧಪಟ್ಟವರಲ್ಲಿ ವಿಚಾರಿಸಿ ನೀರು ಇಂಗಲು ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಕಸ,ಕಡ್ಡಿ ಇತ್ಯಾದಿಗಳನ್ನು ರಾಶಿ ಹಾಕದಂತೆ ಸೂಚನೆ ನೀಡಲಾಯಿತು. ಪ್ರತಿಯೊಬ್ಬ ವರ್ತಕರು ಕೂಡ ಪಂಚಾಯತ್‌ನೊಂದಿಗೆ ಸಹಕರಿಸುವ ಮೂಲಕ ಸ್ವಚ್ಚಗ್ರಾಮವನ್ನಾಗಿ ಮಾಡುವಂತೆ ಕೇಳಿಕೊಳ್ಳಲಾಯಿತು.
‘ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ವತಿಯಿಂದ ಪೇಟೆಯಲ್ಲಿ ಪರಿಶೀಲನೆ ಮಾಡಲಾಯಿತು. ಕೊಳಚೆ ನೀರನ್ನು ರಸ್ತೆ ಬದಿ ಚರಂಡಿಗೆ ಬಿಡದೆ ಇಂಗುಗುಂಡಿ ನಿರ್ಮಾಣದೊಂದಿಗೆ ಸ್ವಚ್ಛತೆಯನ್ನು ಕಾಪಾಡುವಂತೆ ತಿಳಿಸಲಾಯಿತು. ಗ್ರಾಮದ ಸ್ವಚ್ಛತೆಗೆ ವರ್ತಕರು, ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ