ಮೂಲ ಸೌಕರ್ಯ ಕಲ್ಪಿಸದ ಜಾಗಕ್ಕೆ ಹೋಗೋದಾದ್ರೂ ಹೇಗೆ? – ಕೊರಗ ಜನಾಂಗದ ತಾಲೂಕು ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಶ್ನೆ

0

ಪುತ್ತೂರು: ಮೂಲ ಸೌಕರ್ಯ ಕಲ್ಪಿಸದೆ ಆದಿವಾಸಿ ಕೊರಗ ಜನಾಂಗದವರಿಗೆ ಮೀಸಲಿಟ್ಟ ಜಾಗಕ್ಕೆ ಹೋಗುವುದಾದರೂ ಹೇಗೆ?, ಶೌಚಾಲಯ ನಿರ್ಮಾಣಕ್ಕೆ ರೂ.1 ಲಕ್ಷ ಕೊಡುವಾಗ ರೂ.3 ಲಕ್ಷದಲ್ಲಿ ಮನೆ ನಿರ್ಮಾಣ ಮಾಡುವುದಾದರೂ ಹೇಗೆ?, ನಮಗೆ ಮೀಸಲಿಟ್ಟ ಅನುದಾನದಲ್ಲಿ ಬೇರೆ ಕಡೆ ಕಾಮಗಾರಿ ನಡೆಸಿದ್ದು ಯಾಕೆ?, ಎಂದು ಆದಿವಾಸಿ ಪಂಗಡಕ್ಕೆ ಸೇರಿದ ಕೊರಗ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಸಮುದಾಯದ ಸದಸ್ಯರು ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ಪ್ರಶ್ನೆ ಮಾಡಿದರು. ಸರಕಾರದ ಪ್ರೋತ್ಸಾಹಧನ ಸಮುದಾಯದ ಎಲ್ಲ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂದೂ ಪ್ರಸ್ತಾಪವಾಯಿತು. 2 ವರ್ಷಗಳ ಬಳಿಕ ನಡೆದ ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳಿಗೆ ತಹಸೀಲ್ದಾರ್ ಸಮರ್ಪಕವಾಗಿ ಸಲಹೆ ಸೂಚನೆ ನೀಡಿದರು.


ಆದಿವಾಸಿ ಕೊರಗ ಜನಾಂಗದ ತಾಲೂಕು ಮಟ್ಟದ ಅಭಿವೃದ್ಧಿ ಸಮಿತಿಗಳ ಸಭೆ ತಾ.ಪಂ ಸಭಾಂಗಣದಲ್ಲಿ ಡಿ.20ರಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊರಗರ ಸಮುದಾಯಕ್ಕೆ ಮೀಸಲಿಟ್ಟ ಜಾಗಕ್ಕೆ ಕೊರಗರು ಹೋಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಕೃಷಿ ಮಾಡಬೇಕಾದರೂ ಮೂಲಭೂತ ಸೌಕರ್ಯ ಒದಗಿಸಬೇಕು.ಆದರೆ ಅಲ್ಲಿ ಗಡಿ ಗುರುತು ಕೂಡಾ ಆಗಿಲ್ಲ.ಯಾವ ಜಾಗ ಎಲ್ಲಿದೆ ಎಂದು ಗೊತ್ತಿಲ್ಲ. ಭೂಮಿ ಕೊಟ್ಟು ಹತ್ತು ಹದಿನೈದು ವರ್ಷ ಆಗಿದೆ. ಇಲ್ಲಿನ ತನಕ ಪ್ಲಾಟಿಂಗ್, ಗಡಿಗುರುತು ಆಗಿಲ್ಲ. ಬಜತ್ತೂರಿನ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಂದರ್ಭ ತೆರುವುಗೊಂಡ ಮನೆಗಳವರಿಗೆ ಇನ್ನೂ ಸರಿಯಾದ ವ್ಯವಸ್ಥೆಯಾಗಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ಕೊರಗರ ಸಂಘಟಕ ಪ್ರಕಾಶ್ ಕೊಯಿಲ ಅವರು ಪ್ರಸ್ತಾಪಿಸಿದರು.ಕೊರಗ ಸಮುದಾಯದ ರಾಜ್ಯಮಟ್ಟದ ಸಂಯೋಜಕ ಉಡುಪಿಯ ಪುತ್ರನ್ ಅವರು ಧ್ವನಿಗೂಡಿಸಿದರು.


ಅನುದಾನ ಬೇರೆ ಕಡೆ ವಿನಿಯೋಗ:
ಎಸ್ಸಿಎಸ್ಟಿಯಲ್ಲಿರುವ ಅನುದಾನದಲ್ಲಿ ನಮ್ಮಲ್ಲಿ ಆಗುವ ಕೆಲಸವನ್ನು ಬೇರೆ ಕಡೆ ಮಾಡಿಸುತ್ತಾರೆ ಎಂದು ಸುರೇಶ್ ಅವರು ಆರೋಪಿಸಿದರು. ಉತ್ತರಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು, ಈ ಕುರಿತು ನಮಗೆ ಮಾಹಿತಿ ನೀಡಿ ಎಂದರು.ನಮಗೆ ಪತ್ರದ ಮೂಲಕ ಅಥವಾ ವಾಟ್ಸಪ್ ಮೂಲಕ ಮಾಹಿತಿ ನೀಡಿ ಎಂದ ತಹಸಿಲ್ದಾರ್, ನಮಗೆ ಅದು ಗೊತ್ತಾಗುವುದೇ ಕಾಮಗಾರಿ ಆದ ಬಳಿಕ ಎಂದು ತಿಳಿಸಿದರು.


ಕೊರಗರಿಗೆ ಮೂಲಭೂತ ಸೌಕರ್ಯ ಒದಗಿಸಿ
: ಶೇ.25ರ ಅಡಿಯಲ್ಲಿ ಕೊರಗೆ ಯೋಜನೆಗೆಂದು ಮೂರನೇ ಒಂದಂಶವನ್ನು ಕೊರಗ ಸಮುದಾಯದ ಮೂಲಭೂತ ಸೌಕರ್ಯವಾದ ಮನೆಯ ಬಾಗಿಲು, ಮನೆಯೊಳಗೆ ಕೂತುಕೊಳ್ಳಲು ಚಯರ್ ಇಂತಹ ಅಗತ್ಯಕ್ಕೆ ಕ್ರಿಯಾಯೋಜನೆ ಮಾಡಬೇಕೆಂದು ಪ್ರಕಾಶ್ ಕೊಯಿಲ ಪ್ರಸ್ತಾಪಿಸಿದರು. ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಅವರು 2014ರಿಂದಲೇ ನಮ್ಮ ಇಲಾಖೆಯಿಂದ ಶೌಚಾಲಯ ದುರಸ್ತಿ ಸಹಿತ ಮೂರು ವಿವಿಧ ಕಾಮಗಾರಿಗಳಿಗೆ ಅನುದಾನ ಇದೆ.ಅದನ್ನು ಸದ್ಬಳಕೆ ಮಾಡಬಹುದು ಎಂದರು.ಮನೆ ದುರಸ್ತಿ ಕುರಿತು ಗ್ರಾ.ಪಂ.ನಲ್ಲಿ ಬೇಡಿಕೆ ಇಡಿ ಎಂದು ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ತಿಳಿಸಿದರು.


ಆರ್ ಇಜ್ಜೆರ್ ಮಾರೆ ಎಲ್ಲೆ ಬಲೆ!: ಬಹುತೇಕ ಇಲಾಖೆ ಕಚೇರಿಗೆ ಹೋದಾಗ ಅಥವಾ ಗ್ರಾ.ಪಂ ಕಚೇರಿಗೆ ಹೋದಾಗ ಅಧಿಕಾರಿಗಳು ಇದ್ದರೂ ‘ಆರ್ ಇಜ್ಜೆರ್ ಮಾರೆ ಎಲ್ಲೆ ಬಲೆ’ ಎಂದು ಹೇಳುವ ಮೂಲಕ ನಮ್ಮನ್ನು ಕುಣಿಸುವ ಕೆಲಸ ಮಾಡುತ್ತಾರೆ.ನಮಗೆ ಅರಿವು ಇಲ್ಲದಾಗ ನಮ್ಮನ್ನು ಸುತ್ತಾಡಿಸಬೇಡಿ ಎಂದು ಸಮುದಾಯದ ಸದಸ್ಯರೊಬ್ಬರು ತಮಗಾದ ನೋವನ್ನು ತೋಡಿಕೊಂಡರು. ಆ ರೀತಿ ನಿಮಗೆ ಹೇಳಿದವರ ಬಗ್ಗೆ ನಮಗೆ ದೂರು ನೀಡಿ. ನಾನು ವಿಚಾರಣೆ ಮಾಡುತ್ತೇನೆ ಎಂದು ತಹಶೀಲ್ದಾರ್ ಹೇಳಿದರು.


ರೂ.3.5 ಲಕ್ಷಕ್ಕೆ ಆಗದ ಮನೆ-ಹಂಚಿನ ಮನೆಗೆ ನಿರ್ಣಯ: ಇವತ್ತು ಶೌಚಾಲಯ ನಿರ್ಮಾಣ ಮಾಡಲು ರೂ.1 ಲಕ್ಷ ಅನುದಾನವಿದೆ.ಆದರೆ ಕೊರಗ ಸಮುದಾಯದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ರೂ.3.5 ಲಕ್ಷ ಕೊಡುತ್ತಾರೆ.ಆ ಹಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವೇ?. ನಮ್ಮ ಮನೆ ಪೂರ್ಣ ಆಗಿಲ್ಲ ಎಂದು ಮಹಿಳೆಯೊಬ್ಬರು ಪ್ರಸ್ತಾಪಿಸಿದರು.ಧ್ವನಿಗೂಡಿಸಿದ ಪುತ್ರನ್ ಅವರು ಕಡಿಮೆ ಅನುದಾನದಲ್ಲಿ ಸ್ಲ್ಯಾಬ್ ಮನೆ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ಸೋರುವುದು ಗ್ಯಾರೆಂಟಿ. ಈ ಅನುದಾನವನ್ನು ಏರಿಸಬೇಕು.ಅಥವಾ ಹಂಚಿನ ಮನೆ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು ನಿರ್ಣಯ ಮಾಡಿ ಎಂದರು.ಸರಕಾರಕ್ಕೆ ನಿರ್ಣಯ ಪತ್ರಕ್ಕೆ ತಹಸಿಲ್ದಾರ್ ತಿಳಿಸಿದರು. ಕೊರಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಅದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಬರುವ ಪ್ರೋತ್ಸಾಹಧನ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಈ ಕುರಿತು ಶಾಲೆಯ ಮೂಲಕ ಕೊರಗ ಸಮುದಾಯದ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರಿಗೆ ಪ್ರೋತ್ಸಾಹ ಧನ ಸಿಗುವಂತೆ ವ್ಯವಸ್ಥೆ ಮಾಡುವಂತೆ ಕೊರಗ ಸಮುದಾಯದ ಸಂಘಟಕ ಪುತ್ರನ್ ತಿಳಿಸಿದರು.ಕೊರಗ ಸಮುದಾಯದ ರಾಜ್ಯಮಟ್ಟದ ಸಂಯೋಜಕ ಉಡುಪಿಯ ಪುತ್ರನ್, ಸುರೇಶ್, ತನಿಯ ಒಳತ್ತಡ್ಕ ಮತ್ತಿತರರು ಭಾಗವಹಿಸಿದ್ದರು.ತಹಸೀಲ್ದಾರ ಪುರಂದರ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಽಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಾರಸುದಾರರಿಲ್ಲದ ಜಾಗವನ್ನು ಹೆಸರು ಬದಲಾವಣೆ ಮಾಡಲು ಅಗತ್ಯ ದಾಖಲೆಗಳ ಪರಿಶೀಲನೆ ಕ್ರಮ ತೆಗೆದುಕೊಳ್ಳಲಾಗುವುದು.ಜಮೀನು ಹೆಸರು ಬದಲಾವಣೆಯ ಸಂದರ್ಭ ಪರಿಶೀಲನೆ ಅಗತ್ಯವಿದೆ.ಸರ್ಕಾರಿ ಜಾಗವಾಗಿದ್ದರೆ, ಹಕ್ಕು ಪತ್ರ ತಕ್ಷಣ ನೀಡುವ ಕಾರ್ಯ ಮಾಡಲಾಗುವುದು.ಸರ್ಕಾರದ ಗ್ಯಾರೆಂಟಿಗಳು ಸಿಗದೇ ಹೋದರೆ ಮಾಹಿತಿ ನೀಡಿ, ತಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು-
ಪುರಂದರ ಹೆಗ್ಡೆ
ತಹಸೀಲ್ದಾರ್ ಪುತ್ತೂರು

ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಬೇಡಿಕೆ ಸಲ್ಲಿಸಿ ಕ್ರಮ ಆಗದಿದ್ದರೆ, ಮಾಹಿತಿಯನ್ನು ನೀಡಿದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.ಸಮುದಾಯಕ್ಕೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಹಾಯ ನೀಡುವಂತೆ ಸರ್ಕಾರದ ಆದೇಶ ಇದ್ದು, ಅಗತ್ಯವಿರುವವರ ಮಾಹಿತಿ ನೀಡಿದರೆ ವ್ಯವಸ್ಥೆ ಮಾಡಲಾಗುವುದು. ಪಂಚಾಯಿತಿಯಿಂದ ಉಚಿತ ನೀರು ಎಂಬುದು ರಾಜ್ಯದ ಎಲ್ಲೂ ಜಾರಿಯಲ್ಲಿಲ್ಲ-
ನವೀನ್ ಭಂಡಾರಿ
ಕಾಯನಿರ್ವಾಹಕ ಅಧಿಕಾರಿ ತಾ.ಪಂ

LEAVE A REPLY

Please enter your comment!
Please enter your name here