ಬುದ್ದಿವಂತರಾದ ನಾವು ದಡ್ಡರಾಗುತ್ತಿದ್ದೇವಾ….?! ಆರ್‌ಪಿಸಿ ಆನ್‌ಲೈನ್ ಹಣ ಹೂಡಿಕೆಯಲ್ಲಿ ನಡೆಯಿತೇ ಮೋಸ..!?

0

ಹಣ ಹಿಂಪಡೆಯಲಾಗದೆ ಜನ ಕಂಗಾಲು…! ಸಾವಿರಾರು ರೂಪಾಯಿ ಗುಳುಂ…!

✍️ ಸಿಶೇ ಕಜೆಮಾರ್

ಪುತ್ತೂರು: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋದು ಹಳೆಯ ಗಾದೆ ಮಾತು ಹಾಗಂತ ಅದು ಇಂದಿಗೂ ಸತ್ಯ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹಣ ಸಂಪಾದನೆ ಮಾಡುವುದಕ್ಕಾಗಿಯೇ ಬದುಕಿದ್ದೇವೋ ಅನ್ನೋ ಮಟ್ಟಕ್ಕೆ ತಲುಪಿ ಬಿಟ್ಟಿದ್ದೇವೆ. ಒಂದು ಕಡೆಯಲ್ಲಿ ಹಣ ಸಂಪಾದನೆಯ ಬೆನ್ನು ಹತ್ತಿ ಹೋದರೆ ಇನ್ನೊಂದು ಕಡೆಯಲ್ಲಿ ಮೋಸ ಹೋಗಿ ಎಲ್ಲವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತು ಬಿಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೋಸ ನಮ್ಮ ಜೀವನದ ಒಂದು ಭಾಗವಾಗಿಯೇ ಹೋಗಿದೆ. ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಾವು ಆನ್‌ಲೈನ್ ಮೂಲಕ ಮೋಸ ಹೋಗುತ್ತಲೇ ಇರುತ್ತೇವೆ. ಲಕ್ಷಾಂತರ ರೂಪಾಯಿ ಕಳೆದುಕೊಂಡ ಮೇಲೆ ಪಶ್ಚತ್ತಾಪ ಪಡುತ್ತೇವೆ. ಬಿನ್ ಕಾಯಿನ್‌ನಂತಹ ಒಂದಷ್ಟು ಮೋಸ ಮಾಡುವ ಆಪ್‌ಗಳು ಬಂದು ಹೋದ ಮೇಲೆ ಇದೀಗ ‘ಆರ್‌ಪಿಸಿ’ ಎಂಬ ಹಣ ಹೂಡಿಕೆಯ ಹೊಸ ಆಪ್ ಜನರಿಗೆ ಪಂಗನಾಮ ಹಾಕಲು ತಯಾರಾಗಿದೆ. ಇಷ್ಟಕ್ಕೂ ಈ ಆರ್‌ಪಿಸಿ ಎಂದರೇನು? ಜನರನ್ನು ಇದು ಹೇಗೆ ಮೋಸ ಮಾಡಿದೆ? ಎಂಬ ಬಗ್ಗೆ ವಿಚಾರಿಸುತ್ತಾ ಹೋದರೆ ಒಂದು ದೊಡ್ಡ ವ್ಯಥೆಯ ಕಥೆ ತೆರೆದುಕೊಳ್ಳುತ್ತದೆ.


ಮೂಲತಃ ಇದೊಂದು ಚೈನ್‌ಲಿಂಕ್ ಬ್ಯುಸಿನೆಸ್ ಸಿಸ್ಟಮ್ ಆಗಿದೆ. ಈ ಆರ್‌ಪಿಸಿ( ರೆಕಾರ್ಡೆಂಡ್ ಫಿಕ್ಚರ್ ಕಂಪೆನಿ) ಎಂಬುದು ಚೈನಾ ನಿರ್ಮಿತ ಆಪ್ ಆಗಿದ್ದು ಪ್ರಸ್ತುತ ಸಿಂಗಾಪುರದಿಂದ ಈ ಅಪ್‌ನ ನಿರ್ವಹಣೆ ನಡೆಯುತ್ತಿದೆ ಎನ್ನಲಾಗಿದೆ. ಇದರಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಹಣ ಹಿಂಪೆಡೆಯುವುದು ಅಪ್‌ನಲ್ಲಿ ಹೇಳಿದಂತೆ ಬಹಳ ಸುಲಭವಾಗಿದೆ. ನಾವು ಮಾಡಬೇಕಾಗಿರುವುದು ಬರೀ ಸಿಂಪಲ್. ಪ್ಲೇ ಸ್ಟೋರ್‌ನಲ್ಲಿ ಹೋಗಿ ಆರ್‌ಪಿಸಿ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡು ಅದರಲ್ಲಿ ಬರುವ ನಿಯಮಗಳನ್ನು ಎಸೆಪ್ಟ್ ಮಾಡಿಕೊಂಡು ಹಣ ಹೂಡಿಕೆ ಮಾಡಬೇಕಾಗುತ್ತದೆ. ಕನಿಷ್ಠ 2 ಸಾವಿರದಿಂದ ಸಾವಿರಾರು ರೂಪಾಯಿಗಳ ತನಕ ಹಣ ಹೂಡಿಕೆ ಮಾಡಬಹುದಾಗಿದೆ. ಹಾಗದರೆ ನಾವು ಮಾಡಿದ ಹಣಕ್ಕೆ ಆಪ್‌ನವರು ಯಾವ ರೀತಿಯಲ್ಲಿ ನಮಗೆ ಬೆನಿಫಿಟ್ ಮಾಡಿಕೊಡುತ್ತಾರೆ ಎಂದು ನೋಡಿದರೆ ಅದು ಕೂಡ ಬಹಳ ಸುಲಭವಾಗಿದೆ. ಹಣ ಹೂಡಿಕೆ ಮಾಡಿದ ಮೇಲೆ ಆಪ್‌ನಲ್ಲಿ ಕೆಲವೊಂದು ವಿಡಿಯೋಗಳನ್ನು, ಜಾಹೀರಾತು, ಟ್ರೈಲರ್ ಇತ್ಯಾದಿಗಳನ್ನು ಕಳುಹಿಸಿಕೊಡಲಾಗುತ್ತದೆ. ಈ ವಿಡಿಯೋಗಳನ್ನು ವೀಕ್ಷಣೆ ಮಾಡಿ ಅದಕ್ಕೊಂದು ಲೈಕ್ ಕೊಟ್ಟರೆ ಅಲ್ಲಿಗೆ ಗೇಮ್ ಫಿನಿಶ್, ನಮ್ಮ ಅಕೌಂಟ್‌ಗೆ ಸಾವಿರಾರು ರೂಪಾಯಿ ಬಂದು ಸೇರುತ್ತದೆ.
ಈ ಚೈನ್ ಸಿಸ್ಟಮ್‌ಗೆ ನಾವು ಮಾತ್ರ ಸೇರುವುದಲ್ಲ ನಾವು ನಮ್ಮವರನ್ನು ಕೂಡ ಸೇರಿಸಿ ಗುಂಡಿಗೆ ತಳ್ಳಬಹುದಾಗಿದೆ. ಹಾಗೇ ನಾವು ಜನ ಸೇರಿಸಿದರೆ ನಮಗೆ ಆಪ್‌ನಿಂದ ಹೆಚ್ಚುವರಿ ಬೆನಿಫಿಟ್ ದೊರೆಯುತ್ತದೆ. ಇಷ್ಟಕ್ಕೂ ಹಣ ಹೂಡಿದವರಿಗೆ ಹಣ ಹಿಂಪಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ? ನಾವು ಹೂಡಿಕೆ ಮಾಡಿದ ಹಣವನ್ನು ತಿರುಗಿ ನಮ್ಮ ಅಕೌಂಟ್‌ಗೆ ಸ್ವಲ್ಪ ಸ್ವಲ್ಪವೇ ಹಾಕಿ ನಮ್ಮನ್ನು ಮೊದಲಿಗೆ ನಂಬಿಸುತ್ತಾರೆ. ಹೆಚ್ಚುವರಿ ಸಂಪಾದನೆ ಮಾಡಿದ ಹಣ ಆಪ್‌ನಲ್ಲಿ ತೋರಿಸುವ ನಮ್ಮ ಹೆಸರಿನ ಅಕೌಂಟ್‌ನಲ್ಲಿ ಜಮೆಯಾಗುತ್ತದೆ. ಹೀಗೆ ಜಮೆಯಾದ ಹಣ ಕೆಲವರದ್ದು ಲಕ್ಷಾಂತರ ರೂಪಾಯಿಗಳು ಆಗಿವೆ. ಕೆಲವು ಮಂದಿ 20 ಸಾವಿರಕ್ಕೂ ಹೆಚ್ಚು ಹಣವನ್ನು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೆಚ್ಚು ಹಣ ಹೂಡಿಕೆ ಮಾಡಿದವರ ಆಪ್ ಅಕೌಂಟ್‌ನಲ್ಲಿ ಹೆಚ್ಚು ಹಣ ಜಮೆಯಾಗಿದೆ. ಆರ್‌ಪಿಸಿ ಆಸಕ್ತರ ಸಮಾವೇಶಗಳು ಕೂಡ ನಡೆದಿದೆ. ಈಗ ಈ ಜಮೆಯಾದ ಹಣವನ್ನು ಪಡೆಯಲು ಆಪ್ ಕೆಲವೊಂದು ಷರತ್ತುಗಳನ್ನು ನೀಡಿದೆ ಎನ್ನಲಾಗಿದೆ. ಗ್ರಾಹಕರು ಹಣವನ್ನು ಪಡೆಯಬೇಕಾದರೆ ಆಕ್ಟೀವೇಶನ್ ಫೀಸ್ ಅಂತ ಆಪ್ ತೋರಿಸಿದ ಹಣವನ್ನು ಪಾವತಿ ಮಾಡಬೇಕಾಗಿದೆ. ಅಲ್ಲದೆ ಹಣ ಪಾವತಿ ಮಾಡಿದ ಮೇಲೆ ತಮ್ಮ ಆಧಾರ್ ಕಾರ್ಡ್ ಕೂಡ ವೆರಿಪಿಕೇಶನ್ ಮಾಡಬೇಕಾಗಿದೆ. ಜನ ಮೋಸ ಹೋಗಿರುವುದು ಇಲ್ಲೇ ಆಗಿದೆ.


ಆಪ್‌ನ ನಮ್ಮ ಅಕೌಂಟ್‌ನಲ್ಲಿರುವ ಹಣವನ್ನು ವಿದ್‌ಡ್ರಾ ಮಾಡಿಸಿಕೊಳ್ಳಲು ಆಪ್ ಹೇಳಿದ ಸಾವಿರಾರು ರೂಪಾಯಿಗಳನ್ನು ಗ್ರಾಹಕರು ಪೇ ಮಾಡಿದ್ದಾರೆ. ಪೇ ಮಾಡಿದ ಮೇಲೆ ನೋಡಿದರೆ ಮೋಸ ಹೋದ ಅನುಭವ ಜನರಿಗಾಗಿದೆ. ಅವರು ಹಣ ಪೇ ಮಾಡಿದ ಮರುಕ್ಷಣವೇ ಆಪ್‌ನ ಅಕೌಂಟ್ ಮಾಯವಾಗಿದೆ ಎನ್ನುತ್ತಾರೆ ಮೋಸ ಹೋದವರು. ಒಟ್ಟಿನಲ್ಲಿ ಮತ್ತೊಂದು ಹಣ ಹೂಡಿಕೆಯ ನಕಲಿ ಆಪ್ ಜನರನ್ನು ಮಂಗ ಮಾಡಿದೆ ಎಂದರೆ ತಪ್ಪಾಗಲಾರದು. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಯಾಕೆಂದರೆ ನಾವೆಲ್ಲರೂ ಹಣದ ಹಿಂದೆ ಬಿದ್ದು ದಡ್ಡರಾಗಿದ್ದೇವೆ.

ಪುತ್ತೂರಿನಲ್ಲೂ ನೂರಾರು ಮಂದಿಗೆ ಮೋಸ
ಈ ರೆಕಾರ್ಡೆಂಡ್ ಫಿಕ್ಟರ್ ಕಂಪೆನಿ(ಆರ್‌ಪಿಸಿ)ಯ ನಕಲಿ ಆಪ್ ಅನ್ನು ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದೇವೆ ಎಂದುಕೊಂಡ ನೂರಾರು ಮಂದಿ ಪುತ್ತೂರಿನಲ್ಲೂ ಇದ್ದಾರೆ ಎನ್ನಲಾಗಿದೆ. ಇದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬುದ್ದಿವಂತರೇ ಅದರಲ್ಲೂ ಮಹಿಳೆಯರು ಸೇರಿದಂತೆ ಬೇರೆ ಬೇರೆ ಹುದ್ದೆಯಲ್ಲಿರುವವರೇ ಇಂತಹ ಸ್ಕಾಮ್‌ಗೆ ಒಳಗಾಗಿ ಮೋಸ ಹೋಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಮೊದಲು ಕೂಡ ಬಿನ್ ಕಾಯಿನ್‌ನಂತಹ ಆಪ್‌ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದವರಲ್ಲಿ ಕೂಡ ಹೆಚ್ಚು ಓದಿದವರೇ ಆಗಿರುವುದು ವಿಶೇಷ. ಹಾಗಾದರೆ ನಮಗೆ ಬುದ್ದಿ ಬರೋದಾದರೂ ಯಾವಾಗ…!?

ಸಿನಿಮಾ ಟ್ರೈಲರ್ ತೋರಿಸಿಯೇ ಮೋಸ ಮಾಡಿದ್ರಾ…?
ಈ ಆರ್‌ಪಿಸಿ ಬಹಳ ಸುಲಭದಲ್ಲಿ ಹಣ ಮಾಡಬಹುದಾದ ಒಂದು ಗೇಮ್. ಇದರಲ್ಲಿ ನೀವು 2 ಸಾವಿರದಿಂದ 18 ಸಾವಿರ ಅದಕ್ಕಿಂತಲೂ ಹೆಚ್ಚು ಹಣ ಹೂಡಿಕೆ ಮಾಡಬಹುದಾಗಿದೆ. ನೀವು 6 ಸಾವಿರ ರೂ.ಹೂಡಿಕೆ ಮಾಡಿದರೆ ದಿನಕ್ಕೆ 200 ರೂಪಾಯಿ ಲಾಭ ಬರುತ್ತೆ ಅದೇ 18 ಸಾವಿರ ಹೂಡಿಕೆ ಮಾಡಿದರೆ ದಿನಕ್ಕೆ 650 ರೂಪಾಯಿ ಬರುತ್ತದೆ. ವಾರದ ಪ್ರತಿ ಬುಧವಾರ ವ್ಯಾಲೆಟ್‌ನಲ್ಲಿದ್ದ ಹಣ ಅಕೌಂಟ್‌ಗೆ ಬೀಳುತ್ತೆ. ನೀವು ಮಾಡಬೇಕಾಗಿರುವುದು ಇಷ್ಟೆ ಅವರು ಆಪ್‌ನಲ್ಲಿ ಹಾಕುವ ವಿಡಿಯೋ ಲಿಂಕ್‌ಗಳನ್ನು ಓಪನ್ ಮಾಡಿ ನೋಡಬೇಕು. 6 ಸಾವಿರ ಹೂಡಿಕೆದಾರರಿಗೆ ದಿನಕ್ಕೆ 10 ವಿಡಿಯೋ, 18 ಸಾವಿರ ಹೂಡಿಕೆದಾರರಿಗೆ ದಿನಕ್ಕೆ ೨೫ ವಿಡಿಯೋ ಲಿಂಕ್ ಹಾಕುತ್ತಾರೆ. ಅಂತೂ ಇಂತೂ ಸಿನಿಮಾ ಟ್ರೈಲರ್ ವಿಡಿಯೋಗಳನ್ನು ಹಾಕಿ ಕೊನೆಗೂ ಪಂಗನಾಮ ಹಾಕಿಯೇ ಬಿಟ್ಟರು ಅನ್ನುತ್ತಾರೆ ಹಣ ಕಳೆದುಕೊಂಡ ಜನರು.

LEAVE A REPLY

Please enter your comment!
Please enter your name here