ಕಡಬ: ಕುಂತೂರುಪದವು ಸಂತಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂದಾಜು 4.35 ಲಕ್ಷ ರೂ.ವೆಚ್ಚದಲ್ಲಿ ಮೂರು ತರಗತಿಗಳಿಗೆ ಅಳವಡಿಸಿರುವ ’ಸ್ಮಾರ್ಟ್ಕ್ಲಾಸ್’ ಉದ್ಘಾಟನೆ ಜ.4ರಂದು ನಡೆಯಿತು.
ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಪ್ರಗತಿಪರ ಕೃಷಿಕರಾದ ವಾಸಪ್ಪ ಗೌಡ ಹಾಗೂ ಸುಬ್ರಾಯ ಗೌಡ ಕೆಮ್ಮಣ್ಣು ಅವರು ’ಸ್ಮಾರ್ಟ್ಕ್ಲಾಸ್’ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಂತರಾಮ ಓಡ್ಲ ಅವರು, ಇದೊಂದು ವಿದ್ಯಾರ್ಥಿಗಳಿಗೆ ದೊರೆತಿರುವ ಅವಕಾಶ. ಇದರ ಲಾಭವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯವೂ ಉತ್ತಮವಾಗಲಿದೆ ಎಂದು ಹೇಳಿದ ಅವರು, ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆ ಕಡಬ ತಾಲೂಕಿನಲ್ಲಿ ಅತೀ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು, ಪೋಷಕರು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ. ಎಲ್ಲದಕ್ಕೂ ದೃಢಸಂಕಲ್ಪ, ಸಹನೆ ಮುಖ್ಯ ಎಂದರು.
ರೆ.ಫಾ.ನಿತಿನ್ ಮ್ಯಾಥ್ಯು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ವಿ.ಐ.ಅಬ್ರಹಾಂ ಅವರು ಸಮಾರಂಭ ಉದ್ಘಾಟಿಸಿದರು. ನಿವೃತ್ತ ಮುಖ್ಯಶಿಕ್ಷಕ ತಮ್ಮಯ್ಯ ಗೌಡ, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಕೋಶಾಧ್ಯಕ್ಷ ಬಾಲಚಂದ್ರ ಮುಚ್ಚಿಂತ್ತಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ಕೇವಳ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲೆಯ ಮುಖ್ಯಶಿಕ್ಷಕ ಹರಿಶ್ಚಂದ್ರ ಅವರು, ನವೆಂಬರ್ ತಿಂಗಳಿನಲ್ಲಿ ಎಲ್ಲರ ಸಹಕಾರದಲ್ಲಿ ಕಡಬ ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಈ ಸಮ್ಮೇಳನದ ನೆಪದಲ್ಲಿ ಊರಿನ ಜನರೆಲ್ಲರೂ ಶಾಲೆಯಲ್ಲಿ ಒಟ್ಟು ಸೇರುವಂತೆ ಆಗಿದೆ. ಗುಡಿಸಲಿನಲ್ಲಿ ಆರಂಭಗೊಂಡ ಶಾಲೆ ಈಗ ಒಳ್ಳೆಯ ಕಟ್ಟಡವನ್ನು ಹೊಂದಿದೆ. ಹಲವರ ತ್ಯಾಗ, ಶ್ರಮದ ಫಲವಾಗಿ ವಿದ್ಯಾಸಂಸ್ಥೆ ಬೆಳೆದಿದೆ. ಎಂಆರ್ಪಿಎಲ್ನವರ ಅನುದಾನದಲ್ಲಿ ಒಳ್ಳೆಯ ಕಟ್ಟಡ ಆಗಿದೆ. ಆಡಳಿತ ಮಂಡಳಿಯವರು ಅಧ್ಯಾಪಕರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
4ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಶಾಲಾ ವಾರ್ಷಿಕೋತ್ಸವಕ್ಕಾಗಿ ದಾನಿಗಳು ನೀಡಿರುವ ದೇಣಿಗೆಯಲ್ಲಿ ಉಳಿಕೆಯಾದ ಮೊತ್ತದಲ್ಲಿ 4.35 ಲಕ್ಷ ರೂ.ವೆಚ್ಚದಲ್ಲಿ ಮೂರು ತರಗತಿಗಳಿಗೆ ಅನುಕೂಲವಾಗುವಂತೆ ಸ್ಮಾರ್ಟ್ ಬೋರ್ಡ್ ಖರೀದಿಸಲಾಗಿದೆ. ಶಾಲೆಗೆ ಅವಶ್ಯವಿರುವ ಫ್ಯಾನ್, ಚಯರ್ ಸಹ ಖರೀದಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಶಾಲಾ ಸಂಸ್ಥಾಪಕರಾದ ರೆ|ಫಾ| ಎ.ಜೇಕಬ್ ಅವರ ಸ್ಮರಣಾರ್ಥ ನಿರ್ಮಾಣವಾದ ರಂಗಮಂದಿರಕ್ಕೆ ಛಾವಣಿಯನ್ನು ವಿದ್ಯಾಸಂಸ್ಥೆ ಮಾಜಿ ಸಂಚಾಲಕ ರಾಯ್ ಅಬ್ರಹಾಂ ಅವರು ದಾನಿಗಳಿಂದ ಸಂಗ್ರಹಿಸಿದ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮುಖ್ಯಗುರು ಹರಿಶ್ಚಂದ್ರ ಅವರು ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ವಿ.ವಿ.ವರ್ಗೀಸ್, ಸದಸ್ಯ ಕೆ.ಎಂ.ತೋಮಸ್, ಮಾಜಿ ಸಂಚಾಲಕ ಕೆ.ಎಸ್.ರಾಜು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಕೋಚಕಟ್ಟೆ, ಪೆರಾಬೆ ಗ್ರಾ.ಪಂ.ಸದಸ್ಯ ಪಿ.ಜಿ. ರಾಜು, ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೋಮಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಕಿಶೋರ್ ಕುಮಾರ್ ಸ್ವಾಗತಿಸಿ, ಸಹಶಿಕ್ಷಕಿ ಭುವನೇಶ್ವರಿ ವಂದಿಸಿದರು. ಸಹಶಿಕ್ಷಕಿ ತ್ರೇಸ್ಯಮ್ಮ ನಿರೂಪಿಸಿದರು.