ಮಿನಿಪದವು ಅಯ್ಯಪ್ಪ ಭಜನಾ ಮಂದಿರ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭೆ

0

ಪುತ್ತೂರು: ದೇವರನ್ನು ನಂಬುವವರಿಗೂ, ನಂಬದವರಿಗೂ ಎರಡಲ್ಲೂ ಫಲವಿದೆ. ಆದರೆ ಧರ್ಮಯುತ್ತವಾದ ಹಾಗೂ ಜ್ಞಾನ ಪೂರ್ಣವಾದ ಕರ್ಮದಿಂದ ಉತ್ತಮ ಫಲಪ್ರಾಪ್ತಿಯಾಗಲಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಾಗೃತಿಯ ಕೇಂದ್ರ. ಜೀವನದ ಪಯಣಕ್ಕೊಂದು ದಾರಿಯ ಬೆಳಕು ಆಗಿದೆ. ನಮ್ಮ ಜೀವನದ ಗುರಿ ಭಗವಂತನ ಸಾಕ್ಷತ್ಕಾರವಾಗಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹೇಳಿದರು.


ಆರ್ಯಾಪು ಗ್ರಾಮದ ಮಿನಿಪದವುನಲ್ಲಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್‌ನಿಂದ ನಿರ್ಮಾಣಗೊಂಡ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜ.8ರಂದು ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಅಧರ್ಮ ಮೆಟ್ಟಿ ನಿಲ್ಲಲು ಧರ್ಮದ ಅಂಶ ಬೆಳೆಯಬೇಕು. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಬೆಳೆದಾಗ ಭಾರತದ ಸಂಸ್ಕೃತಿ ಉಳಿಯಲು ಸಾಧ್ಯ. ಧರ್ಮ ಹಾಗೂ ಸಂಸ್ಕೃತಿಗಳು ಸಂಪಾದನೆಯ ಎರಡು ಮುಖಗಳು. ಎರಡೂ ಒಂದನೊಂದು ಬಿಟ್ಟಿಲ್ಲ. ಭಗವಂತನಲ್ಲಿ ಎಲ್ಲವನ್ನು ಮೀರಿ ನಿಲ್ಲುವ ಶಕ್ತಿಯಿದೆ. ಭಗವಂತನಲ್ಲಿ ಯಾವುದೇ ಧ್ವಂದ್ವ ಇಲ್ಲ. ಹೀಗಾಗಿ ಆರಧನೆಯಲ್ಲಿ ನಮ್ಮಲ್ಲಿ ದ್ವಂದ್ವ ಇರಬಾರದು. ಅಯ್ಯಪ್ಪ ದೇವರ ಆರಾಧನೆ ಸುಲಭವಲ್ಲ. ಅದಕ್ಕೆ ಆದರದ್ದೇ ಆದ ಅನುಷ್ಠಾನಗಳಿವೆ. ಶಬರಿಮಲೆಯಲ್ಲಿರುವ 18 ಮೆಟ್ಟಿಲುಗಳಿಗೆ 18 ತತ್ವಗಳಿವೆ. ಬದುಕಿನಲ್ಲಿಯೂ ಹದಿನೆಂಟು ತತ್ವಗಳಿದ್ದು ಅದು ಪೂರ್ಣ ಆದಾಗ ಮಾತ್ರ ಜೀವನ ಪೂರ್ಣವಾಗಲಿದೆ. ಘಾಸಿ ಹೋದ ಧರ್ಮದಿಂದ ಅಪಾಯ ಹೀಗಾಗಿ ಧರ್ಮ ಸಂಸರಕ್ಷಣೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ಸನಾತನ ಹಿಂದು ಧರ್ಮದ ಉನ್ನತಿ, ಅವನತಿ ನಮ್ಮ ಕೈಯಲ್ಲಿದ್ದು ಧರ್ಮ ಉಳಿಸುವ ನಮ್ಮ ಜವಬ್ದಾರಿ ಎಂದು ತಿಳಿದು ಉಳಿಸಿದಾಗ ಧರ್ಮ ಉಳಿಯಲು ಸಾಧ್ಯ ಎಂದು ಹೇಳಿದರು.


ನಶ್ವರವಾದ ಧರ್ಮ ಉಳಿಸಲು ನಾವೆಲ್ಲಾ ಪ್ರಯತ್ನಿಸಬೇಕು-ಶ್ರೀಮಹಾಬಲ ಸ್ವಾಮೀಜಿ:
ಕನ್ಯಾನ ಕಣಿಯೂರು ಶ್ರೀಚಾಮುಂಡೇಶ್ವರಿ ದೇವಿ ಕ್ಷೇತ್ರದ ಮಹಾಬಲ ಸ್ವಾಮಿಜಿ ಮಾತನಾಡಿ, ಜಿಲ್ಲೆಯಲ್ಲಿ ಭೂಗರ್ಭ ಸೇರಿದ ದೈವೀ ಸಾನಿಧ್ಯಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಪುಣ್ಯಕಾಲದಲ್ಲಿದ್ದೇವೆ. ಅಯ್ಯಪ್ಪನ ಮಾಲೆ ಧರಿಸಿ, ವೃತಾಚರಣೆ ನಡೆಸಿ ಕ್ಷೇತ್ರ ದರ್ಶನ ಮಾಡಿದರೆ ಅಯ್ಯಪ್ಪನ ಅನುಗ್ರಹ ಖಂಡಿತಾ ಲಭಿಸಲಿದೆ. ವೃತಾಚರಣೆ ಸರಿಯಾಗಿ ಪಾಲನೆ ಮಾಡಿದವರಿಗೆ ಸಾಕ್ಷಾತ್ಕಾರವಾಗಿದೆ. ನಮ್ಮ ನಂಬಿಕೆ ಬಲವಾಗಿರಬೇಕು. ದೇವರನ್ನು ಒಲಿಸಿಕೊಳ್ಳಲು ವೃತಾಚರಣೆ, ಶರಣು ಘೋಷಣೆ ಮಾಡಿದಾಗ ಪುಣ್ಯ ಪ್ರಾಪ್ತಿಯಾಗಲಿದೆ. ನಶ್ವರವಾದ ಧರ್ಮ ಉಳಿಸಲು ನಾವೆಲ್ಲಾ ಪ್ರಯತ್ನಿಸಬೇಕು ಎಂದು ಹೇಳಿದರು.


ಭಜನಾ ಮಂದಿರಗಳು ಅಸ್ಪೃಶ್ಯತೆ ಇಲ್ಲದೆ ಸಮಾಜ ಸಂಘಟಿತವಾಗುವ ಕೇಂದ್ರ-ನಳಿನ್ ಕುಮಾರ್ ಕಟೀಲ್:
ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂ ಸಮಾಜ ಮೂಡನಂಬಿಕೆಯ ಸಮಾಜವಲ್ಲ. ಮೂಲ ನಂಬಿಕೆಯ ಚಿಂತನೆಯಲ್ಲಿ ಮುನ್ನಡೆಯುವ ಸಮಾಜ. ಭಜನೆಯ ಮೂಲಕ ಭಗವಂತನನ್ನು ಪ್ರಾರ್ಥಿಸುತ್ತಾ ಹೋದಾಗ ದೇವರು ಬಹಳ ಹತ್ತಿರವಾಗುತ್ತಾರೆ. ಭಜನೆಯಿರುವಲ್ಲಿ ವಿಭಜನೆಯಿಲ್ಲ. ಭಜನೆ ಮುಖಾಂತರ ಸಂಸ್ಕಾರಗಳು ಬರುತ್ತದೆ. ಭಜನಾ ಮಂದಿರದಲ್ಲಿ ಜಾತಿ, ಪಂಥ ಬೇಧವಿಲ್ಲದೆ ಹಿಂದೂ ಸಮಾಜ ಒಟ್ಟಾಗುತ್ತಿದ್ದು ಯಾವುದೇ ಅಸ್ಪೃಶ್ಯತೆ ಇಲ್ಲದೇ ಸೇರುವ ಜಾಗವೇ ಭಜನಾ ಮಂದಿರವಾಗಿದೆ. ಭಜನೆಯಲ್ಲಿ ಅಸ್ಪೃಷ್ಯತೆಯಿಲ್ಲ. ಯಾರೂ ಬೇಕಾದರೂ ಮಾಡಬಹುದು. ಭಜನಾ ಮಂದಿರದಲ್ಲಿ ಯಾವುದೇ ಅಸ್ಪೃಶ್ಯತೆ ಇಲ್ಲದೇ ಇಡೀ ಸಮಾಜ ಸಂಘಟಿತವಾಗುತ್ತದೆ. ಕಳೆದ 42 ವರ್ಷಗಳಿಂದ ಮಿನಿಪದವುನಲ್ಲಿ ಭಜನೆ ನಡೆದಿದ್ದು ಈ ಪ್ರದೇಶವು ಹಿಂದೂ ಸಮಾಜದ ಸಂಘಟಿತ ಪ್ರದೇಶವಾಗಿದೆ ಎಂದರು.


ಭಜನಾ ಮಂದಿಗಳಿಂದ ಧರ್ಮ ಉಳಿಸುವ ಕಾರ್ಯ-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಧರ್ಮಾದಾರಿತ ಬದುಕಿಗೆ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳು ಅವಶ್ಯಕ. ಪಾಶ್ಚಾತ್ಯ ಸಂಸ್ಕೃತಿ ವಿರುದ್ದ ಹೋರಾಡಿ ಧರ್ಮ ಉಳಿಸುವ ಕಾರ್ಯ ಭಜನೆ ಮೂಲಕ ಅಗುತ್ತಿದೆ. ಭಜನೆ ಭಗವಂತನನ್ನು ಒಲಿಸುವ ಜೊತಗೆ ಭಜನ ಮಂದಿರಗಳಲ್ಲಿ ಹಿಂದೂ ಧರ್ಮ ಉಳಿಸುವ ಕಾರ್ಯವಾಗುತ್ತಿದೆ. ಬಾಂಗ್ಲಾದೇಶದಲ್ಲಿ ಭಜನೆ ಮೂಲಕ ಧರ್ಮ ಉಳಿಸುವ ಕೆಲಸವಾಗಿದ್ದು ಭಜನಗೆ ಎಷ್ಟು ಶಕ್ತಿ ಇದೆ ಎಂಬುದು ಅರಿವಾಗಿದೆ ಎಂದರು.


ಸನಾತನ ಧರ್ಮ ಉಳಿಸಲು ಭಜನಾ ಮಂದಿರಗಳು ಸಹಕಾರಿ-ಜಯಂತ ನಡುಬೈಲು:
ಸಂಪ್ಯ ಅಕ್ಷಯ ಗ್ರೂಪ್ಸ್‌ನ ಮ್ಹಾಲಕ ಜಯಂತ ನಡುಬೈಲು ಮಾತನಾಡಿ, ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕತಿ ಉಳಿಸುವ ಕೆಲಸವಾಗುತ್ತಿದ್ದು ಸನಾತನ ಧರ್ಮ ಉಳಿಯಲು ಸಹಕಾರಿಯಾಗಲಿದೆ. ಇದನ್ನು ಮುಂದುವರಿಸುವ ಕಾರ್ಯವೂ ನಿರಂತರವಾಗಿ ನಡೆಯಲಿ ಎಂದರು.


ಹಿಂದೂ ಸಹೋದರರ ಒಗ್ಗಟ್ಟಿನ ಫಲವಾಗಿ ಮಂದಿರ ನಿರ್ಮಾಣ-ಹೇಮನಾಥ ಶೆಟ್ಟಿ ಕಾವು:
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇರುವ ಅಲ್ಪ ಜಾಗದಲ್ಲಿ ಭವ್ಯ ಮಂದಿರ ನಿರ್ಮಾಣ ಶ್ರದ್ದೆ, ಭಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದನ್ನು ಮಿವಿಪದವು ಭಜನಾ ಮಂದಿರವೇ ಸಾಕ್ಷಿಯಾಗಿದೆ. ಹಿಂದೂ ಸಹೋದರರ ಒಗ್ಗಟ್ಟಿನ ಫಲವಾಗಿ ಮಂದಿರ ನಿರ್ಮಾಣವಾಗಿದೆ. ನಾವೆಲ್ಲ ಒಗ್ಗಟ್ಟಿನಿಂದ ಮಾಡುವ ಕೆಲಸಗಳಲ್ಲಿ ಸಿಗುವ ಮನ ಸಂತೋಷ ಬೇರೆ ಯಾವುದರಲ್ಲಿಯೂ ಸಾಧ್ಯ ಇಲ್ಲ ಎಂದರು.


ಮಿನಿಪದವುನಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆಗಳ ತ್ರಿವೇಣಿ ಸಂಘಮ-ಮುರಳೀಕೃಷ್ಣ ಹಸಂತಡ್ಕ:
ಜಿಲ್ಲಾ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಭವ್ಯ ಭಜನಾ ಮಂದಿರ ನಿರ್ಮಾಣವಾಗುವ ಮೂಲಕ ಮಿನಿಪದವುನಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆಗಳ ತ್ರಿವೇಣಿ ಸಂಗಮವಾಗಿದೆ. ಅಯ್ಯಪ್ಪ ಮಾಲಾಧಾರಿಯಾಗಿ ವೃತಾಚರಣೆ ಮಾಡಿದ ಬಾಲಕನಿಗೆ ಮಾತು ಬಂದಿದ್ದು ಅಯ್ಯಪ್ಪ ಕಾರಣಿಕದ ಸಾಕ್ಷಾತ್ಕಾರವಾಗಿದೆ ಎಂದರು.


ಧರ್ಮದ ವಿಚಾರದಲ್ಲಿ ನಾವೆಲ್ಲಾ ಒಂದಾಗಬೇಕು-ಶಕುಂತಳಾ ಟಿ.ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ರಾಜಕೀಯ ಪಕ್ಷಗಳೆಲ್ಲವೂ ಒಂದೇ. ಧರ್ಮದ ವಿಚಾರದಲ್ಲಿ ನಾವೆಲ್ಲಾ ಒಂದಾಗಬೇಕು. ಸಂಸ್ಕಾರ ನಮ್ಮ ಮನಸ್ಸಿನಿಂದ ಬರಬೇಕು. ಸಂಸ್ಕಾರ ಸರಿಯಾಗಿದ್ದರೆ ವಿಶ್ವಕ್ಕೆ ಮಾರ್ಗದರ್ಶನ ನೀಡಬಹುದು ಎಂದರು.


ಟ್ರಸ್ಟ್ ಮೂಲಕ ಮಂದಿರದಲ್ಲಿ ಕಾರ್ಯಕ್ರಮಗಳು-ಸೀತಾರಾಮ ರೈ:
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಮಾತನಾಡಿ, ಎಲ್ಲರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾ ಮಹೋತ್ಸವಗಳು ಸಂಪನ್ನಗೊಂಡಿದೆ. ಮಂದಿರದ ಟ್ರಸ್ಟ್ ರಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಟ್ರಸ್ಟ್‌ಗೆ ಇನ್ನಷ್ಟು ಮಂದಿಯನ್ನು ಸೇರಿಸಿಕೊಂಡು ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.


ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಪ್ರಗತಿಪರ ಕೃಷಿಕ ಸುಭಾಷ್ ರೈ ಕಡಮಜಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ ಎಂ., ಮಾತೃಶ್ರೀ ಅರ್ಥ್‌ಮೂವರ‍್ಸ್‌ನ ಮ್ಹಾಲಕ ಮೋಹನದಾಸ್ ರೈ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಧರ ನಾಯ್ಕ ಮಿನಿಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಭಜನಾ ಮಂದಿರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಪ್ರಮುಖ ಪಾತ್ರವಹಿಸಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ, ಅಯ್ಯಪ್ಪ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ನಾಯ್ಕ ಮಿನಿಪದವು, ಭಜನಾ ಮಂದಿರ ನಿರ್ಮಾಣದ ಕಾರ್ಯದಲ್ಲಿ ವಿವಿಧ ರೂಪದಲ್ಲಿ ಸಹಕರಿಸಿದ ಮೆಸ್ಕಾಂ ಕಿರಿಯ ಇಂಜಿನಿಯರ್ ರಮೇಶ್, ವಿದ್ಯುತ್ ಗುತ್ತಿಗೆದಾರ ಸುಧಾಕರ್, ಶಿಲ್ಪಿ ದಿವಾಕರ ಆಚಾರ್ಯ ಕೈಕಾರ, ಉಚಿತ ವಯರಿಂಗ್ ಕೆಲಸ ಮಾಡಿದ ಪ್ರಜ್ವಲ್ ರೈ ತೊಟ್ಲ, ಪೈಂಟಿಂಗ್ ಕೆಲಸ ಉಚಿತವಾಗಿ ನಿರ್ವಹಿಸಿದ ರಕ್ಷಿತ್ ರೈ ಕೈಕಾರ, ಇತರ ಕೆಲಸಗಳಲ್ಲಿ ಸಹಕರಿಸಿದ ಮಂಜುನಾಥ ನಾಯ್ಕ ಬಿಜತ್ರೆ, ಫ್ರೆಂಡ್ಸ್ ಶಾಮಿಯಾನದ ರಾಧಾಕೃಷ್ಣ ಬೋರ್ಕರ್ ಹಾಗೂ ಇತರ ಕೆಲಸ ಕಾರ್ಯಗಳಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ಸಂತೋಷ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೈ ತೊಟ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನವೀನ್ ಕುಮಾರ್ ರೈ ಪನಡ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಗಿರೀಶ್ ರೈ ಮೂಲೆ, ಕೋಶಾಧಿಕಾರಿ ರಾಮಚಂದ್ರ ಕುಲಾಲ್ ಬಳಕ್ಕ,ಮಂಜುನಾಥ ನಾಯ್ಕ ಬಿಜತ್ರೆ, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಪರ್ಪುಂಜ ಸ್ನೇಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ ರಾಕೇಶ್ ರೈ ಪರ್ಪುಂಜ, ನಿತಿನ್ ಶೆಟ್ಟಿ, ಮಂಜುನಾಥ ನಾಯ್ಕ ಎರ್ಮೆಟ್ಟಿ, ರಕ್ಷಿತ್ ರೈ ಕೈಕಾರ, ಲೋಕೇಶ್ ನಾಯ್ಕ ಮಿನಿಪದವು, ನಂದಿನಿ ಸೀತಾರಾಮ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here