ಉಪ್ಪಿನಂಗಡಿ: ಬೆಂಗಳೂರಿನಿಂದ ಉಡುಪಿಗೆ ಹೊರಟ ಸಂದರ್ಭ ಪ್ರಯಾಣಕ್ಕೆ ಗಂಡನ ಬಳಿ ಹಣವಿಲ್ಲವೆಂದು ಕುಪಿತ ಪತ್ನಿ ನಡು ಬೀದಿಯಲ್ಲೇ ಪತಿಗೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಬಳಿಕ ಪೊಲೀಸರು ಆ ದಂಪತಿಯನ್ನು ತಾವೇ ಹಣ ನೀಡಿ ವಾಪಸ್ ಬೆಂಗಳೂರಿಗೆ ಕಳುಹಿಸಿ ಕೊಟ್ಟ ಬಗ್ಗೆ ವರದಿಯಾಗಿದೆ.
ಶಿಕಾರಿಪುರ ಮೂಲದ ಪವಿತ್ರಾ ಎಂಬಾಕೆಯನ್ನು ಹಿಂದಿ ಭಾಷಿಗನಾಗಿದ್ದ ಸಮೀರುಲ್ಲಾ ಪ್ರೇಮದ ಬಲೆಗೆ ಹಾಕಿ ಮದುವೆಯೂ ಆಗಿದ್ದರು. ಈತನನ್ನು ಮದುವೆಯಾಗಲೆಂದು ಈಕೆ ತನ್ನ ತವರು ಮನೆಯವರನ್ನೂ ತೊರೆದು ಈತನೊಂದಿಗೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬಂದಿದ್ದಾಕೆಗೆ ಶ್ರೀಮಂತನಂತೆ ನಟಿಸುತ್ತಿದ್ದ ಈತನ ನಿಜ ಸ್ವರೂಪ ಬಯಲಾಗತೊಡಗಿತ್ತು.
ಆ ವೇಳೆಗಾಗಲೇ ದಂಪತಿಗೆ ಒಂದು ಮಗುವು ಆಗಿತ್ತು. ಕಳೆದೆರಡು ದಿನಗಳ ಹಿಂದೆ ಉಡುಪಿಯತ್ತ ಹೋಗೋಣವೆಂದು ಪತ್ನಿ ಪವಿತ್ರಾಳನ್ನು ಬುರ್ಕಾ ತೊಡಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ ಸಮಿರುಲ್ಲಾ ನಲ್ಲಿ ಬಸ್ಸಿನ ಟಿಕೆಟಿಗೂ ಹಣವಿಲ್ಲದಿದ್ದಾಗ ಇದ್ದ ಹಣಕ್ಕೆ ಹೊಂದಿಕೆಯಾಗುವಂತೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಬಸ್ಸಿನ ನಿರ್ವಾಹಕ ಉಪ್ಪಿನಂಗಡಿಯಲ್ಲಿ ಸಮಿರುಲ್ಲಾ ನನ್ನು ಇಳಿಸಿದ್ದ. ಪತಿಯೊಂದಿಗೆ ಪವಿತ್ರಾಳೂ ಬಸ್ಸಿನಿಂದ ಇಳಿದಿದ್ದು, ಆಕೆಗೆ ಈ ಸಂದರ್ಭ ಅವಮಾನವಾದಂತಾಗಿ ಹಣವಿಲ್ಲದ ಮೇಲೆ ಪ್ರಯಾಣಕ್ಕೆ ಮುಂದಾದ ಗಂಡನ ವರ್ತನೆಯಿಂದ ಆಕ್ರೋಶಗೊಂಡು ಬೀದಿಯಲ್ಲೇ ಆತನಿಗೆ ಹೊಡೆದಿದ್ದರು. ಇವರಿಬ್ಬರ ಸಂಘರ್ಷವನ್ನು ಕಂಡು ಜನ ಜಮಾಯಿಸಿ ವಿಚಾರಿಸಿದಾಗ ಸಮಿರುಲ್ಲಾ ತಾನು ಮುಸ್ಲಿಂ ಎಂದೂ, ತನ್ನ ಪತ್ನಿ ಹಿಂದೂ ಎಂದೂ ಪರಿಚಯಿಸುತ್ತಾರೆ. ಇವರಿಬ್ಬರ ಸಂಘರ್ಷ ಸೂಕ್ಷ್ಮ ಸ್ಥಿತಿಗೆ ತಿರುಗುವ ಲಕ್ಷಣ ಗೋಚರಿಸಿದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಅವರಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಅವರಲ್ಲಿನ ಗೋಣಿಚೀಲದಂತಿದ್ದ ಚೀಲದಲ್ಲಿನ ದಾಖಲೆ ಪತ್ರಗಳನ್ನು, ತಾಯಿ ಕಾರ್ಡ್ ದಾಖಲೆಯನ್ನು ಪರಿಶೀಲಿಸಿದರು. ಬಳಿಕ ಬಸ್ ಟಿಕೆಟ್ ದರವನ್ನು ತಾವೇ ನೀಡಿ ಅವರಿಬ್ಬರನ್ನೂ ಮತ್ತೆ ಬೆಂಗಳೂರು ಬಸ್ಸಿನಲ್ಲಿ ಕಳುಹಿಸಿಕೊಟ್ಟರು. ಈ ಮೂಲಕ ಪ್ರಕರಣಕ್ಕೆ ಅಂತ್ಯವಾಡಿದರು.