ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಡಿಸಿಆರ್ಇ ಘಟಕವು ಮಂಜೂರಾಗಿದ್ದು , ಈ ಭಾಗದ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ದ ಕ ಜಿಲ್ಲೆಗೆ ಮಂಜೂರಾದ ಘಟಕವನ್ನು ಪುತ್ತೂರಿನಲ್ಲೇ ಸ್ಥಾಪಿಸುವಂತೆ ಶಾಸಕರಾದ ಅಶೋಕ್ ರೈ ಅವರು ಡಿಸಿಆರ್ಇ ಘಟಕದ ಎಡಿಜಿಪಿ ಅರುಣ್ಚಕ್ರವರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ನಗರವು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರ ಹೊರತುಪಡಿಸಿದರೆ ಅತಿ ದೊಡ್ಡ ನಗರ ಪುತ್ತೂರು ಆಗಿರುತ್ತದೆ. ಅಲ್ಲದೆ ಪುತ್ತೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವು ಕೂಡ ಆಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮಂಗಳೂರು ನಗರದಲ್ಲಿ ಪೊಲೀಸ್ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕ್ಷಕರ ವ್ಯಾಪ್ತಿಗೆ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಗಳು ಒಳಪಟ್ಟಿದ್ದು ಈ ಎಲ್ಲಾ ತಾಲೂಕುಗಳಿಗೆ ಪುತ್ತೂರು ತಾಲೂಕು ಮಧ್ಯಭಾಗದಲ್ಲಿರುತ್ತದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಡಿಸಿಆರ್ಇ ಘಟಕವನ್ನು ಪುತ್ತೂರು ನಗರದಲ್ಲಿ ಸ್ಥಾಪಿಸಿದರೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕುಗಳಿಂದ ಬರುವ ನೊಂದವರಿಗೆ ಅನುಕೂಲವಾಗುತ್ತದೆ. ಹಾಗೂ ಗ್ರಾಮಾಂತರ ಪ್ರದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ದಲಿತ ದೌರ್ಜನ್ಯ ಕೇಸುಗಳು ದಾಖಲಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಮೊದಲೇ ದೌರ್ಜನ್ಯಗಳಿಂದ ನೊಂದವರು ದೂರದ ಮಂಗಳೂರಿಗೆ ಹೋಗಿ ದೂರು ದಾಖಲಿಸುವುದು ಕಷ್ಟಕರವಾಗುವುದರಿಂದ ಸದರಿ ಘಟಕವನ್ನು ಪುತ್ತೂರಿನಲ್ಲಿ ಸ್ಥಾಪಿಸುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಪುತ್ತೂರಿನಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಜಿಲ್ಲಾ ವ್ಯಾಪ್ತಿಯ ಎಲ್ಲಾ ಮಹಿಳಾ ದೌರ್ಜನ್ಯ ಪ್ರಕರಣಗಳು ಪುತ್ತೂರಿನಲ್ಲಿಯೇ ದಾಖಲಾಗುತ್ತಿದೆ. ಇದೇ ರೀತಿ ದಲಿತ ದೌರ್ಜನ್ಯ ಪ್ರಕರಣಗಳನ್ನು ಕೂಡ ಪುತ್ತೂರಿನಲ್ಲಿಯೇ ದಾಖಲಿಸಲು ಅನುಕೂಲವಾಗುವಂತೆ ತಾವುಗಳು ಡಿಸಿಆರ್ ಈ ಘಟಕವನ್ನು ಪುತ್ತೂರಿನಲ್ಲಿಯೇ ಸ್ಥಾಪಿಸುವಂತೆ ಮಾಡಬೇಕಾಗಿ ಶಾಸಕರು ನೀಡಿದ ಮನವಿಯಲ್ಲಿ ಕೋರಲಾಗಿದೆ.