ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ವಾರ್ಷಿಕ ನೇಮೋತ್ಸವ ಸಂಪನ್ನ- 6 ಸಾವಿರಕ್ಕೂ ಮಿಕ್ಕಿ ಭಕ್ತರು ಭಾಗಿ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.25ರಂದು ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರ ಆಗಮಿಸುವಿಕೆಯಿಂದ ನೇಮೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ.


6 ಸಾವಿರಕ್ಕೂ ಮಿಕ್ಕಿ ಭಕ್ತರ ಸಮಾಗಮ:
ನೇಮೋತ್ಸವದ ದಿನದಂದು ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತಮಾನದವರೆಗೆ ಅರ್ಧ ಏಕಾಹ ಭಜನೆ, ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಎಣ್ಣೆ ಕೊಡುವುದು, ಶ್ರೀ ಕೊರಗಜ್ಜ ದೈವದ ನೇಮೋತ್ಸವ ಶ್ರದ್ಧಾಭಕ್ತಿಯಿಂದ ವಿಜ್ರಂಭಣೆಯಿಂದ ನಡೆಯಿತು. ಜ.23 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಭಜನಾ ಕಾರ್ಯಕ್ರಮ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಜ.24 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ಹಾಗೂ ಶ್ರೀ ಕ್ಷೇತ್ರದ ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಕೆ.ಮಣ್ಣಾಪು, ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ ನೇತೃತ್ವದಲ್ಲಿ ಜರಗಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಮುಖರಾದ ಬಾಲಕೃಷ್ಣ ರೈ, ಮೋರ್ಲಾಗುತ್ತು ರತ್ನಾಕರ ಶೆಟ್ಟಿ, ಪ್ರಭಾಕರ ರೈ ಬೆಂಗಳೂರುರವರ ಸಹಿತ ಸುಮಾರು 6 ಸಾವಿರಕ್ಕೂ ಮಿಕ್ಕಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಚಿತ್ರ: ನವೀನ್ ರೈ ಪಂಜಳ


ಧ್ವನಿಸುರುಳಿ ಬಿಡುಗಡೆ..
ಪ್ರಶಾಂತ್ ಪುತ್ತೂರುರವರ ಸಾಹಿತ್ಯದಲ್ಲಿ, ಸಿಂಚನಾ ಎಂ.ಗೌಡರವರ ಗಾಯನದಲ್ಲಿ ಮೂಡಿ ಬಂದಿರುವ ‘ಮಣ್ಣಾಪುಡುಂತಿ ಕಲ್ಜಿಗೊದ ಕಾಪಲ್’ ಎಂಬ ತುಳು ಭಕ್ತಿಗೀತೆಯ ಧ್ವನಿಸುರುಳಿಯು ಶ್ರೀ ಕ್ಷೇತ್ರದಲ್ಲಿ ಲೋಕಾರ್ಪಣೆಗೊಂಡಿತು. ತುಳು ಭಕ್ತಿಗೀತೆಯ ನಿರ್ಮಾಪಕರಾಗಿ ರವಿಚಂದ್ರ ನಾಯ್ಕ್ ಉದಯಗಿರಿ, ಶ್ರೀಧರ ನಾಯ್ಕ್ ಪುತ್ತಿಲ, ನಿಕ್ಷಿತಾ ಪ್ರಖ್ಯಾತ್ ಪೆರಿಯಡ್ಕ, ಜಯರಾಮ ಗೌಡ ಬೊಳ್ಳಗುಡ್ಡೆ, ಯತೀನ್ ಕೆ.ರವರ ಚಿತ್ರೀಕರಣ, ಜೈಶ್ರೀರಾಂ ಫ್ರೆಂಡ್ಸ್ ಪಂಜಳ ಹಾಗೂ ವೆಂಕಟೇಶ್ ಕೆಯ್ಯೂರುರವರ ಸಹಕಾರ, ಬೆದ್ರ ಟ್ಯಾಬ್ ಸ್ಟುಡಿಯೋದ ಸಂತೋಷ್ ಪುಚ್ಚೇರ್‌ರವರ ಪ್ರಚಾರಕಲೆ ಹಾಗೂ ಸಂಕಲನ ಈ ಧ್ವನಿಸುರುಳಿಯಲ್ಲಿದೆ.


ಭಾಗವಹಿಸಿದ ಭಜನಾ ಮಂಡಳಿಗಳು:
ಕಾರ್ಯಕ್ರಮದಲ್ಲಿ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್‌ಮೂಲೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮರಾಠಿ ಯುವ ವೇದಿಕೆ ಭಜನಾ ತಂಡ, ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿ, ಮೊಗರು ಶ್ರೀ ಮಹಾವಿಷ್ಣು ಭಜನಾ ಮಂಡಳಿ, ದೇವಸ್ಯ ಶ್ರೀಹರಿ ಭಜನಾ ಮಂಡಳಿ, ಉಜಿರೆ ಗುರುಪಳ್ಳ ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ, ಕಡಬ ಭಜನಾಮೃತ ಭಜನಾ ತಂಡ, ಬಳ್ಪ ಧರ್ಮಶಾಸ್ತಾವು ಕುಣಿತ ಭಜನಾ ತಂಡದ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರಗಿತು.


ಸವಿತಾ ಪಂಜ ಪ್ರಾರ್ಥಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಸ್ವಾಗತಿಸಿ, ವಂದಿಸಿದರು. ಪುರುಷೋತ್ತಮ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ಕೋಶಾಧಿಕಾರಿ ಉಮೇಶ್ ಮಣ್ಣಾಪು ಹಾಗೂ ಗುರುವ ಮಣ್ಣಾಪು, ಗೌರವ ಸಲಹೆಗಾರರಾದ ಗಂಗಾಧರ ಮಣ್ಣಾಪು ಹಾಗೂ ವಿಶ್ವನಾಥ ನಾಯ್ಕ್ ಅಮ್ಮುಂಜ, ಸದಸ್ಯರುಗಳಾದ ಸತೀಶ ಕೆ.ಮಣ್ಣಾಪು, ಯಶವಂತ ಪೆರಾಜೆ, ಪ್ರವೀಣ ಎಸ್.ಮಣ್ಣಾಪು, ಶ್ರೀಮತಿ ಸುಶೀಲ ಮಣ್ಣಾಪು, ಶ್ರೀಮತಿ ದೇವಕಿ ಮಣ್ಣಾಪು, ಶ್ರೀಮತಿ ಯಮುನಾ ಮಣ್ಣಾಪು, ಬಾಬು ಮಣ್ಣಾಪು, ಶ್ರೀಮತಿ ಲಕ್ಷ್ಮೀ ಮಣ್ಣಾಪು, ನಾರಾಯಣ ಮಣ್ಣಾಪು, ಶ್ರೀಮತಿ ಚಣ್ಣು ಮಣ್ಣಾಪು, ಶ್ರೀಮತಿ ಜಾನಕಿ ಮಣ್ಣಾಪು, ಸುಜೀರ್ ಶೆಟ್ಟಿ ನುಳಿಯಾಲು, ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ ಬಳಗದ ಸದಸ್ಯರ ಸಹಿತ ಹಲವರು ವಿವಿಧ ರೀತಿಯಲ್ಲಿ ನೇಮೋತ್ಸವ ಯಶಸ್ವಿಯಾಗಿಸುವಲ್ಲಿ ಸಹಕರಿಸಿದರು.

ಶ್ರೀ ಕ್ಷೇತ್ರ ಭಕ್ತರ ಭಕ್ತಿಯ ಸಾನಿಧ್ಯವಾಗಿದೆ..
ಶ್ರೀ ಕ್ಷೇತ್ರದಲ್ಲಿನ ಯುವಸಮೂಹ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕ್ಷೇತ್ರವು ವರ್ಷದಿಂದ ವರ್ಷ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ನೋಡಿದಾಗ ಕೊರಗಜ್ಜನ ಶಕ್ತಿ ಏನೆಂಬುದು ಎಂಬುದು ತಿಳಿಯುತ್ತದೆ. ಕೊರಗಜ್ಜನಿಗೆ ಬೆಳ್ಳಿ ಬಂಗಾರ ಬೇಡ, ಅವರಿಗೆ ಬೇಕಾಗಿರುವುದು ಭಕ್ತರ ನಿಜವಾದ ಭಕ್ತಿ ಮಾತ್ರ. ಈ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದು ನೋಡಿದಾಗ ಮೈನವಿರೇಳಿಸುತ್ತದೆ. ಪ್ರತಿ ವ್ಯಕ್ತಿಗೆ ಶಕ್ತಿ ಇದೆ. ಆ ಶಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಲು ಮತ್ತು ಆರೋಗ್ಯ ವೃದ್ಧಿಸಲು ಕೊರಗಜ್ಜ ಶಕ್ತಿ ನೀಡಲಿ. ಶ್ರೀ ಕ್ಷೇತ್ರದಲ್ಲಿ ಹೃದಯವಂತ ದಾನಿಗಳಿಂದ ಮೂಲಭೂತ ಸೌಕರ್ಯ ಸಾಕಾರಗೊಂಡಿರುವುದು ಸಾಕ್ಷಿಯಾಗಿದೆ. ಕೊರಗಜ್ಜ ಕ್ಷೇತ್ರವು ವ್ಯಾಪಾರೀಕರಣ ಕ್ಷೇತ್ರವಾಗದೆ ಅದು ಭಕ್ತರ ಭಕ್ತಿಯ ಸಾನಿಧ್ಯದ ಕ್ಷೇತ್ರವಾಗಿದೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಮಣ್ಣಾಪು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಶಾಸಕ ಅಶೋಕ್ ರೈ ಭೇಟಿ..
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ರಾತ್ರಿ ಶಾಸಕ ಅಶೋಕ್ ಕುಮಾರ್ ರೈರವರು ಭೇಟಿ ನೀಡಿ, ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರ ಗೌರವಾಧ್ಯಕ್ಷತೆಯಲ್ಲಿ ಜೊತೆಗೆ ಶ್ರೀ ಕ್ಷೇತ್ರದ ಭಕ್ತಾಧಿಗಳ ಒಗ್ಗೂಡುವಿಕೆಯಿಂದ ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ವರ್ಷಂಪ್ರತಿ ವಾರ್ಷಿಕ ನೇಮೋತ್ಸವ ನಡೆಯುತ್ತಿದೆ ಮಾತ್ರವಲ್ಲ ಶ್ರೀ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ನೋಡಿದಾಗ ಕೊರಗಜ್ಜನ ಮಹಿಮೆ ಏನೆಂಬುದು ಎಂದು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರವು ಕೊರಗಜ್ಜನ ಆಶೀರ್ವಾದದಿಂದ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದರು.

LEAVE A REPLY

Please enter your comment!
Please enter your name here