ಮೂರು ದಿನಗಳ ಕಾಲ ನಡೆಯಿತು ಮೂರು ವರ್ಷಗಳಿಗೊಮ್ಮೆ ನಡೆಯುವ ಧರ್ಮ ನೇಮೋತ್ಸವ
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕುಟುಂಬಗಳಲ್ಲೊಂದಾದ ಕೊಟ್ಟಿಬೆಟ್ಟು ಏಳ್ನಾಡುಗುತ್ತಿನ ಮನೆಯ ಧರ್ಮ ನೇಮೋತ್ಸವ ಜ.31ರಿಂದ ಫೆ.02ರವರೆಗೆ ವಿಜೃಂಭಣೆಯಿಂದ ಜರಗಿತು.
ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಊರ ಮತ್ತು ಪರವೂರ ಭಕ್ತರು ಭಾಗವಹಿಸಿದ್ದರು.
ಜ.31ರಂದು ಗಣಪತಿ ಹೋಮ, ಕೊಟ್ಟಿಬೆಟ್ಟು ಏಳ್ನಾಡುಗುತ್ತಿನ ಮನೆಯಿಂದ ಭಂಡಾರ ತೆಗೆಯುವ ಮೂಲಕ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ನೇಮ ನಡೆಯಿತು. ಫೆ.01ರಂದು ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ನೇಮ ನಡೆದರೆ, ಫೆ.02ರಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತಿನ ಮನೆಯ ಧರ್ಮದೈವ ಜುಮಾದಿ – ಬಂಟ ದೈವದ ನೇಮ ನಡೆಯಿತು.
ಮೂರು ವರ್ಷಗಳಿಗೊಮ್ಮೆ, ಏಳ್ನಾಡುಗುತ್ತಿನ ಮನೆಯ ಯಜಮಾನ ರಾಧಾಕೃಷ್ಣ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಈ ಧರ್ಮನೇಮೋತ್ಸವದಲ್ಲಿ ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸಹಕಾರಿ ಧುರೀಣ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಅಬಕಾರಿ ಇಲಾಖೆಯ ಅಧಿಕಾರಿ ಸುಜಾತ, ಉದ್ಯಮಿ ಕೆ.ಸಿ. ನಾಯ್ಕ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಎಲ್ಲಾ ಮೂರು ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆದು, ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಜಿಲ್ಲೆಯಲ್ಲೇ ಪ್ರಥಮವೆಂಬಂತೆ ದೈವಗಳಿಗೆ ವಿಶೇಷವಾಗಿ ಮರದ ಕೊಡಿಯಡಿ ನಿರ್ಮಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯಿತು.