ನೆಲ್ಯಾಡಿ: ಸ್ಕೂಟಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟ ಘಟನೆ ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಫೆ.8ರಂದು ಮಧ್ಯಾಹ್ನ ನಡೆದಿದೆ.
ಶಿರಾಡಿ ಗ್ರಾಮದ ಮಿತ್ತನಾಜೆ ಕೊಟ್ಟಾಯಿಲ್ ನಿವಾಸಿ ಕೆ.ಜೆ.ಜಾನ್(59ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶಿರಾಡಿ ಪೇಟೆಗೆ ಬಂದಿದ್ದ ಜಾನ್ ಅವರು ಮನೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದವರು ಶಿರಾಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ಯುಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಜಾನ್ ಅವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ದಾರಿಮಧ್ಯೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ನಳಿನ್ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ:
ಅಪಘಾತದ ಸಂದರ್ಭದಲ್ಲೇ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಬೆಂಗಳೂರಿನಿಂದ ಮಂಗಳೂರಿಗೆ ಅದೇ ದಾರಿಯಲ್ಲಿ ಬರುತ್ತಿದ್ದು ಅವರ ಬೆಂಗಾವಲು ವಾಹನದಲ್ಲಿ ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಮೃತ ಜಾನ್ ಅವರು ತಂದೆ ಜೋಸೆಫ್ ಕೊಟ್ಟಾಯಿಲ್, ಪತ್ನಿ ಮೋಳಿ, ಪುತ್ರಿಯರಾದ ಸಾನಿಯಾ, ಶಾನಿ, ಶೀನಾ ಹಾಗೂ ಪುತ್ರ ಶ್ಯಾಮ್ ಅವರನ್ನು ಅಗಲಿದ್ದಾರೆ.