ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈ ದಂಪತಿಯ 45 ರ ಸಂಭ್ರಮ ಹಾಗೂ ಸುಭಾಸ್ ರೈಯವರ 75 ನೇ ಹುಟ್ಟುಹಬ್ಬದ ಸಂಭ್ರಮ ಕಾರ್ಯಕ್ರಮಗಳ ಅಂಗವಾಗಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರಿಗೆ ಸನ್ಮಾನ ಕಾರ್ಯಕ್ರಮ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಫೆ. 8 ರಂದು ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ಗೆಣಸಿನಕುಮೇರು ರವರು ಮಾತನಾಡಿ ‘ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಪೂರ್ವಜನ್ಮದ ಪುಣ್ಯದ ಫಲ. ನಮ್ಮ ಹಿರಿಯರ ಉತ್ತಮ ಕಾರ್ಯ ನಮಗೆ ಉತ್ತಮ ಜೀವನ ಕೊಡುತ್ತದೆ. ನಮ್ಮ ಒಳ್ಳೆಯ ಜೀವನ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ದಾರಿ ಮಾಡಿಕೊಡುತ್ತದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಕಡಮಜಲು ಸುಭಾಸ್ ರೈ ಯವರು ತನ್ನ ದಾಂಪತ್ಯದ 45 ರ ಸಂಭ್ರಮಕ್ಕೆ ಕಲಾವಿದರ ಜೊತೆಗೆ, 75 ರ ಸಂಭ್ರಮವನ್ನು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ ‘ಪ್ರೀತಿಯಿಂದ ಪ್ರೀತಿಗೆ’ ಕೃತಿ ಬಿಡುಗಡೆಗೊಳಿಸಿರುವುದನ್ನು ಉಲ್ಲೇಖಿಸಿ ‘ಈ ಮಣ್ಣಿನ ಮೌಲ್ಯವರ್ಧನೆಯಾಗಬೇಕೆಂಬ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದೇನೆ. ನನ್ನ ದಾಂಪತ್ಯ ಹಾಗೂ ಹುಟ್ಟುಹಬ್ಬದ ಯೋಗ ಭಾಗ್ಯ, ಸಂತೋಷವನ್ನು ಹಂಚಿಕೊಳ್ಳುವುದು ಹೇಗೆ ಎಂದು ಯೋಚಿಸಿ ಜಿಲ್ಲಾ ಮಟ್ಟದಲ್ಲಿ ಹೆಸರು ಸಾಧನೆ ತೋರಿದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ವಿಜಯ ಕುಮಾರ್ ರೈ ಕೋರಂಗ ರವರನ್ನು ಸನ್ಮಾನಿಸುವುದಲ್ಲಿ ತೃಪ್ತಿ ಪಡೆಯಲಿದ್ದೇನೆ. ಮುಂದಕ್ಕೆ ಶಶಿಕುಮಾರ್ ರೈಯವರು ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಅಥವಾ ಶಾಸಕನಾಗಿ ಕಾಣುವ ಯೋಗ ಕೂಡಿ ಬರಲಿ’ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ‘ಸಹಕಾರಿ ರಂಗದಲ್ಲಿ ಇಷ್ಟು ಬೆಳೆಯಬೇಕಾದರೆ ಕಡಮಜಲು ಸುಭಾಸ್ ರೈ ಕಾರಣರಾಗಿದ್ದಾರೆ. ಪಿಎಲ್‌ಡಿ ಬ್ಯಾಂಕ್ ನ ಅಭಿವೃದ್ಧಿಯನ್ನು ನಾನು ಮತ್ತು ಕಡಮಜಲು ಸುಭಾಸ್ ರೈಯವರು ಜೊತೆಗಿದ್ದ ವೇಳೆ ಮಾಡಿದ್ದೆವು. ಅನೇಕ ಕಡೆ ಪ್ರವಾಸ ಕೈಗೊಂಡು ಬ್ಯಾಂಕಿನಲ್ಲಿ ಅಮೂಲಾಗ್ರ ಪರವರ್ತನೆ ತಂದಿದ್ದೆವು. ಅವರ ಒಡನಾಟದಿಂದ ಅವರ ಅನೇಕ ವ್ಯಕ್ತಿತ್ವ ನನಗೂ ಬಂದಿದೆ. ಅಲ್ಲಿಂದ ಬಳಿಕ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಯೋಗವೂ ಪ್ರಾಪ್ತಿಯಾಯಿತು. ಅವರ ಕೃಷಿ ಜೀವನದಿಂದಲೂ ನಾನು ಪ್ರೇರಿತನಾಗಿದ್ದೇನೆ’ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ ‘ಯೋಗಾನುಯೋಗದಿಂದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷನಾಗುವ ಅವಕಾಶ ದೊರೆಯಿತು. ಆ ಸಂದರ್ಭವನ್ನು ನನಗಿಂತ ಹೆಚ್ಚು ಸಂತೋಷ ಪಟ್ಟವರು ಕಡಮಜಲು ಸುಭಾಸ್ ರೈಯವರು’ ಎಂದರು.
ಗೌರವಾರ್ಪಣೆ
‘ಪ್ರೀತಿಯಿಂದ ಪ್ರೀತಿಗೆ’ ಕೃತಿ ಸೇರಿದಂತೆ ಕಡಮಜಲು ಸುಭಾಸ್ ರೈಯವರು ಬರೆದಿರುವ 4 ಕೃತಿಗಳ ಮುಖಪುಟ ವಿನ್ಯಾಸ ಮಾಡಿರುವ ಪ್ರಸನ್ನ ರೈ ರವರನ್ನು ಇದೇ ವೇಳೆ ಗೌರವಿಸಲಾಯಿತು. ಮುಂಡಾಳಗುತ್ತು ಮೋಹನ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕರುಣಾಕರ ರೈ ಕೋರಂಗ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಪ್ರೀತಿ ಎಸ್. ರೈ ಕಡಮಜಲು, ಕೆಯ್ಯೂರು ಕೆದಂಬಾಡಿ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ, ಕೆದಂಬಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ರೈ ತಿಂಗಳಾಡಿ, ಲತಾ ಜಯರಾಮ ರೈ, ಅಮಿತಾ ವಿಜಯ ಕುಮಾರ್ ರೈ, ಮಿಥಾಲಿ ಪ್ರಸನ್ನ ರೈ, ಕೆದಂಬಾಡಿ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಕರುಣಾಕರ ರೈ ಕೋರಂಗ, ಗೋಪಾಲ ಗೌಡ ಪಟ್ಟೆ, ಗುಂಡಿಬಳ್ಳಿ ಸಂಜೀವ ಪೂಜಾರಿ ಉಪಸ್ಥಿತರಿದ್ದರು.