ನೆಲ್ಯಾಡಿ: ಮುಂದಿನ 5 ವರ್ಷಗಳ ಅವಧಿಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಹಾಗೂ ಉಪಾಧ್ಯಕ್ಷರಾಗಿ ರವಿಚಂದ್ರ ಹೊಸವಕ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ.13ರಂದು ಸಂಘದ ನೆಲ್ಯಾಡಿಯ ಪ್ರಧಾನ ಕಚೇರಿಯಲ್ಲಿ ನಡೆದ ನೂತನ ನಿರ್ದೇಶಕರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ನಿರ್ದೇಶಕರಾದ ಸರ್ವೋತ್ತಮ ಗೌಡ ಹೊಸಮನೆ ಕೌಕ್ರಾಡಿ, ಜಯಾನಂದ ಬಂಟ್ರಿಯಾಲ್ ಕೆಳಗಿನಪರಾರಿ ನೆಲ್ಯಾಡಿ, ಉಷಾ ಅಂಚನ್ ಕುಂಡಡ್ಕ ನೆಲ್ಯಾಡಿ, ಜಿನ್ನಪ್ಪ ಗೌಡ ಮಿತ್ತಪರಕೆ, ಸುಧಾಕರ ಗೌಡ ಬಾಗಿಲುಗದ್ದೆ ಶಿರಾಡಿ, ಸೇಸಮ್ಮ ಪೈಸಾರಿ ಇಚ್ಲಂಪಾಡಿ, ಜನಾರ್ದನ ಗೌಡ ಬರೆಮೇಲು ಶಾಂತಿನಗರ, ಭಾಸ್ಕರ ರೈ ತೋಟ, ಹರೀಶ್ ನುಜೂಲು, ಬಾಬು ನಾಯ್ಕ್ ಅಲಂಗಪೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ವಸಂತ ಎಸ್. ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ.ದಯಾಕರ ರೈ ಸಹಕರಿಸಿದರು.
ಬಾಲಕೃಷ್ಣ ಬಾಣಜಾಲು ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಾಲಕೃಷ್ಣ ಬಾಣಜಾಲು ಅವರು ಕೌಕ್ರಾಡಿ ಗ್ರಾಮದ ಬಾಣಜಾಲು ದಿ.ಕೃಷ್ಣಪ್ಪ ಪೂಜಾರಿ ಹಾಗೂ ದಿ.ಅಪ್ಪಿ ದಂಪತಿ ಪುತ್ರ. ಬಾಲಕೃಷ್ಣ ಅವರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2ನೇ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದು ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯವಾಗಿದ್ದು 1995ರಲ್ಲಿ ಕೌಕ್ರಾಡಿ ಗ್ರಾ.ಪಂ.ಗೆ ಸದಸ್ಯರಾಗಿ ಚುನಾಯಿತರಾಗುವ ಮೂಲಕ ಮೊದಲ ಬಾರಿಗೆ ಚುನಾವಣಾ ರಾಜಕೀಯ ಪ್ರವೇಶಿಸಿದ್ದರು. ಆ ಬಳಿಕ ಕೌಕ್ರಾಡಿ ಗ್ರಾ.ಪಂ.ಗೆ 2ನೇ ಅವಧಿಗೂ ಸದಸ್ಯರಾಗಿ ಚುನಾಯಿತರಾಗಿ ಈ ವೇಳೆ ಎರಡೂವರೇ ವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆ ಬಳಿಕ 5 ವರ್ಷ ದ.ಕ.ಜಿ.ಪಂ.ಸದಸ್ಯರಾಗಿ, 2 ವರ್ಷ ದ.ಕ.ಜಿ.ಪಂ.ನ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪುತ್ತೂರು ಎಪಿಎಂಸಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಬಿಜೆಪಿ ದ.ಕ.ಜಿಲ್ಲಾ ಸಮಿತಿ ಸದಸ್ಯರಾಗಿ, ಹೊಸಮಜಲು ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷರಾಗಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಕೃಷಿಕರೂ ಆಗಿರುವ ಇವರಿಗೆ ಜಿಲ್ಲಾಮಟ್ಟದ ಉತ್ತಮ ಭತ್ತ ಬೆಳೆಗಾರ ಪ್ರಶಸ್ತಿಯೂ ಲಭಿಸಿತ್ತು.
ರವಿಚಂದ್ರ ಹೊಸವಕ್ಲು ಪರಿಚಯ:
ನೆಲ್ಯಾಡಿ ಗ್ರಾಮದ ಹೊಸವಕ್ಲು ನಿವಾಸಿ ಜಿನ್ನಪ್ಪ ಗೌಡ ಹಾಗೂ ಸೀತಮ್ಮ ದಂಪತಿಯ ಪುತ್ರರಾದ ರವಿಚಂದ್ರ ಹೊಸವಕ್ಲು ಅವರು ಇದೇ ಮೊದಲ ಬಾರಿಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ನೆಲ್ಯಾಡಿ ಜೇಸಿಐ ಅಧ್ಯಕ್ಷರಾಗಿ, ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಅಧ್ಯಕ್ಷರಾಗಿ, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಸ್ಥಾಪಕ ಕಾರ್ಯದರ್ಶಿಯಾಗಿ ಆ ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸ್ವಸಹಾಯ ಸಂಘಗಳ ಟ್ರಸ್ಟ್‌ನ ನಿರ್ದೇಶಕರಾಗಿ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷರಾಗಿ, ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.