ಪುತ್ತೂರಿನಲ್ಲಿ 268 ಕೋಟಿ ರೂ. ಗ್ಯಾರಂಟಿಗೆ ವಿನಿಯೋಗವಾಗಿದೆ: ಉಮಾನಾಥ್ ಶೆಟ್ಟಿ
ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲಿ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಆರಂಭದಲ್ಲಿ ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಕೇವಲವಾಗಿ ಮಾತನಾಡಲು ಆರಂಭಿಸಿದ್ದರು ಆದರೆ ಇಂದು ಅದೇ ಗ್ಯಾರಂಟಿ ಯೋಜನೆ ಅದೆಷ್ಟೋ ಬಡ ಮಹಿಳೆಯರ ಪಾಲಿಗೆ ಬೆಳಕಾಗಿರುವುದು ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ. ಪುತ್ತೂರಿನಲ್ಲಿ ಗ್ಯಾರಂಟಿ ಯೋಜನೆಯಡಿ ಸುಮಾರು 268 ಕೋಟಿ ರೂಪಾಯಿಗಳು ಮಹಿಳೆಯರ ಖಾತೆಗಳಿಗೆ ಜಮೆಯಾಗಿರುವುದು ಖುಷಿ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿಯವರು ಹೇಳಿದರು.

ಅವರು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಇದರ ಸಹಯೋಗದಲ್ಲಿ ಫೆ.18 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಅರಿಯಡ್ಕ ಮತ್ತು ಕೊಳ್ತಿಗೆ ಗ್ರಾಮಗಳಲ್ಲಿ ನೋಂದಾವಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷವಾಗಿ ಇಲಾಖೆಯ ಅಧಿಕಾರಿಗಳು ಬಹಳಷ್ಟು ಶ್ರಮಪಟ್ಟಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಶ್ರಮದಿಂದ ಸುಮಾರು 103 ಕೋಟಿ ರೂ. ಗೃಹಲಕ್ಷ್ಮೀಯ ಹೆಸರಲ್ಲಿ ಮಹಿಳೆಯರ ಖಾತೆಗೆ ಜಮೆಯಾಗಿದೆ ಎಂದು ತಿಳಿಸಿದ ಉಮಾನಾಥ ಶೆಟ್ಟಿಯವರು, ಪುತ್ತೂರು ಕ್ಷೇತ್ರ ವ್ಯಾಪ್ತಿಯ ವಿಟ್ಲಕ್ಕೆ ಸಂಬಂಧಿಸಿದಂತೆ ಸುಮಾರು 31 ಕೋಟಿ ರೂ. ಗ್ಯಾರಂಟಿಗೆ ವಿನಿಯೋಗವಾಗಿದೆ. ಒಟ್ಟಿನಲ್ಲಿ ಬಡವರ ಪಾಲಿಗೆ ಗ್ಯಾರಂಟಿ ಯೋಜನೆ ಭರವಸೆಯ ಬೆಳಕಾಗಿದೆ ಎಂದು ಅವರು ಹೇಳಿದರು.
ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲಿ: ತ್ರಿವೇಣಿ ಪಲ್ಲತ್ತಾರು
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಸರಕಾರದ ಯಾವುದೆ ಯೋಜನೆಗಳು ಕೂಡ ಅರ್ಹ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ದೊರೆಯುವಂತಾಗಬೇಕು ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರು ವಿಶೇಷ ಮುತುವರ್ಜಿ ತೆಗೆದುಕೊಳ್ಳಬೇಕು ಎಂದರು. ಆರ್ಥಿಕ ಸ್ವಾವಲಂಬನೆಯ ಜೊತೆಯಲ್ಲೇ ಸ್ವಚ್ಚತೆಯನ್ನು ಪಾಲಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತವರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ಈ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊಟ್ಟಿರುವ ಪಂಚ ಗ್ಯಾರಂಟಿಗಳು ಬಡ ಜನರ ಬದುಕಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಕೆಲಸ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.ಪಂಚ ಗ್ಯಾರಂಟಿ ಯೋಜನೆ ಹಸಿದವನಿಗೆ ಅನ್ನ ನೀಡುವ ಯೋಜನೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಜಿಲ್ಲಾ ಸ್ಚಚ್ಛತಾ ರಾಯಭಾರಿ, ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾದ ಶೀನ ಶೆಟ್ಟಿಯವರು ಮಾತನಾಡಿ, ಪಂಚ ಗ್ಯಾರಂಟಿಯನ್ನು ವಿಶ್ವಸಂಸ್ಥೆ ಕೂಡ ಒಪ್ಪಿಕೊಂಡಿದ್ದು ಪಂಚ ಗ್ಯಾರಂಟಿಯಿಂದ ಬದುಕು ಸುಂದರವಾಗಿದೆ ಆದರೆ ನಮ್ಮ ಭವಿಷ್ಯ ಒಳ್ಳೆಯದಾಗಬೇಕಾದರೆ ಇನ್ನೆರಡು ಗ್ಯಾರಂಟಿಗಳನ್ನು ಸೇರಿಸಿಕೊಳ್ಳಬೇಕಾಗಿದೆ ಅದೇನಂದರೆ ನಮ್ಮಲ್ಲಿ ಉತ್ಪತ್ತಿಯಾಗುವ ಕಸ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದಿಲ್ಲ, ನಮ್ಮ ಮನೆಯನ್ನು ಕಸಮುಕ್ತ ಮನೆಯನ್ನಾಗಿ ಮಾಡುತ್ತೇನೆ ಎನ್ನುವ ಗ್ಯಾರಂಟಿಯನ್ನು ನಾವು ಸರಕಾರಕ್ಕೆ ಕೊಡಬೇಕಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ವ್ಯವಸ್ಥಾಪಕ ಜಯಪ್ರಕಾಶ್, ಸಿಡಿಪಿಒ ಮಂಜುಳಾ, ಸಾರಿಗೆ ಇಲಾಖೆಯ ಅಧಿಕಾರಿ ಗಿರೀಶ್, ಮೆಸ್ಕಾಂ ಎಇಇ ಶಿವಶಂಕರ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಅಶೋಕ್ ಪೂಜಾರಿ ಬೊಳ್ಳಾಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಸ್ಮಾ ಉಮ್ಮರ್ ಗಟ್ಟಮನೆ, ವಿಜಯಲಕ್ಷ್ಮೀ, ಫಾರೂಕ್ ಪೆರ್ನೆ, ವಿಶ್ವಜಿತ್ ಅಮ್ಮುಂಜೆ, ಅಬ್ಬು ನವಗ್ರಾಮ ಮತ್ತಿತರರು ಉಪಸ್ಥಿತರಿದ್ದರು. ಕೆದಂಬಾಡಿ ಗ್ರಾಪಂ ಪಿಡಿಒ ಅಜಿತ್ ಜಿ.ಕೆ, ಕೆಯ್ಯೂರು ಪಿಡಿಒ ನಮಿತಾ ಎ.ಕೆ, ಅರಿಯಡ್ಕ ಮತ್ತು ಕೊಳ್ತಿಗೆ ಗ್ರಾಪಂ ಪಿಡಿಒ ಸುನೀಲ್ ಎಚ್.ಟಿ ಅತಿಥಿಗಳಾಗಿ ಹೂ ನೀಡಿ ಸ್ವಾಗತಿಸಿದರು. ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಪಂಚ ಗ್ರಾಮಗಳ ಅಭಿಯಾನ ಶಿಬಿರ
ಸರಕಾರದ ಪಂಚ ಗ್ಯಾರಂಟಿ ಯೋಜನೆ, ಬಾಕಿ ಇರುವ, ತಿರಸ್ಕೃತ ಅರ್ಜಿಗಳ ವಿಲೇವಾರಿ, ಯುವನಿಧಿ ನೋಂದಣಿ ಅಭಿಯಾನ ಶಿಬಿರದಲ್ಲಿ ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಅರಿಯಡ್ಕ ಮತ್ತು ಕೊಳ್ತಿಗೆ ಒಟ್ಟು 5 ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆದ ಶಿಬಿರದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿಗೆ ಭಾಗವಹಿಸಿದ್ದು 180 ಕ್ಕೂ ಅಧಿಕ ನೋಂದಣಿ, ಅರ್ಜಿಗಳ ವಿಲೇವಾರಿ ನಡೆದಿದೆ.