ವಿದ್ಯಾರ್ಥಿಗಳು ಜ್ಞಾನದ ಅರಿವು, ವ್ಯವಹಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು – ಗಿರಿಶಂಕರ ಸುಲಾಯ
ಕಾಣಿಯೂರು: ಶಾಲೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ದೂರೆಯಬೇಕು, ಮಾರುಕಟ್ಟೆ ಹೇಗೆ ಇರುತ್ತದೆ, ಮಾರುಕಟ್ಟೆಯ ವ್ಯಾಪಾರ ಹೇಗೆ ನಡೆಯುತ್ತದೆ, ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲವಾಗುತ್ತದೆ ಎಂಬುದೇ ಮೆಟ್ರಿಕ್ ಮೇಳದ ಮುಖ್ಯ ಉದ್ದೇಶ ಎಂದು ಸವಣೂರು ಗ್ರಾಮ ಪಂಚಾಯತ್ ಸದಸ್ಯರು, ಸಾಮಾಜಿಕ ಮುಂದಾಳು ಗಿರಿಶಂಕರ ಸುಲಾಯ ಹೇಳಿದರು. ಅವರು ಫೆ 18ರಂದು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೆಟ್ರಿಕ್ ಮೇಳ ಮಕ್ಕಳ ಮಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ವ್ಯಾಪಾರವನ್ನು ಮಾಡುವ ಮೂಲಕ ತಮ್ಮ ಜ್ಞಾನದ ಅರಿವು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ವ್ಯವಹಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದವರು ಸಮೃದ್ಧ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಮಹತ್ವದ್ದಾಗಿದೆ ಎಂದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದರವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಸುನಂದಾ ಅಬ್ಬಡ, ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಲೋಕೇಶ್ ಅತಾಜೆ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಮೇಳೈಸಿದ ಮೇಳ- ಉತ್ತಮ ಸ್ಪಂದನೆ
ವ್ಯಾಪಾರ ಮನೋಭಾವ, ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಯ ಪಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ತಾವು ಮನೆಯಿಂದ ತಂದಿರುವ ಚೀನಿ ಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳ ಕಾಯಿ, ಪಡುವಲಕಾಯಿ, ಬಾಳೆಹಣ್ಣು, ಹರಿವೆ ಸೊಪ್ಪು, ಹಸಿಮೆಣಸು, ಟೊಮೇಟೊ, ಸಿಹಿಗೆಣಸು, ಬಸಳೆ, ಎಳೆನೀರು, ವೀಳ್ಯದೆಲೆ, ಅಲಸಂಡೆ, -ತೆಂಗಿನಕಾಯಿ, ಸೀಬೆಕಾಯಿ, ಪರಂಗಿಹಣ್ಣು, ದ್ರಾಕ್ಷಿ, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧ ಸಸ್ಯ, ಹೂವಿನ ಗಿಡ, ಬಾಳೆ ಹೂ, ನರ್ಸರಿ, ಹೂ, ಮಜ್ಜಿಗೆ, ಸೋಪು, ಮಸಲ ಪುರಿ, ಪಾನಿ ಪುರಿ, ಹಾರೆ, ತಿಮರೆ, ತಾಜಾ ಹಣ್ಣಿನ ಜ್ಯೂಸ್ , ತರಕಾರಿಗಳು, ಹಣ್ಣಿನ ಗಿಡಗಳು, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಸಂತೆಯಲ್ಲಿ ಲಭ್ಯವಿದ್ದವು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ.

ವಿಭಿನ್ನ ರೀತಿಯಲ್ಲಿ ಉದ್ಘಾಟನೆ
ಬೊಬ್ಬೆಕೇರಿ ಶಾಲೆಯಲ್ಲಿ ನಡೆದ ಮೆಟ್ರಿಕ್ ಮೇಳಕ್ಕೆ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಲಾಯಿತು. ಮೆರವಣಿಗೆಯ ಮೂಲಕ ಆರಂಭವಾದ ಕಾರ್ಯಕ್ರಮವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಮಕ್ಕಳ ಮಳಿಗೆ ಅಕ್ಷರಗಳಿಗೆ ಅಕ್ಕಿ ಹಾಕುವ ಮೂಲಕ ಸ್ಟಾಲ್ ನ್ನು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.