ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಸುರೇಶ್ ಪುತ್ತೂರಾಯರವರು ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರ ಉಪಸ್ಥಿತಿಯಲ್ಲಿ ಫೆ.19ರಂದು ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿಗಳಾದ ಶಿವರಾಮ ಆಳ್ವ ಬಳ್ಳಮಜಲು, ಭೀಮಯ್ಯ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್., ರವಿಚಂದ್ರ ಆಚಾರ್ಯ ಸಂಪ್ಯ, ಆದರ್ಶ ಮೊಟ್ಟೆತ್ತಡ್ಕ, ಪ್ರೇಮ ಶಿವಪ್ಪ ಸಪಲ್ಯ, ಮೀನಾಕ್ಷಿ ಸೇಶಪ್ಪ ಗೌಡ ನೀರ್ಕಜೆ, ಅರ್ಚಕ ಮೋಹನ ರಾವ್, ಮಾಜಿ ಸದಸ್ಯೆ ಶಶಿಕಲಾ ನಿರಂಜನ ಶೆಟ್ಟಿ ಉಪಸ್ಥಿತರಿದ್ದರು.

ಸನ್ಮಾನ:
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ.ಸುರೇಶ್ ಪುತ್ತೂರಾಯರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಬೊಳುವಾರು ಮಹಾವೀರ ಆಸ್ಪತ್ರೆಯಲ್ಲಿ ಹೆಸರಾಂತ ವೈದ್ಯಕೀಯ ತಜ್ಞರಾಗಿರುವ ಡಾ.ಸುರೇಶ್ ಪುತ್ತೂರಾಯರವರು, ಪುತ್ತೂರು ಶ್ರೀನಿವಾಸ ಕಲ್ಯಾಣೋತ್ಸವ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಗೌರವಾಧ್ಯಕ್ಷರಾಗಿ, ಸಂಪ್ಯ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸಂಪ್ಯ ನವಚೇತನ ಯುವಕ ಮಂಡಲ ಗೌರವಾಧ್ಯಕ್ಷರಾಗಿ, ಪುತ್ತೂರು ಡಾಕ್ಟರ್ಸ್ ಫಾರಂನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಳಿಕ ಕಳೆದ 32 ತಿಂಗಳುಗಳಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿಕೊಂಡ ಬರುತ್ತಿದ್ದಾರೆ. ಈ ಶಿಬಿರದ ಮೂಲಕ ಮಧುಮೇಹ ತಪಾಸಣೆಯಲ್ಲಿ ಅದ್ವಿತೀಯ ಸೇವೆ, ಆರೋಗ್ಯ ಜಾಗೃತಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.