ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ 34ನೆಕ್ಕಿಲಾಡಿಯಲ್ಲಿ ಕೃತಕ ನೆರೆಯುಂಟಾಗಿ ಮನೆಗಳಿಗೆ ಹಾಗೂ ಉದ್ಯಮ ಸಂಸ್ಥೆಗಳ ವರಾಂಡಕ್ಕೆ ನೀರು ನುಗ್ಗಿದ ಘಟನೆ ಮೇ 24ರಂದು ನಡೆದಿದೆ.
34 ನೆಕ್ಕಿಲಾಡಿಯ ಅಂಡರ್ಪಾಸ್ನಡಿ ಮಳೆ ನೀರು ಹೋಗಲು ಜಾಗವಿಲ್ಲದೆ ನೀರು ನಿಂತು ಕೆರೆಯಂತಾಗಿದ್ದು, ಆ ನೀರು ಕೆಳ ಪ್ರದೇಶದಲ್ಲಿರುವ ಮೂರು ಮನೆಗಳಿಗೆ ಹಾಗೂ ಅಲ್ಲೇ ಸಮೀಪದಲ್ಲಿರುವ ಉದ್ಯಮ ಸಂಸ್ಥೆಗಳ ವಠಾರಕ್ಕೆ ನುಗ್ಗಿದೆ. ಇದರಿಂದ ಆಕ್ರೋಶಿತಗೊಂಡ ಸ್ಥಳೀಯರು ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಬಳಿಕ ಗುತ್ತಿಗೆದಾರ ಸಂಸ್ಥೆಯವರು ತಾತ್ಕಾಲಿಕ ಕಾಮಗಾರಿ ನಡೆಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಿದರು. ಅಂಡರ್ಪಾಸ್ ಬಳಿಯ ಸರ್ವೀಸ್ ರಸ್ತೆಯ ರಿಟರ್ನ್ ವಾಲ್ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದರಿಂದ ಮಳೆಗಾಲದಲ್ಲಿ ಮಳೆ ನೀರು ಹೋಗಲು ಜಾಗವಿಲ್ಲದೆ, ಈ ಸಮಸ್ಯೆ ಉದ್ಭವವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಣೇಶ ನಾಯ್ಕ ಮತ್ತು ಪಾಂಡು ಅವರ ಮನೆಯೊಳಗೆಲ್ಲಾ ಏಕಾಏಕಿ ನೀರು ನುಗ್ಗಿದ್ದರಿಂದ ಲೇಬಲ್ ಹಾಕಲು ತಂದಿಟ್ಟಿದ್ದ ಬೀಡಿಗಳು ನಾಶವಾಗಿವೆ.