ಪುತ್ತೂರು: ಗಾಂಧೀಯವರ ಅಹಿಂಸೆ, ಸ್ವದೇಶಿ ವಸ್ತುಗಳ ಬಳಕೆ ಮೊದಲಾದ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಬೇಕು. ಹೊರ ದೇಶದ ವಸ್ತುಗಳಿಗೆ ನಮ್ಮ ದೇಶದಲ್ಲಿ ಬಹಳಷ್ಟು ಬೇಡಿಕೆ ಬರುತ್ತಿದ್ದರೂ ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನೇ ಬಳಕೆ ಮಾಡಬೇಕು. ನಾವು ಉತ್ಪಾದಿಸಿದ ವಸ್ತುಗಳನ್ನು ಇತರ ದೇಶಗಳಿಗೆ ರಪ್ತು ಮಾಡಿದಾಗ ನಮ್ಮ ದೇಶವೂ ಅರ್ಥಿಕವಾಗಿ ಮುಂದುವರಿಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಗಾಂಧೀ ಕಟ್ಟೆ ಸಮಿತಿಯ ಆಶ್ರಯದಲ್ಲಿ ಬಸ್ ನಿಲ್ದಾಣದ ಬಳಿಯಿರುವ ಗಾಂಧೀ ಕಟ್ಟೆಯಲ್ಲಿ ಅ.2ರಂದು ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀ ಪ್ರತಿಮೆಗೆ ಹಾರಾರ್ಪಾಣೆ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾವು ಸ್ವತಂತ್ರ ಪಡೆದು 240 ವರ್ಷ ಕಳೆದಿದೆ. ಭಾರತ ಸ್ವಾತಂತ್ರ ಪಡೆದು 79 ವರ್ಷ ಆಗಿದೆಯಷ್ಟೇ. ಅಭಿವೃದ್ಧಿಯಲ್ಲಿ ಅಮೇರಿಕಾಕ್ಕೆ ಹೋಳಿಕೆ ಮಾಡಿದರೆ ಭಾರತ ಬಳಹಷ್ಟು ಮುಂದುವರಿಯುತ್ತಿದೆ. 79 ವರ್ಷದ ಹಿಂದೆ ಬ್ರಿಟೀಷರು ಭಾರತದಿಂದ ಎಲ್ಲಾ ಸಂಪತ್ತನ್ನು ಕೊಂಡು ಹೋಗಿದ್ದರೂ ಈಗ ದೇಶ ಬಹಳಷ್ಟು ಮುಂದುವರಿದ್ದೇವೆ. ಗಾಂಧೀಜಿಯವರ ಜೊತೆಗೆ ಹಲವು ಮಂದಿ ತಮ್ಮ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅದನ್ನು ಮುಂದುವರಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ದೇಶದಲ್ಲಿ ಹುಟ್ಟಿ, ದಣೆಶಕ್ಕಾಗಿ ತ್ಯಾಗ ಮಾಡಿ, ದೇಶಕ್ಕಾಗಿ ಉತ್ತಮ ಸಂದೇಶ ನೀಡಿದ ಮಹಾತ್ಮ ಗಾಂಧೀಜಿಯವರ ಹುಟ್ಟಿದ ದಿನ ಅವರು ತತ್ವ, ಸಿದ್ದಾಂತಗಳಿಗೆ ಗೌರವ ಕೊಡುವ ಕೆಲಸವಗಬೇಕು ಎಂದು ಹೇಳಿದರು.
ಸಂಸ್ಮರಣಾ ದೀಪ ಬೆಳಗಿಸಿದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಗಾಂಧೀ ಜಯಂತಿಯು ಶಾಂತಿ, ಅಹಿಂಸೆ ಪ್ರತೀಕವಾದ ದಿನ. ಮಹಾತ್ಮ ಗಾಂಧೀಜಿಯವರು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದಕೊಟ್ಟವರು. ಜೈಲು ಶಿಕ್ಷೆ, ಲಾಠಿಚಾರ್ಜ್‌ಗಳನ್ನು ಅನುಭವಿಸಿದರೂ ಹಿಂಸೆಯ ಹಾದಿ ಹಿಡಿದವರಲ್ಲ. ಅಹಿಂಸೆ ಸೌಹಾರ್ದತೆ, ಸ್ವಚ್ಚತೆ ಮೊದಲಾದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದು, ಅವರ ತತ್ವಗಳಲ್ಲಿ ಕೆಲವೊಂದು ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಗಾಂಧೀಯವರು ಕಂಡ ಕನಸಿನ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ನಾಗರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪೂಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಬೋಲೋಡಿ ಚಂದ್ರಹಾಸ ರೈ, ನಗರ ಠಾಣಾ ನಿರೀಕ್ಷಕ ಜಾನ್ಸನ್ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಂಧೀ ಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯರು, ವಕೀಲರ ಸಂಘದ ಅಧ್ಯಕ್ಷರಾಗಿರುವ ಜಗನ್ನಾಥ ರೈ ವಂದಿಸಿದರು. ಇಸಾಖ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ಪ್ರೌಢಶಾಲೆ, ಸುದಾನ ಶಾಲೆ, ಕಾವು ಬುಶ್ರಾ ಶಾಲೆಗಳ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಸರ್ವಧರ್ಮ ಪ್ರಾರ್ಥಣೆ ಹಾಡಿದರು. ಗಾಂಧೀ ಕಟ್ಟೆ ಸಮಿತಿಯ ಸಯ್ಯದ್ ಕಮಲ್, ರೋಶನ್ ರೈ, ಸುಪ್ರೀತ್ ಕಣ್ಣಾರಾಯ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.