







ದಿ ಪೊಲಿಟಿಕಲ್ ಸ್ಟೆಪ್ ಆಪ್ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು


ಪುತ್ತೂರು: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಿರುವ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ರಾಜಕೀಯ ಜರ್ನಿಯ ಒಂದು ಪುಟ್ಟ ಅವಲೋಕನ. ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಶಿವಪ್ಪ ಪೂಜಾರಿ ಮತ್ತು ಚಂದ್ರಾವತಿಯವರ ಪುತ್ರಿಯಾಗಿರುವ ಇವರು ರಾಜಕೀಯಕ್ಕೆ ಎಂಟ್ರಿಯಾಗಿದ್ದೆ ಒಂದು ವಿಶೇಷ. 2013 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನದೀಪ ಶಿಕ್ಷಕಿಯಾಗಿ ಸೇರ್ಪಡೆಗೊಂಡ ಇವರು ಒಂದಷ್ಟು ವರ್ಷಗಳ ಕಾಲ ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಆಗಿ ಸೇವೆ ಸಲ್ಲಿಸಿದ್ದರು. ಈ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಯಾಗಿ ಸೇವೆಗೆ ಸೇರಿಕೊಂಡು, ಆ ಬಳಿಕ 2015 ರಲ್ಲಿ ಇವರು ರಾಜಕೀಯಕ್ಕೆ ಬಿಗ್ ಎಂಟ್ರಿ ಪಡೆದುಕೊಳ್ಳುತ್ತಾರೆ. ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್ ಪಡೆದುಕೊಂಡು ಸ್ಪರ್ಧೆಗೆ ಇಳಿಯುತ್ತಾರೆ ಮೊದಲ ಹಂತದಲ್ಲೇ ಅಭೂತಪೂರ್ವ ಗೆಲುವು ಪಡೆದುಕೊಂಡ ತ್ರಿವೇಣಿ ಪಲ್ಲತ್ತಾರುರವರು 2015ರಿಂದ2021ರ ತನಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ಆ ಬಳಿಕದ ಚುನಾವಣೆಯಲ್ಲೂ ಸ್ಪರ್ಧಿಸಿ ಜಯಗಳಿಸಿದ ಇವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿಯುತ್ತದೆ. 2021 ರಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲರ ಸಹಕಾರ ಪಡೆದುಕೊಂಡು ಎರಡೂವರೆ ವರ್ಷಗಳ ಕಾಲ ಒಬ್ಬರು ಉತ್ತಮ ಅಧ್ಯಕ್ಷೆ ಎನ್ನುವ ರೀತಿಯಲ್ಲಿ ಗ್ರಾಮದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾರೆ. ಎರಡೂವರೆ ವರ್ಷದ ಅವಧಿ ಮುಗಿದರೂ ಅಧ್ಯಕ್ಷ ಸ್ಥಾನದ ಅದೃಷ್ಟ ಮಾತ್ರ ಇವರನ್ನು ಕೈ ಬಿಡಲಿಲ್ಲ. ಇವರು ಸಮಾಜಕ್ಕೆ ನೀಡಿದ ಕೊಡುಗೆಯಿಂದಲೇ ಮತ್ತೆ ಟಾಸ್ ವಿನ್ ಮೂಲಕ ಅಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. ಇದುವೆ ನೋಡಿ ಅದೃಷ್ಟ ಅನ್ನೋದು ಹಾಗಂತ ತ್ರಿವೇಣಿ ಪಲ್ಲತ್ತಾರು ಎಲ್ಲಿಯೂ ಉದಾಸೀನತೆ ತೋರಿಸಲಿಲ್ಲ. ಓರ್ವ ಮಹಿಳೆಯಾಗಿ ತನ್ನಿಂದ ಎಷ್ಡು ಸಾಧ್ಯವೋ ಅದಕ್ಕಿಂತ ಹತ್ತು ಪಟ್ಟು ಶ್ರಮ ವಹಿಸಿ ಗ್ರಾಮದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾರೆ. 2021 ರಿಂದ 2025 ರ ತನಕ ಸತತ 5 ವರ್ಷಗಳ ಕಾಲ ಅಧ್ಯಕ್ಷರಾಗಿದ್ದುಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ಒಬ್ಬರು ‘ ದಣಿವರಿಯದ ಜನ ಸೇವಕಿ’ಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಪತಿ ಉದ್ಯಮಿ ಪ್ರವೀಣ್ ಪಲ್ಲತ್ತಾರು, ಪುತ್ರಿ ರಾಜ್ಯ ಮಟ್ಟದ ಕರಾಟೆ ಪ್ರತಿಭೆ ಸ್ಮೃತಿ ಪಲ್ಲತ್ತಾರು, ಪುತ್ರ ರಾಷ್ಟ್ರೀಯ ಸಿಎಸ್ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡ ಸೃಜನ್ ಕೆ.ಪಿಯವರೊಂದಿಗೆ ಪಲ್ಲತ್ತಾರುನಲ್ಲಿ ವಾಸ್ತವ್ಯವಿದ್ದಾರೆ.



ಸ್ವಚ್ಛತೆಯೇ ಉಸಿರು…
ತ್ರಿವೇಣಿ ಪಲ್ಲತ್ತಾರುರವರ ಬಹುದೊಡ್ಡ ಕನಸು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು ಇದಕ್ಕಾಗಿ ಇವರು ಹಗಲಿರುಳು ಶ್ರಮ ಪಟ್ಟಿದ್ದಾರೆ. ಸ್ವಚ್ಛ ಭಾರತದ ಕನಸು ಕಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯನ್ನೇ ಮೈಗೂಡಿಸಿಕೊಂಡ ಇವರು ಪಂಚಾಯತ್ನಿಂದ ಪ್ರತಿ ಭಾರಿಯೂ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವತಃ ತಾನೇ ಪೊರಕೆ ಹಿಡಿದು ಸ್ವಚ್ಛತೆ ಮಾಡುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರಿದ್ದಾರೆ. ತಾಲೂಕು ಪಂಚಾಯತ್ ಹಮ್ಮಿಕೊಂಡಿದ್ದ 10 ದಿನಗಳ ಸ್ವಚ್ಛತಾ ಅಭಿಯಾನದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಪ್ರತಿ ದಿನ ಗ್ರಾಮದ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಪ್ಲಾಸ್ಟಿಕ್ ಸುಡುವ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದ್ದರು. ಪ್ಲಾಸ್ಟಿಕ್ ಸುಡುತ್ತಿರುವುದು ಕಂಡು ಬಂದರೆ ಅಲ್ಲಿಗೆ ಹೋಗಿ ದಂಡನೆ ವಿಧಿಸುವ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುತ್ತಿದ್ದವರನ್ನು ಪತ್ತೆ ಹಚ್ಚಿ ದಂಡನೆ ಹಾಕುವ ಕೆಲಸವೂ ನಡೆದಿದೆ. ಸ್ವಚ್ಛತೆಯ ವಿಷಯದಲ್ಲಿ ತಾಲೂಕಿನಲ್ಲೇ ಎರಡನೇ ಬಹುಮಾನವನ್ನು ಒಳಮೊಗ್ರು ಗ್ರಾಮ ಪಂಚಾಯತ್ ಪಡೆದುಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಕುಡಿಯವ ನೀರು ಮತ್ತು ನೈರ್ಮಲ್ಯತೆ
ಗ್ರಾಮದ ಯಾರಿಗೂ ಕುಡಿಯುವ ನೀರಿನ ವಿಷಯದಲ್ಲಿ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಿದವರು ತ್ರಿವೇಣಿ ಪಲ್ಲತ್ತಾರು ಆಗಿದ್ದಾರೆ. ಸಿಬ್ಬಂದಿಗಳ ಹಾಗೇ ಆಡಳಿತ ಮಂಡಳಿ ಸದಸ್ಯರ ಸಹಕಾರ ಪಡೆದುಕೊಂಡು ಗ್ರಾಮದ ಎಲ್ಲಾ ಮನೆಗಳಿಗೂ ನೀರು ಸರಬರಾಜಿನಲ್ಲಿ ತೊಂದರೆಯಾಗಬಾರದು ಎಂದು ಶ್ರಮ ಪಟ್ಟಿದ್ದಾರೆ.ಎಲ್ಲಾದರೂ ಪೈಪು ದುರಸ್ತಿ ಕಂಡು ಬಂದರೆ ಸ್ವತಃ ತಾನೇ ಖುದ್ದು ನಿಂತು ಸರಿ ಪಡಿಸುತ್ತಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಪಡೆದುಕೊಂಡು ಗ್ರಾಮದಲ್ಲಿರುವ ಕೆರೆಗಳ ಅಭಿವೃದ್ಧಿಯನ್ನು ಕೂಡ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲಬೇಕಾಗಿದೆ. ಇನ್ನು ಗ್ರಾಮದ ನೈರ್ಮಲ್ಯದ ವಿಷಯದಲ್ಲಿ ನೈರ್ಮಲ್ಯ ಸಮಿತಿಯನ್ನು ಬಳಸಿಕೊಂಡು ತಿಂಗಳಿಗೊಮ್ಮೆ ಗ್ರಾಮದ ಪೇಟೆ ಸುತ್ತಾ ಪರಿಶೀಲನೆ ನಡೆಸಿ ಎಲ್ಲಾದರೂ ಗಲೀಜು ನೀರು ಹರಿಯತ್ತಿದ್ದರೆ ಅಥವಾ ಇಂಗು ಗುಂಡಿಗಳು ಇಲ್ಲದೇ ಇದ್ದರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕೆಲಸವೂ ಆಗುತ್ತಿತ್ತು.
ಭ್ರಷ್ಟಾಚಾರ ರಹಿತ ಆಡಳಿತ
ಒಳಮೊಗ್ರು ಗ್ರಾಮ ಪಂಚಾಯತ್ಗೆ ಬಲುದೊಡ್ಡ ಹೆಸರು ತಂದುಕೊಟ್ಟಿದ್ದು ಭ್ರಷ್ಟಾಚಾರ ರಹಿತ ಆಡಳಿತ. ತ್ರಿವೇಣಿ ಪಲ್ಲತ್ತಾರುರವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಭ್ರಷ್ಟಚಾರ ರಹಿತ ಆಡಳಿತ ನಡೆಸುವ ಬಗ್ಗೆ ಬಲುದೊಡ್ಡ ನಿರ್ಣಯವೊಂದನ್ನು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸುತ್ತಾರೆ. ಇದು ಸುದ್ದಿ ಬಿಡುಗಡೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನವದೆಹಲಿ ತನಕ ದೊಡ್ಡ ಮಟ್ಟದ ಸುದ್ದಿಯಾಗುತ್ತೆ. ಸುದ್ದಿ ಜನಾಂದೋಲನದ ‘ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ಎಂಬ ಘೋಷವಾಕ್ಯದಂತೆ ಒಳಮೊಗ್ರು ಗ್ರಾಪಂ ಒಂದು ಮಾದರಿ ಗ್ರಾಮ ಪಂಚಾಯತ್ ಆಗಿ ಮೂಡಿಬರುತ್ತದೆ. ತನ್ನ ಅಧಿಕಾರದ ಈ 5 ವರ್ಷಗಳ ತನಕವೂ ಒಂದಿಷ್ಟು ಲಂಚ, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡದೆ ಆಡಳಿತ ನಡೆಸಿದ ಕೀರ್ತಿ ತ್ರಿವೇಣಿ ಪಲ್ಲತ್ತಾರು ಮತ್ತು ಆಡಳಿತ ಮಂಡಳಿ, ಸಿಬ್ಬಂದಿ ವರ್ಗಕ್ಕೆ ಸಲ್ಲಬೇಕಾಗುತ್ತದೆ.
ದಣಿವರಿಯದ ಜನ ಸೇವಕಿ…
ಒರ್ವ ಮಹಿಳಾ ಅಧ್ಯಕ್ಷೆಯಾಗಿ ಪಂಚಾಯತ್ ಅನ್ನು ನಡೆಸಿಕೊಂಡು ಹೋದ ರೀತಿಯ ವಿಶೇಷವಾಗಿದೆ. ಎಲ್ಲರನ್ನು ಒಮ್ಮತಕ್ಕೆ ಪಡೆದುಕೊಂಡು ಅಭಿವೃದ್ಧಿ ವಿಷಯದಲ್ಲಿ ಎಲ್ಲಿಯೂ ರಾಜಕೀಯ ಮಾಡದೆ ಗ್ರಾಮದ ಎಲ್ಲರೊಂದಿಗೆ ರಾಜಕೀಯ ರಹಿತವಾಗಿ ಬೆರೆತ ಓರ್ವ ಅಧ್ಯಕ್ಷೆ ಇದ್ದರೆ ಅದು ತ್ರಿವೇಣಿ ಪಲ್ಲತ್ತಾರು ಆಗಿದ್ದಾರೆ. ಇವರನ್ನು ‘ದಣಿವರಿಯದ ಜನ ಸೇವಕಿ’ ಎಂದೇ ಕರೆಯಬಹುದು ಏಕೆಂದರೆ ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರಿಕೊಳ್ಳುವುದು ರಾತ್ರಿ 7 ಗಂಟೆಗೆ, ಇವರು ಯೋಜನೆಯ ಸೇವಾ ಪ್ರತಿನಿಧಿಯಾಗಿಯೂ ಸೇವೆ ಮಾಡುತ್ತಿರುವುದರಿಂದ ಪ್ರತಿ ದಿನ ಒಂದಷ್ಟು ಸಂಘಗಳನ್ನು ಭೇಟಿ ಮಾಡಬೇಕು, ಜ್ಞಾನವಿಕಾಸ ಸಭೆ, ಒಕ್ಕೂಟ ಸಭೆ ಇತ್ಯಾದಿಗಳನ್ನು ಮಾಡಬೇಕು, ಯೋಜನೆಯ ಸಾಲದ ವ್ಯವಹಾರಗಳನ್ನು ಕೂಡ ನಿಭಾಯಿಸಬೇಕು ಇದರೊಟ್ಟಿಗೆ ಪಂಚಾಯತ್ ಅಭಿವೃದ್ಧಿ ಕೆಲಸಗಳನ್ನು ನೋಡಿಕೊಳ್ಳಬೇಕು, ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕು ಹಾಗಂತ ಇವರು ಒಂದೇ ಒಂದು ಸಭೆ, ಸಮಾರಂಭ, ಮೀಟಿಂಗ್ಗಳಿಗೆ ತಪ್ಪಿಸಿದವರು ಅಲ್ಲ, ಅದೆಷ್ಟೇ ಕೆಲಸದ ಒತ್ತಡವಿದ್ದರೂ ಬಿಡುವು ಮಾಡಿಕೊಂಡು ಭಾಗವಹಿಸುತ್ತಾರೆ, ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಾರೆ. ಯೋಜನೆಯಿಂದ ದೊರೆಯುವ ಸವಲತ್ತುಗಳನ್ನು ಕೂಡ ಅತ್ಯಂತ ಪ್ರಾಮಾಣಿಕತೆಯಿಂದ ತಲುಪಿಸುತ್ತಾರೆ. ವಾತ್ಸಲ್ಯ ಮನೆಯಾಗಿರಬಹುದು, ಮಾಶಾಸನ, ವೀಲ್ ಚೆಯರ್ ಇತ್ಯಾದಿ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಶ್ರಮ ವಹಿಸಿದ್ದಾರೆ. ಬಡವರ ಮೇಲೆ ಅತ್ಯಂತ ಹೆಚ್ಚು ಕಾಳಜಿ ಹೊಂದಿದ್ದ ಇವರು ಬಡವರಿಗೆ ಯಾವುದೇ ಅನ್ಯಾಯ ಆದರೂ ಈ ಬಗ್ಗೆ ಸಹಿಸಿಕೊಳ್ಳುತ್ತಿರಲಿಲ್ಲ, ಬಡವರಿಗೆ ಸರಕಾರದ ಸೌಲಭ್ಯಗಳು ಸಿಗಬೇಕು ಎಂಬುದೇ ಇವರ ಧ್ಯೇಯವಾಗಿತ್ತು.
ಪಾರ್ಲಿಮೆಂಟ್ ಭವನದ ರೀತಿಯ ಪಂಚಾಯತ್ ಕಟ್ಟಡ
ಒಳಮೊಗ್ರು ಗ್ರಾಮ ಪಂಚಾಯತ್ಗೆ ಸರಿಯಾದ ಕಟ್ಟಡವಿಲ್ಲದೆ ಅದೆಷ್ಟೋ ವರ್ಷಗಳಿಂದ ಹಳೆಯ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ತ್ರಿವೇಣಿ ಪಲ್ಲತ್ತಾರುರವರು ಅಧ್ಯಕ್ಷರಾದ ಬೆನ್ನಲ್ಲೆ ಪಂಚಾಯತ್ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಸಹಕಾರ ಪಡೆದುಕೊಂಡು ಅತ್ಯಂತ ಸುಂದರವಾದ ‘ಪಾರ್ಲಿಮೆಂಟ್ ಭವನ’ದ ರೀತಿಯಲ್ಲಿರುವ ಕಟ್ಟಡದ ನಿರ್ಮಾಣ ಕೂಡ ಆಗಿದೆ. ಇದಲ್ಲದೆ ಸುಸಜ್ಜಿತವಾದ ಸ್ವಚ್ಛ ಸಂಕೀರ್ಣ ಘಟಕ ಕೂಡ ನಿರ್ಮಾಣವಾಯಿತು. ಇದಕ್ಕೆ ಹೇಳೋದು ಇದು ಭಾಗ್ಯವಯ್ಯ, ಇದು ಭಾಗ್ಯವಯ್ಯ..ಎಂದು.ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷರಾದ ಬಳಿಕ ಇಡೀ ಗ್ರಾಮದ ಚಿತ್ರಣವೇ ಬದಲಾಯಿತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ‘ಗಾಂಧಿ ಗ್ರಾಮ ಪುರಸ್ಕಾರ’ ಸ್ವಚ್ಛತಾ ಸ್ಲೋಗನ್ ಬರಹದಲ್ಲಿ ಜಿಲ್ಲಾ ಮಟ್ಟದಲ್ಲಿ ‘ಪ್ರಥಮ ಬಹುಮಾನ’ ಸ್ವಚ್ಚತೆಯ ವಿಷಯದಲ್ಲಿ ತಾಲೂಕಿನಲ್ಲಿ ‘ ದ್ವಿತೀಯ ಬಹುಮಾನ’ ಪಡೆದುಕೊಂಡ ಹೆಗ್ಗಳಿಕೆ ಒಳಮೊಗ್ರು ಗ್ರಾಮ ಪಂಚಾಯತ್ಗೆ ಸಲ್ಲುತ್ತದೆ.
‘ ಸದಾ ನಗುಮೊಗದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಮೃದು ಮಾತಿನ, ಯಾರಲ್ಲೂ ಧ್ವೇಷವನ್ನು ಬಯಸದೆ, ಎಲ್ಲವನ್ನು ಶಾಂತಚಿತ್ತದಿಂದ ಆಲಿಸುವ ಗುಣವಿರುವ ಒಳಮೊಗ್ರು ಗ್ರಾಮದ ಪ್ರಥಮ ಪ್ರಜೆ, ಗ್ರಾಮದ ‘ಭಾಗ್ಯಲಕ್ಷ್ಮೀ’ ಎಂದೇ ಕರೆಯಬಹುದಾದ ತ್ರಿವೇಣಿ ಪಲ್ಲತ್ತಾರುರವರ ಮುಂದಿನ ಜೀವನ ಅತ್ಯಂತ ಸುಖಕರವಾಗಿರಲಿ, ರಾಜಕೀಯದಲ್ಲಿ ದೊಡ್ಡ ಮಟ್ಟದ ಸ್ಥಾನಮಾನ ಸಿಗಲಿ ಎಂಬುದೇ ನಮ್ಮೆಲ್ಲರ ಆಶಯ.’
ಸೇವಾ ಪ್ರತಿನಿಧಿಯಾಗಿಯೂ ಸೇವೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿ ಕಳೆದ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ತ್ರಿವೇಣಿ ಪಲ್ಲತ್ತಾರುರವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ನೀಡುವಲ್ಲಿ ದಾರಿ ತೋರಿಸಿದ್ದು ಇದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎನ್ನುವ ಮಾತನ್ನು ಅವರು ಹೇಳಲು ಮರೆಯುವುದಿಲ್ಲ. ಮೊದಲಿಗೆ ಕುಂಬ್ರ ವಲಯದ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಟ್ಟಂಪಾಡಿ ವಲಯದ ಸೇವಾ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಸಮುಕ್ತ ಮಾದರಿ ಗ್ರಾಮ ಘೋಷಣೆ
ಒಳಮೊಗ್ರು ಗ್ರಾಮ ಕಸ ಮುಕ್ತ, ನಶ ಮುಕ್ತ ಗ್ರಾಮವಾಗಬೇಕು ಎಂಬ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳು ನಡೆದಿದ್ದು ಈ ಬಗ್ಗೆ ಈಗಾಗಲೇ ಮನೆ ಮನೆಯಿಂದ ‘ಕಸ ಮುಕ್ತ ಮನೆ, ಸ್ವಯಂ ಘೋಷಣಾ ಪತ್ರ’ವನ್ನು ಸಂಗ್ರಹಿಸಲಾಗಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವ ಕೆಲಸವೂ ಆಗುತ್ತದೆ. ಆ ಮೂಲಕ ತಾಲೂಕಿಗೆ ಸ್ವಚ್ಛ ಗ್ರಾಮವಾಗಿ ಒಳಮೊಗ್ರು ತೆರೆದುಕೊಳ್ಳಲಿದೆ.










