ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದಿಂದ ಸುವರ್ಣ ಕನ್ನಡಿಗ ಪುತ್ತೂರು ಉಮೇಶ್ ನಾಯಕರಿಗೆ ಗೌರವಾರ್ಪಣೆ

0

ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉಮೇಶ್ ನಾಯಕರು ನೀಡಿದ ಸೇವೆ ಅನನ್ಯ – ಮಂಗಳ ಕಾಳೆ

ಪುತ್ತೂರು : ಪುತ್ತೂರು ಹಾಗೂ ಕಡಬ ತಾಲೂಕಿನ ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರ / ಗ್ರಾಮೀಣ / ನಗರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಏ.6 ರಂದು ನಡೆಯಿತು.ಪುತ್ತೂರು ತಾಲ್ಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿಕಲ ಚೇತನರ ನೋಡೆಲ್ ಅಧಿಕಾರಿ ಮಂಗಳ ಕಾಳೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಹಾಗೂ ಕಡಬ ತಾಲ್ಲೂಕು ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರ /ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರ ಒಕ್ಕೂಟದ ವತಿಯಿಂದ ‘ಸುವರ್ಣ ಕನ್ನಡಿಗ’ ಪ್ರಶಸ್ತಿ ಪುರಸ್ಕೃತ ಪುತ್ತೂರು ಉಮೇಶ್ ನಾಯಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಮಂಗಳಾ ಕಾಳೆ ಮಾತನಾಡಿ, ಐದು ವರ್ಷದ ಹಿಂದೆ ಎಚ್ಐವಿ ಪೀಡಿತ ಮಹಿಳೆ ಹಾಗೂ ಇಬ್ಬರು ಎಚ್ಐವಿ ಪೀಡಿತ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಕಾರ್ಯಾಚರಣೆಯಲ್ಲಿ ಅವರ ಸೇವೆ ಅನನ್ಯವಾಗಿದೆ ಮಾತ್ರವಲ್ಲದೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸವಾಲಾಗಿರುವ ಅನೇಕ ರಕ್ಷಣಾ ಕಾರ್ಯಗಳನ್ನು ಉಮೇಶ್ ನಾಯಕರು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದರು.

ಬನ್ನೂರು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಭವ್ಯ ಬನ್ನೂರು ಮಾತನಾಡಿ, ಕಡಬ ತಾಲೂಕಿನ ಮಾನಸಿಕ ವಿಕಲಚೇತನ ಯುವಕನಾದ ಆನಂದನನ್ನು ಅಸಹಾಯಕ ಸ್ಥಿತಿಯಿಂದ ರಕ್ಷಿಸಿ ಪ್ರಜ್ಞಾಶ್ರಮಕ್ಕೆ ಸೇರಿಸಿ ನವ ಜೀವನ ನೀಡಿರುವುದು ಗಮನಾರ್ಹ ಸಾಧನೆ. ಹಾಗೆಯೇ, ಪುತ್ತೂರು ನಗರ ಸಭೆಯ ನಗರ ಪುನರ್ವಸತಿ ಕಾರ್ಯಕರ್ತರಾದ ಭರತ್ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಗೌರವ ಸದಸ್ಯತ್ವ ನೀಡಿದ್ದು , ಚತುಷ್ಚಕ್ರ ವಾಹನ ಚಾಲನಾ ಪರವಾನಗಿ ಪಡೆಯಲು ವಿಕಲಚೇತನರ ಕಲ್ಯಾಣಕ್ಕಾಗಿ ಪುತ್ತೂರು ತಾಲ್ಲೂಕು ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಲ ಚೇತನರ ಸೇವಾ ಕೇಂದ್ರ ಕೇಂದ್ರ ಕಚೇರಿಗೆ ಕಂಪ್ಯೂಟರ್‌ಗಳ ವಿತರಣೆ, ವಿದ್ಯಾರ್ಥಿವೇತನ ಮತ್ತು ವಿಶೇಷ ಚೇತನ ವಿದ್ಯಾರ್ಥಿಯಾದ ವಿಜೇತ್ ಪೂಜಾರಿಯವರಿಗೆ ಉನ್ನತ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ಸೌಲಭ್ಯ, ವಿಶೇಷ ಚೇತನರಿಗೆ ಗಾಲಿಕುರ್ಚಿ ಸೇರಿದಂತೆ ಅಗತ್ಯ ಸಾಧನ ಸಲಕರಣೆ ಸಹಾಯಕ ಸಾಧನಗಳನ್ನು ಜ್ಞಾನಿಗಳ ಮೂಲಕ ಒದಗಿಸಿ ಅನೇಕ ದಿವ್ಯಾಂಗರ ಬದುಕಿನಲ್ಲಿ ನೆರವಾದುದು, ತಮ್ಮ ಬುದ್ಧಿಮಾಂದ್ಯ ಸಹೋದರನೊಂದಿಗೆ ದೇಶಾದ್ಯಂತ 500ಕ್ಕೂ ಹೆಚ್ಚು ಜಾದು ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸಿರುವುದು, ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುಗೆ, ಉಡುಪಿಯ ಡೌನ್ ಸಿಂಡ್ರೋಮ್ ಈಜುಗಾರ್ತಿ ಅರ್ಚನಾ ಜೈ ವಿಠ್ಠಲ್, ಮೈಸೂರಿನ ದಿವ್ಯಾಂಗ ಕಲಾವಿದ ಗಣೇಶ್ ಭಟ್ ಹಾಗೂ ಸುರೇಶ್ ನಾಯಕ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕುವಲ್ಲಿ, ಉಜಿರೆಯ ಸಮಾಜಸೇವಕಿ ಅಂಜನದೇವಿ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸುವಲ್ಲಿ ಉಮೇಶ್ ನಾಯಕರ ಪಾತ್ರ ಮಹತ್ತರವಾಗಿದ್ದು, ಪುನರ್ವಸತಿ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿರುವುದು ಕೂಡ ಗಮನಾರ್ಹ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಅವರು, ಕಳೆದ ಐದು ವರ್ಷಗಳಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯನ್ನು ‘ದಿವ್ಯಾಂಗ ಸಾಹಿತ್ಯ ಸಂಭ್ರಮ’ವಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದನ್ನು ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here