







@ ಸಿಶೇ ಕಜೆಮಾರ್
ಪುತ್ತೂರು: ಇಂದಿನ ಡಿಜಿಟಲ್ ಯುಗದಲ್ಲಿ ಯಾವುದಾದರೂ ಮಾಹಿತಿ ಬೇಕಿದ್ದರೆ ಗೂಗಲ್ ಮೊರೆ ಹೋಗುವುದು ಸಾಮಾನ್ಯ. ಆದರೆ ಒಳಮೊಗ್ರು ಮತ್ತು ಅರಿಯಡ್ಕ ಗ್ರಾಮದ ಮಟ್ಟಿಗೆ ಹೇಳುವುದಾದರೆ, ಅರಿಯಡ್ಕ ಗ್ರಾಮದ ದರ್ಖಾಸ್ ಸಂಶುದ್ದೀನ್ ಎ.ಆರ್. ಅವರೇ ಒಂದು ‘ಜೀವಂತ ಗೂಗಲ್’ ಎನ್ನಲಡ್ಡಿಯಿಲ್ಲ. ಗ್ರಾಮದ ಪ್ರತಿಯೊಂದು ಸ್ತರದ ಕೆಲಸಗಾರರ, ವಾಣಿಜ್ಯ ಮಳಿಗೆಗಳ, ಅಂಗಡಿ ಮುಂಗಟ್ಟುಗಳ, ಅಗತ್ಯ ವಸ್ತುಗಳ ಹಾಗೇ ಸಂಪನ್ಮೂಲ ವ್ಯಕ್ತಿಗಳ ಸಮಗ್ರ ಮಾಹಿತಿ ಇವರ ಬಳಿ ಲಭ್ಯವಿದೆ.


ಸೇವಾ ಮನೋಭಾವದ ಮಾಹಿತಿ ಸಂಗ್ರಹ
ಒಳಮೊಗ್ರು ಗ್ರಾಮದ ಸಾಮಾನ್ಯ ಜನರಿಗೆ ತುರ್ತು ಸಂದರ್ಭಗಳಲ್ಲಿ ಅಥವಾ ದೈನಂದಿನ ಅಗತ್ಯಗಳಿಗಾಗಿ ನುರಿತ ಕೆಲಸಗಾರರ ಹುಡುಕಾಟ ನಡೆಸುವಾಗ ಮೊದಲು ನೆನಪಾಗುವುದೇ ಸಂಶುದ್ದೀನ್. ಇವರ ವಿಶೇಷತೆಯೆಂದರೆ, ಕೇವಲ ಪರಿಚಿತರ ವಿವರ ಮಾತ್ರವಲ್ಲದೆ, ಗ್ರಾಮದ ಮೂಲೆ ಮೂಲೆಯಲ್ಲಿರುವ ಗಾರೆ ಕೆಲಸದವರು, ಬಾವಿ ದುರಸ್ತಿ ಮಾಡುವ ಕಾರ್ಮಿಕರು, ಪ್ಲಂಬಿಂಗ್, ಪೈಂಟರ್, ಎಲೆಕ್ಟ್ರಿಷಿಯನ್, ಹಾವು ಹಿಡಿಯುವವರು, ಬಾವಿಗೆ ಬೆಕ್ಕು, ನಾಯಿ ಬಿದ್ದರೆ ಅದನ್ನು ಮೇಲೆತ್ತುವವರು, ಕಾಳು ಮೆಣಸು, ಅಡಿಕೆ, ತೆಂಗು ಕೊಯ್ಯುವವರು, ಜೇನು ತೆಗೆಯುವವರು ಹೀಗೆ ವಿವಿಧ ವೃತ್ತಿಪರರ ದೂರವಾಣಿ ಸಂಖ್ಯೆ ಹಾಗೂ ವಿಳಾಸದ ಮಾಹಿತಿ ಇವರ ಬಳಿ ಸದಾ ಸಿದ್ಧವಿರುತ್ತದೆ.



ಸಂಪರ್ಕ ಸೇತುವೆಯಾಗಿ ಕಾರ್ಯ
ಒಬ್ಬ ಸಾಮಾನ್ಯ ಕಾರ್ಮಿಕನಿಂದ ಹಿಡಿದು ನುರಿತ ತಂತ್ರಜ್ಞರ ತನಕ ಎಲ್ಲರನ್ನೂ ಒಂದೇ ಸೂರಿನಡಿ ತರುವ ಕೆಲಸವನ್ನು ಇವರು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಯಾರಾದರೂ ಬಾವಿ ತೋಡುವವರ ಬಗ್ಗೆ ವಿಚಾರಿಸಿದರೆ ಅಥವಾ ಮನೆ ದುರಸ್ತಿಗೆ ಆಳುಗಳ ಅಗತ್ಯವಿದ್ದರೆ ಸಂಶುದ್ದೀನ್ ಅವರಿಗೆ ಕರೆ ಮಾಡಿದರೆ ಸಾಕು, ತಕ್ಷಣವೇ ಸೂಕ್ತ ವ್ಯಕ್ತಿಯ ಸಂಪರ್ಕ ಸಂಖ್ಯೆ ನೀಡುವ ಮೂಲಕ ಗ್ರಾಮಸ್ಥರಿಗೆ ನೆರವಾಗುತ್ತಿದ್ದಾರೆ. ಅದೇ ರೀತಿ ನಮ್ಮ ಮನೆಯ ಮುದ್ದಿನ ಬೆಕ್ಕು ಬಾವಿಗೆ ಬಿದ್ದಿದೆ ಅದನ್ನು ತೆಗೆದುಕೊಡುವವರು ಬೇಕು ಎಂದು ಇವರಿಗೆ ಕರೆ ಮಾಡಿದರೆ ಸಾಕು ಇವರು ತಕ್ಷಣ ಜನ ಮಾಡಿ ಕೊಡುತ್ತಾರೆ. ಮನೆಯ ಗುಡ್ಡದಲ್ಲಿ ಜೇನು ಗೂಡು ಕಟ್ಟಿದೆ ಅದಕ್ಕೆ ಯಾವುದೇ ತೊಂದರೆಯಾಗದಂತೆ ಜೇನು ತೆಗೆದುಕೊಡುವವರು ಬೇಕು ಎಂದು ಕೇಳಿದರೂ ಇವರು ಅದಕ್ಕೂ ಜನ ತಯಾರು ಮಾಡಿಕೊಡುತ್ತಾರೆ.
ಗ್ರಾಮದ ಅಭಿವೃದ್ಧಿಗೆ ಪೂರಕ
ಗ್ರಾಮದೊಳಗಿನ ಆರ್ಥಿಕ ಚಟುವಟಿಕೆಗಳಿಗೆ ಮತ್ತು ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರಕಿಸಿಕೊಡುವಲ್ಲಿ ಇವರ ಈ ಮಾಹಿತಿ ಸೇವೆ ಮಹತ್ತರ ಪಾತ್ರ ವಹಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇವರು ಮಾಡುತ್ತಿರುವ ಈ ಕಾರ್ಯವು ಒಳಮೊಗ್ರು ಗ್ರಾಮದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಸಂಶುದ್ದೀನ್ ಅವರ ಈ ಕಾರ್ಯವು ಇತರರಿಗೂ ಮಾದರಿಯಾಗಿದ್ದು, ಗ್ರಾಮದ ಸಂಘಟನೆ ಮತ್ತು ಸೇವಾ ಕ್ಷೇತ್ರದಲ್ಲಿ ಅದರಲ್ಲೂ ಕುಂಬ್ರ ವರ್ತಕರ ಸಂಘದಲ್ಲೂ ಇವರ ಸೇವೆ ಶ್ಲಾಘನೀಯವಾದದ್ದು ಆಗಿದೆ.
ಕೂಲಿ ಕಾರ್ಮಿಕರು, ಮೇಸ್ತ್ರೀ, ಪ್ಲಂಬರ್ಸ್, ಕಲ್ಲು ಕಟ್ಟುವವರು, ಬಾವಿ ದುರಸ್ತಿ ಮಾಡುವವರು ಸೇರಿದಂತೆ ವಿವಿಧ ಸ್ತರದ ಕೆಲಸಗಾರರ ಮಾಹಿತಿ ಸೇರಿದಂತೆ ಹಾವು ಹಿಡಿಯುವವರ, ಬಾವಿಯಿಂದ ಬೆಕ್ಕು ಇತ್ಯಾದಿ ಪ್ರಾಣಿಗಳ ರಕ್ಷಿಸುವವರ, ಅಡಿಕೆ, ತೆಂಗು, ಜೇನು ತೆಗೆಯುವವರ ಹೀಗೆ ಅದಲ್ಲದೆ ಮನೆಗೆ ಬೇಕಾದ ಅಗತ್ಯ ವಸ್ತುಗಳು ದೊರೆಯುವ ಸ್ಥಳಗಳ ಬಗ್ಗೆಯೂ ಇವರಲ್ಲಿ ಮಾಹಿತಿ ಇದೆ. ಯಾರು ಕರೆ ಮಾಡಿ ಕೇಳಿದರೂ ಇವರು ಅವರಿಗೆ ಸೂಕ್ತ ಮಾಹಿತಿ ಕೊಡುತ್ತಾರೆ.
‘ ಇವರನ್ನು ಜೀವಂತ ಗೂಗಲ್ ಎಂದೇ ಕರೆಯಬಹುದು,ಬಹಳ ವರ್ಷಗಳಿಂದ ಕುಂಬ್ರ ವರ್ತಕರ ಸಂಘದಲ್ಲಿದ್ದುಕೊಂಡು ಎಲ್ಲಾ ಮಾಹಿತಿ, ಸಲಹೆ ಸೂಚನೆಗಳನ್ನು ಕೊಡುತ್ತಾ ಬಂದಿದ್ದಾರೆ. ಗ್ರಾಮದ ಪ್ರತಿಯೊಂದು ಕೆಲಸಗಾರರ ಹಾಗೇ ಎಲ್ಲಾ ಮಾಹಿತಿಗಳು ಕೂಡ ಇವರಲ್ಲಿ ಲಭ್ಯವಿದೆ. ಯಾವುದೇ ಫಲಾಫೇಕ್ಷೆ ಇಲ್ಲದೆ ಮಾಹಿತಿ ಬೇಕಾದವರಿಗೆ ಮಾಹಿತಿ ಕೊಡುತ್ತಾ ಬರುತ್ತಿದ್ದಾರೆ.’
ರಫೀಕ್ ಅಲ್ರಾಯ,
ಹೊಟೇಲ್ ಉದ್ಯಮಿ, ಮಾಜಿ ಅಧ್ಯಕ್ಷರು ವರ್ತಕರ ಸಂಘ ಕುಂಬ್ರ










