ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ 30ನೇ ವಾರ್ಷಿಕೋತ್ಸವ: ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

0

ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ 30ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿ ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲದ ಪ್ರಾಂಶುಪಾಲ ಜಾರ್ಜ್ ಟಿ. ಎಸ್. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ “ಉಪಕರಣಗಳು ನಿಮ್ಮ ಹೆಸರನ್ನು ಕೇಳುವುದಿಲ್ಲ. ಅವುಗಳ ಬಗ್ಗೆ ತಿಳಿದವರು ಮಾತ್ರ ಅವುಗಳನ್ನು ಸಮರ್ಪಕವಾಗಿ ಬಳಸಲು ಸಾಧ್ಯ. ಶಿಕ್ಷಣವು ನಿಂತ ನೀರಿನಂತಲ್ಲ; ಅದು ನಿರಂತರವಾಗಿ ಹರಿಯುವ ವ್ಯವಸ್ಥೆಯಾಗಿದೆ. ಭವಿಷ್ಯದಲ್ಲಿ ಶಿಕ್ಷಣವನ್ನು ಮುಂದುವರಿಸಲು ಅನೇಕ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಐಟಿಐ ಶಿಕ್ಷಣವು ಉತ್ತಮ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆವ. ಫಾ. ಡಾ. ವರ್ಗೀಸ್ ಕೈಪಾನಡ್ಕ OIC ಅವರು ಆಶಾ ಕಾರ್ಯಕರ್ತೆಯರ ಸೇವಾ ಮನೋಭಾವವನ್ನು ಸ್ಮರಿಸಿ, ಅವರ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಐಟಿಐ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷವಾಗಿ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಐಟಿಐ ಸಂಸ್ಥೆಯ ನಿರ್ದೇಶಕ ರೆವ. ಫಾ. ಸ್ಯಾಮುವೆಲ್ ಜಾರ್ಜ್ OIC, ಪೂರ್ವ ವಿದ್ಯಾರ್ಥಿ ಸಾಬು ಜಾನ್, ಪ್ರಾಂಶುಪಾಲ ಸಜಿ ಕೆ. ಥೋಮಸ್ ಹಾಗೂ ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಉಪಸ್ಥಿತರಿದ್ದರು. ಜಾನ್ ಪಿ.ಎಸ್. ಅವರು ಸ್ವಾಗತಿಸಿದರು. ಉಪನ್ಯಾಸಕ ಹರಿಪ್ರಸಾದ್ ರೈ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here