ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಕಾನೂನು ಮಾಹಿತಿ ಶಿಬಿರ

0

ಮುಂಡಾಜೆ:” ಕಾನೂನು ಎಂಬುದು ನಿರಂತರ ಪ್ರಕ್ರಿಯೆ. ಕಾನೂನಿನ ತಿಳುವಳಿಕೆಯಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಜನಸಾಮಾನ್ಯರಿಗೆ ನ್ಯಾಯದ ಅರಿವಿನ ನೆರವು ನೀಡುವುದರಿಂದ ಒಮ್ಮತದ ನಿರ್ಣಯಗಳು ಮೂಡಿ ಸಮಸ್ಯೆಗಳು ಸಮಾನತೆ ಮೂಲಕ ಬಗೆಹರಿಯಲು ಸಾಧ್ಯ” ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕಾನೂನು ಸೇವಾ ಸಮಿತಿ ಅಧ್ಯಕ್ಷ ದೇವರಾಜು ಎಚ್.ಎಸ್. ಹೇಳಿದರು.

ಅವರು ನ.6 ರಂದು ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಇತರ ಸಂಘ,ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಕಾನೂನುಗಳ ಕುರಿತ ಜ್ಞಾನವು ಅನಾಹುತಗಳನ್ನು ತಪ್ಪಿಸಲು ಸಹಕಾರಿ. ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬನ ಕರ್ತವ್ಯ. ಕಾನೂನಿನ ಅರಿವಿಲ್ಲದೆ ಮಾಡುವ ಮೊಂಡುವಾದಗಳು ಸಮಸ್ಯೆಗಳನ್ನು ಸೃಷ್ಟಿಸುವ ಮೂಲವಾಗಿದೆ” ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಂದೇಶ್ ಕೆ. ಮಾತನಾಡಿ “ಪ್ರತಿಯೊಬ್ಬರಿಗೆ ನ್ಯಾಯವನ್ನು ನೀಡುವುದು ಕಾನೂನು ಮಾಹಿತಿ ಶಿಬಿರಗಳ ಉದ್ದೇಶವಾಗಿದೆ. ಜನಸಾಮಾನ್ಯರು ಇದರ ಪ್ರಯೋಜನ ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ”ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್ ಮಾತನಾಡಿ “ಸತ್ಯಮೇವ ಜಯತೆ ಎಂಬ ಧ್ಯೇಯದೊಂದಿಗೆ ವ್ಯವಸ್ಥೆಗಳ ಸದುಪಯೋಗ ಆಗಬೇಕು. ಜೀವನದಲ್ಲಿ ಪ್ರತಿಷ್ಠೆಗಳನ್ನು ಬದಿಗೊತ್ತಿ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು” ಎಂದರು.

ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ರವಿ, ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಠೋಸರ್, ಸಮಿತಿ ಸದಸ್ಯರಾದ ಸುಭಾಷಿಣಿ ಆರ್., ಮಮ್ತಾಜ್ ಬೇಗಂ, ಪ್ರಿಯಾಂಕ ಕೆ. ಕಾನೂನು ಸ್ವಯಂಸೇವಕರಾದ ರಾಘವೇಂದ್ರ ಶೇಟ್, ದಯಾನಂದ ಉಪಸ್ಥಿತರಿದ್ದರು.

ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಶೀನಪ್ಪ ಗೌಡ ವಂದಿಸಿದರು. ಪ್ರಶ್ನೋತ್ತರ ಕಲಾಪ ಹಾಗೂ ಮನೆ ಭೇಟಿ ಕಾರ್ಯಕ್ರಮ ನಡೆಯಿತು.

ಕಾನೂನು ಸೇವಾ ಸಮಿತಿಗಳ ಮೂಲಕ ಕಾನೂನು ಅರಿವು ನೀಡುವ ಕಾರ್ಯಕ್ರಮಗಳು 1987ರಲ್ಲಿ ರಚನೆಯಾಗಿದ್ದು, 1995ರಲ್ಲಿ ಜಾರಿಗೆ ಬಂದು ನಿಧಾನಗತಿಯಲ್ಲಿ ಮುಂದುವರಿದಿತ್ತು. 2008ರ ಬಳಿಕ ಈ ಕಾರ್ಯಕ್ರಮ ಅತ್ಯಂತ ವೇಗವಾಗಿ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.ಇದರಲ್ಲಿ ಆದಾಯ ಮಿತಿಯ ಚೌಕಟ್ಟಿನಲ್ಲಿ ಉಚಿತವಾಗಿ ನ್ಯಾಯದಾನ ಪಡೆಯುವ ಅವಕಾಶವಿದ್ದು, ಜನಸಾಮಾನ್ಯರಿಗೆ ಸಹಕಾರಿಯಾಗಿದೆ. ಗ್ರಾಮ ಹಾಗೂ ಮನೆಮನೆಗಳಿಗೆ ನ್ಯಾಯ ದೇಗುಲದ ವ್ಯವಸ್ಥೆ,ಮಾಹಿತಿ ತಲುಪಿಸಿ ಕಾನೂನಿನ ಅರಿವನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here