ಸೂಡಾ ನಿಯಮದ ಬಗ್ಗೆ ಆತಂಕ ಬೇಡ, ಸಾರ್ವಜನಿಕರು ಅದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ: ವಿನಯಕುಮಾರ್ ಕಂದಡ್ಕ

0

 

ಸಭೆಯಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡ ವಿಪಕ್ಷ ಸದಸ್ಯ ಕೆ ಎಸ್ ಉಮ್ಮರ್, ಅವರಿಗೆ ಸಾತ್ ನೀಡಿದ ವಿಪಕ್ಷ ಸದಸ್ಯರುಗಳು

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಂದಿನ ಸಭೆಯಲ್ಲಿ ಪ್ರಮುಖವಾಗಿ ನಗರದಲ್ಲಿ ನಿರ್ಮಾಣಗೊಳ್ಳುವ ಕಟ್ಟಡದ ಸೂಡ ನಿಯಮದ ಬಗ್ಗೆ ಗಂಭೀರ ಚರ್ಚೆಗಳು ನಡೆದವು.

ಸಭೆಯ ಆರಂಭದಲ್ಲಿ ಸುಳ್ಯ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಲವು ಅನಧಿಕೃತ ಕಟ್ಟಡಗಳ ಬಗ್ಗೆ, ಮತ್ತು ಕಟ್ಟಡ ನಿರ್ಮಾಣಕ್ಕೆ ನಗರ ಪಂಚಾಯತಿನಿಂದ ಅನುಮತಿ ಲಭಿಸುವ ಬಗ್ಗೆ ವಿಪಕ್ಷ ಸದಸ್ಯರುಗಳು ವಿಷಯವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ಸದಸ್ಯ ಎಂ ವೆಂಕಪ್ಪ ಗೌಡ ನಗರದಲ್ಲಿ ಕೆಲವು ಕಟ್ಟಡಗಳು ನಿಯಮಬಾಹಿರವಾಗಿ ತಲೆಯೆತ್ತುತ್ತಿದ್ದು ಇದರಿಂದ ನಗರದಲ್ಲಿ ವಾಹನ ಪಾರ್ಕಿಂಗ್, ಮತ್ತು ಸಾರ್ವಜನಿಕರಿಗೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಿದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಆಡಳಿತ ಪಕ್ಷದವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಡಾ ನಿಯಮಗಳು ಇದ್ದರೂ ಶ್ರೀಮಂತರು ಯಾವುದಾದರೂ ಒಂದು ರೀತಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಬಡವರಿಗೆ ಇದರಿಂದ ತುಂಬಾ ಸಮಸ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರ ಊರಲ್ಲಿ ಸೂಡಾ ಪರ್ಮಿಷನ್ ನಗರ ಪಂಚಾಯತ್ ವತಿಯಿಂದಲೇ ನೀಡಲಾಗುತ್ತದೆ. ಅದನ್ನು ಸುಳ್ಯದಲ್ಲಿ ಏಕೆ ಪಾಲಿಸಲು ಸಾಧ್ಯವಾಗುವುದಿಲ್ಲ ಎಂದು ಪಕ್ಷೇತರ ಸದಸ್ಯ ಕೆ ಎಸ್ ಉಮ್ಮರ್ ಪ್ರಶ್ನಿಸಿದರು.

ಸೂಡ ನಿಯಮದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಕಚೇರಿಗಳನ್ನು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದಾಗ
ಉತ್ತರಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಕಟ್ಟಡ ಕಟ್ಟುವಂತಹ ಸ್ಥಳವನ್ನು ಸರಿಯಾದ ರೀತಿಯಲ್ಲಿ ಕನ್ವರ್ಷನ್ ಮಾಡಿಕೊಂಡು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸೂಡ ನಿಯಮದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತಾವುಗಳು ಕಟ್ಟುವ ಕಟ್ಟಡಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ದಾಖಲೆಗಳು ನಿಯಮಾನುಸಾರವಾಗಿ ಇರುತ್ತದೆ. ಅದಲ್ಲದೆ ನಿಯಮವನ್ನು ಪಾಲಿಸದೆ ಕಟ್ಟಡಗಳನ್ನು ಕಟ್ಟಿದರೆ ಮುಂದಿನ ದಿನಗಳಲ್ಲಿ ಕಾನೂನಿನ ತೊಡಕುಗಳು ಬಂದು ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಬೂಡು ರಾಧಾಕೃಷ್ಣ ರೈ ಇದರಿಂದ ಬಡವರಿಗೆ ತುಂಬಾ ಕಷ್ಟವಾಗುತ್ತಿದ್ದು ಸೂಡ ನಿಯಮದಲ್ಲಿ ಬಡವರಿಗೆ ಮನೆ ನಿವೇಶನ ಕಟ್ಟುವ ಸಂದರ್ಭದಲ್ಲಿ ರಿಯಾಯಿತಿ ನೀಡಬೇಕೆಂದು ಕೇಳಿಕೊಂಡರು.
ಇದೇ ವೇಳೆ ಅಧ್ಯಕ್ಷರು ಇಂದು ಸುಳ್ಯ ನಗರ ಪಂಚಾಯತ್ ಕಚೇರಿಗೆ ಆಗಮಿಸಿದ ಸೂಡಾ ಅಧಿಕಾರಿ ಉಬೈದುಲ್ಲ ರವರನ್ನು ಸಭೆಗೆ ಕರೆಸಿ ನಿಯಮದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.


ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರುಗಳು ನಗರದಲ್ಲಿ ಈ ನಿಯಮವನ್ನು ಸರಿಯಾಗಿ ಪಾಲಿಸಲು ಇಲಾಖೆ ವತಿಯಿಂದ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ಮತ್ತು ಸೂಡಾ ನಿಯಮದ ಬಗ್ಗೆ ಪ್ರಶ್ನಿಸುವ ಅಧಿಕಾರ ನಗರದಲ್ಲಿ ಯಾರಿಗೆ ಇದೆ ಎಂಬ ಬಗ್ಗೆ ಮಾಹಿತಿಯನ್ನು ಅಧಿಕಾರಿಯನ್ನು ಕೇಳಿಕೊಂಡರು.
ಇದಕ್ಕೆ ಉತ್ತರಿಸಿದ ಉಬೈದುಲ್ಲಾರವರು ನಗರ ಪಂಚಾಯತ್ ಅಧಿಕಾರಿಗೆ ಇದನ್ನು ಪ್ರಶ್ನಿಸುವ ಅಧಿಕಾರವಿದ್ದು ನಿಯಮದ ಬಗ್ಗೆ ಮಾಹಿತಿಯನ್ನು ನೀಡಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಸಾರ್ವಜನಿಕರನ್ನು ಮತ್ತು ನಗರ ಪಂಚಾಯತ್ ಸದಸ್ಯರನ್ನು ಒಂದುಗೂಡಿಸಿ ಸೂಡಾ ನಿಯಮದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಸ್ ಉಮ್ಮರ್ ನಗರ ಪಂಚಾಯತಿನಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗಿದೆ.
ಕಚೇರಿಯಲ್ಲಿ ನಗರ ಪಂಚಾಯತಿಗೆ ಸಂಬಂಧಿಸಿದ ಸದಸ್ಯರುಗಳು ಸಾರ್ವಜನಿಕರ ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡಲು ಬಂದರೆ ಕಾನೂನು ಪ್ರಕಾರ ಸಮಯ ತೆಗೆದುಕೊಳ್ಳುತ್ತದೆ. ಆದರೆ ಬ್ರೋಕರ್ಗಳು ಬಂದ ಕೂಡಲೇ ಇಲ್ಲಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತದೆ. ಇದರಿಂದ ನಮ್ಮಂತ ಸದಸ್ಯರುಗಳಿಗೆ ತುಂಬಾ ಮುಜುಗರವಾಗುತ್ತದೆ ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯ ಬೂಡು ರಾಧಾಕೃಷ್ಣ ರೈ ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಏಜೆಂಟ್ ಸಿಸ್ಟಂಗೆ ಸಪೋರ್ಟ್ ಕೊಡಬೇಡಿ, ನಿಮ್ಮ ನಿಮ್ಮ ವ್ಯವಹಾರಗಳನ್ನು ಪಂಚಾಯತ್ ಕಚೇರಿಗೆ ಬಂದು ನೀವು ನೀವೇ ಮಾಡಿಕೊಳ್ಳಬೇಕೆಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಲು ಹಲವಾರು ಮಂದಿ ಇರುತ್ತಾರೆ. ಆದರೆ ಅದನ್ನು ಪಾಲಿಸುವವರು ಯಾರು ಇರುವುದಿಲ್ಲ.
ಜನರೇ ಲಂಚವನ್ನು ಕೊಡುವುದನ್ನು ನಿಲ್ಲಿಸಬೇಕೆ ವಿನಹ ಬೇರೆ ಯಾವುದೇ ರೀತಿಯಲ್ಲಿ ಇದನ್ನು ಜಾಗೃತಿಗೊಳಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ಅಪಾಯಕಾರಿ ಮರಗಳ ತೆರವಿನ ಬಗ್ಗೆ ವಿಷಯ ಪ್ರಸ್ತಾಪಿಸಿದ ವೆಂಕಪ್ಪಗೌಡರು ಕಳೆದ ಸಭೆಯಲ್ಲಿ ಇದರ ಚರ್ಚೆಗಳು ನಡೆದಿದ್ದವು. ಆದರೆ ಒಂದು ತಿಂಗಳಿಂದ ಯಾವುದೇ ಬೆಳವಣಿಗೆ ಆಗಲಿಲ್ಲ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿರುತ್ತೇವೆ, ನಿಮ್ಮ ನಿಮ್ಮ ವಾರ್ಡ್ ಗಳಲ್ಲಿ ಇರುವ ಮರಗಳ ಮಾಹಿತಿಯನ್ನು ಸಂಪೂರ್ಣವಾಗಿ ಇಂದು ಸಂಜೆಯೊಳಗೆ ನೀಡುವಂತೆ ಹೇಳಿದರು.
ಇಲಾಖೆಗೆ ಮಾಹಿತಿ ನೀಡುವಾಗ ಯಾವುದೆಲ್ಲ ಜಾತಿಯ ಮರಗಳು , ಮತ್ತು ಅದರ ವಿಸ್ತೀರ್ಣದ ಬಗ್ಗೆ ಮಾಹಿತಿ ಕೇಳುತ್ತಾರೆ. ಆದ್ದರಿಂದ ಮರಗಳ ಬಗ್ಗೆ ಸರಿಯಾದ ವಿವರವನ್ನು ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತಿ ಆವರಣದ ಮುಂಭಾಗದಲ್ಲಿರುವ ಕಸದ ಬಗ್ಗೆ ಚರ್ಚೆ ನಡೆದವು.
ಈಗಾಗಲೇ ತೆರವು ಗೊಂಡಿರುವ ಪೌರಕಾರ್ಮಿಕ ಹುದ್ದೆಗೆ ನೇಮಕಾತಿ ಮಾಡಿದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯೆ ಶಶಿಕಲಾ ನೀರಬಿದಿರೆಯವರು, ತೆರವು ಗೊಂಡಿರುವ ಹುದ್ದೆಗೆ ಅವರ ಮಗಳಿಗೆ ಅವಕಾಶ ನೀಡಿದಂತೆ, ದೇವನಾಥ್ ರವರ ನಿಧನದ ಕಾರಣದಿಂದ ತೆರವಾಗಿರುವ ಹುದ್ದೆಯನ್ನು ತನ್ನ ಇನ್ನೋರ್ವ ಮಗನಿಗೆ ನೀಡುವಂತೆ ಅವರ ತಾಯಿ ಮನವಿ ಮಾಡಿಕೊಂಡರೂ ಅದನ್ನು ಏಕೆ ಪರಿಗಣಿಸಲಿಲ್ಲ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ, ಗುತ್ತಿಗೆ ಆಧಾರದಲ್ಲಿರುವ ಕೆಲಸಗಳನ್ನು ವಾರಿಸುದಾರರಿಗೆ ನೀಡಲು ಕಡ್ಡಾಯವಿರುವುದಿಲ್ಲ. ಅದನ್ನು ಯಾರಿಗೂ ಬೇಕಾದ್ರೂ ನೀಡಬಹುದು ಎಂದು ಹೇಳಿದರು.
ಇದಕ್ಕೆ ಸಮಾಧಾನಗೊಳ್ಳದ ಶಶಿಕಲಾ ರವರು ಈ ಮಾತಿಗೆ ಆಕ್ಷೇಪವನ್ನು ವ್ಯಕ್ತಪಡಿಸಿದರು.
ನಂತರ ಪ್ರತಿಪಕ್ಷ ಸದಸ್ಯರು, ಮತ್ತು ಬೂಡು ರಾಧಾಕೃಷ್ಣ ರೈಯವರು ಶಶಿಕಲಾ ರವರ ಮನವಿಗೆ ಸ್ಪಂದಿಸುವಂತೆ ಅಧ್ಯಕ್ಷರಲ್ಲಿ ಕೇಳಿಕೊಂಡರು.
ನಂತರ ಅವರ ಮನವಿಯನ್ನು ಮುಂದಿನ ಸಭೆಗೆ ಚರ್ಚೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಮುಖ್ಯ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಅಲ್ಲಿಯವರೆಗೆ ಈಗಾಗಲೇ ಆದೇಶ ನೀಡಿರುವ ಹುದ್ದೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನ ಕೈಗೊಂಡರು.
ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಚೇರಿಗೆ ಅಳವಡಿಸಲಾದ ದೀಪಾಲಂಕಾರಕ್ಕೆ 38,000ಗಳ ಖರ್ಚನ್ನು ಸಭೆಗೆ ನೀಡಿದಾಗ, ಇದನ್ನು ಪ್ರಶ್ನಿಸಿದ ಕೆಎಸ್ ಉಮ್ಮರ್, 15 ಸಾವಿರ ರೂಪಾಯಿಗಳಲ್ಲಿ ಅಷ್ಟೇ ಬಲ್ಬುಗಳನ್ನು ನಗರ ಪಂಚಾಯತಿಗೆ ಖರೀದಿಸಬಹುದಾಗಿತ್ತು.
ನಮ್ಮ ಕಚೇರಿಯ ಜನರೇಟರ್ ಅನ್ನು ನೀಡಿ 38,000 ಬಿಲ್ ಮಾಡಿರುವುದು ಭಾರೀ ಹೆಚ್ಚಾಗಿದೆ. ಇದರ ಬಗ್ಗೆ ಮರು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಇದರ ಜವಾಬ್ದಾರಿಯನ್ನು ಸ್ಥಾಯಿ ಸಮಿತಿಯವರು ಮಾಡಿರುವ ಕಾರಣ ಅದರ ಲೆಕ್ಕ ಪತ್ರ ಅವರ ಬಳಿ ಇದೆ ಎಂದರು.
ಇದಕ್ಕೆ ಉತ್ತರಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ನನಗೆ ಸಮಯಾವಕಾಶವನ್ನು ಕೊಡಿ. ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದು ನೀಡುತ್ತೇನೆ ಎಂದು ಹೇಳಿದರು.

ನಗರ ಪಂಚಾಯತ್ ಸಭಾಂಗಣದ ಧ್ವನಿವರ್ಧಕ ಸರಿ ಮಾಡುವ ಬಗ್ಗೆ ಅಧ್ಯಕ್ಷರಲ್ಲಿ ಬೂಡು ರಾಧಾಕೃಷ್ಣ ರೈಯವರು ಕೇಳಿಕೊಂಡರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಇದರ ಬಗ್ಗೆ ಈಗಾಗಲೇ ಯೋಜನೆಗಳನ್ನು ರೂಪಿಸಿದ್ದೇವೆ. ಆದಷ್ಟು ಶೀಘ್ರದಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
*ನಗರ ಪಂಚಾಯತಿ ಸಭೆಗೆ ನಮ್ಮ ಶಾಸಕರು,ಸಂಸದರು ಬರಬೇಕೆಂದು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿಕೊಂಡ ವಿಪಕ್ಷ ಸದಸ್ಯ ಕೆ ಎಸ್ ಉಮ್ಮರ್, ಅವರಿಗೆ ಸಾತ್ ನೀಡಿದ ವಿಪಕ್ಷ ಸದಸ್ಯರು*

ಇಂದಿನ ನಗರ ಪಂಚಾಯತಿ ಸಭೆಯಲ್ಲಿ ವಿಪಕ್ಷ ಸದಸ್ಯರುಗಳು ಸಭೆಯ ಅರ್ಧದಲ್ಲಿ ಕಪ್ಪುಪಟ್ಟಿ ಧರಿಸಿಕೊಂಡು ಸಭೆಯ ಅಂತ್ಯದ ವರೆಗೆ ಕುಳಿತುಕೊಂಡ ಪ್ರಸಂಗವು ನಡೆಯಿತು.
ಕಾರಣ ಕಳೆದ ನಗರ ಪಂಚಾಯತ್ ಸಭೆಯಲ್ಲಿ ವಿಪಕ್ಷ ಸದಸ್ಯ ಕೆ ಎಸ್ ಉಮ್ಮರ್ ನಗರ ಪಂಚಾಯತಿಯ ಸಭೆಯ ಎಲ್ಲಾ ನೋಟಿಸ್ ಗಳಲ್ಲಿ ಶಾಸಕರಿಗೆ ಮತ್ತು ಸಂಸದರಿಗೆ ಸಭೆಯ ಕರೆಯೋಲೆಯನ್ನು ನೀಡಿರುವ ಬಗ್ಗೆ ಉಲ್ಲೇಖವಿರುತ್ತದೆ. ಆದರೆ ಕಳೆದ ಏಳು ವರ್ಷಗಳಿಂದ ನಾನು ಪಂಚಾಯತ್ ನಲ್ಲಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಂದಿನವರೆಗೆ ಯಾವುದೇ ನಗರ ಪಂಚಾಯತ್ ಸಾಮಾನ್ಯ ಸಭೆಗೆ ನಮ್ಮ ಶಾಸಕರಾಗಲಿ ಅಥವಾ ಸಂಸದರಾಗಲಿ ಬಂದಿರುವುದಿಲ್ಲ.
ಈ ಸಭೆಗಳಿಗೆ ಅವರು ಬಂದಿದ್ದರೆ ಸುಳ್ಯದ ಅಭಿವೃದ್ಧಿಯ ಬಗ್ಗೆ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ ಅವರಿಗೂ ಕೂಡ ಮಾಹಿತಿ ಲಭಿಸುತ್ತಿತ್ತು. ನಮಗೂ ಕೂಡ ನಮ್ಮ ನಮ್ಮ ವಾರ್ಡುಗಳ ಸಮಸ್ಯೆಗಳ ಬಗ್ಗೆ ಅವರ ಬಳಿ ಹೇಳಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇದುವರೆಗೆ ಈ ರೀತಿ ಆಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕೇಳಿಕೊಳ್ಳಬೇಕು ಎಂದು ಮನವಿ ಪತ್ರವನ್ನು ನಗರ ಪಂಚಾಯತ್ ಅಧ್ಯಕ್ಷರಿಗೆ ನೀಡಿದ್ದರು.
ಈ ವಿಷಯದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ತೆಗೆದುಕೊಂಡ ಉಮ್ಮರ್ ರವರು ನಾನು ನೀಡಿರುವ ಮನವಿಗೆ ಏನಾದರೂ ಪ್ರತಿಫಲ ಕಂಡಿದೆಯಾ ಅಧ್ಯಕ್ಷರೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ನೀವು ನೀಡಿರುವ ಮನವಿಯನ್ನು ಶಾಸಕರ ಗಮನಕ್ಕೆ ನಾವು ತಂದಿದ್ದೇವೆ. ಆದರೆ ಇಂದು ವಿಧಾನ ಸಭೆಯಲ್ಲಿ ಕಲಾಪ ಇರುವ ಹಿನ್ನೆಲೆಯಲ್ಲಿ ಅವರಿಗೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಉತ್ತರವನ್ನು ತೃಪ್ತಿ ಪಡದ ಉಮ್ಮರ್ ರವರು ತಾವು ಸಭೆಗೆ ತಂದಿದ್ದ ಕಪ್ಪು ಪಟ್ಟಿಯನ್ನು ಪ್ರದರ್ಶಿಸಿ, ನೀವು ಯಾವುದೇ ರೀತಿಯ ಉತ್ತರವನ್ನು ನೀಡಿದರೂ ಇನ್ನೂ ಅದನ್ನು ಕೇಳುವ ಪರಿಸ್ಥಿತಿ ನನ್ನಲ್ಲಿ ಇಲ್ಲ. ಶಾಸಕರು ಮತ್ತು ಸಂಸದರು ನಗರ ಪಂಚಾಯತಿ ಸಭೆಗೆ ಬರುವವರೆಗೆ ಈ ಕಪ್ಪು ಪಟ್ಟಿಯನ್ನು ನಾನು ನಗರ ಪಂಚಾಯತಿ ಸಭೆಗಳಲ್ಲಿ ಹಾಕಿಕೊಂಡಿರುತ್ತೇನೆ. ಈ ರೀತಿಯಾಗಿ ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವೆಂಕಪ್ಪಗೌಡರು ಕೂಡ ಇವರಿಗೆ ಸಾತ್ ನೀಡಿ ನಿಮ್ಮ ಬೇಡಿಕೆಗೆ ನಾವು ಕೂಡ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿ ಅವರು ಕೂಡ ಉಮ್ಮರ್ ಅವರ ಕೈಯಿಂದ ಬೇರೊಂದು ಕಪ್ಪು ಪಟ್ಟಿಯನ್ನು ತೆಗೆದುಕೊಂಡು ತಮ್ಮ ಕೊರಳಿನಲ್ಲಿ ಹಾಕಿಕೊಂಡರು. ಈ ವೇಳೆ ವಿಪಕ್ಷ ಸದಸ್ಯರುಗಳಾದ ಶರೀಫ್ ಕಂಠಿ, ಬಾಲಕೃಷ್ಣ ಭಟ್ ಕೊಡಂಕಿರಿ, ರಿಯಾಜ್ ಕಟ್ಟೆಕಾರ್ ರವರು ಕೂಡ ಅವರಿಂದ ಪಟ್ಟಿಯನ್ನು ಪಡೆದುಕೊಂಡು ಧರಿಸಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಕಪ್ಪು ಪಟ್ಟಿಯನ್ನು ತೆಗೆಯುವಂತೆ ವಿನಂತಿಸಿದರು. ಇದಕ್ಕೆ ಒಪ್ಪದ ಉಮ್ಮರ್ ರವರು ಇದು ನಮಗಾಗಿ ಮಾಡುವುದಲ್ಲ. ಅಥವಾ ನಮ್ಮ ಪ್ರತಿಷ್ಠೆ, ಪ್ರಚಾರಕ್ಕಾಗಿಯೂ ಅಲ್ಲ. ನಮ್ಮ ಸುಳ್ಯದ ಅಭಿವೃದ್ಧಿ ಮತ್ತು ನಮ್ಮ ಕಚೇರಿಯ ಸಮಸ್ಯೆಗಳ ಬಗ್ಗೆ ಇರುವ ಕಾಳಜಿಯಿಂದ ಈ ರೀತಿಯ ಪ್ರತಿಭಟನೆಯನ್ನು ಕೈಗೊಂಡಿದ್ದೇನೆ.
ಯಾವ ದಿನದಂದು ಅವರು ಸಭೆಗೆ ಬರುತ್ತಾರೆೊ ಅಂದು ಶಾಸಕರಿಗೆ ಅಥವಾ ಸಂಸದರಿಗೆ
ಹೂಗುಚ್ಛವನ್ನು ನೀಡಿ ಸ್ವಾಗತಿಸಿ , ಈ ಪಟ್ಟಿಯನ್ನು ತೆಗೆಯುತ್ತೇನೆ ಎಂದು ಹೇಳಿದರು. ಎಲ್ಲ ವಿಪಕ್ಷ ಸದಸ್ಯರು ಸಭೆ ಮುಗಿಯುವವರೆಗೆ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಇದ್ದರು.

ಈ ವೇಳೆ ಮಾತನಾಡಿದ ವೆಂಕಪ್ಪ ಗೌಡರು ಕೂಡ ನಾನು 10 ವರ್ಷದಿಂದ ಸದಸ್ಯನಾಗಿ , ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ ನಾನು ಕೂಡ ನಗರ ಪಂಚಾಯತ್ ನ ಯಾವುದೇ ಸಾಮಾನ್ಯ ಸಭೆಯಲ್ಲಿ ಇದುವರೆಗೆ ಅವರನ್ನು ಕಂಡಿಲ್ಲ.
ಅವರು ಇಂದಿನ ಸಭೆಗೆ ಬಂದಿದ್ದರೆ ಈ ಬಾರಿ ಮಳೆ ಹಾನಿ ಪ್ರದೇಶಕ್ಕೆ ಎಷ್ಟು ಪರಿಹಾರ ನೀಡಿದ್ದೀರಿ ಎಂದು ಕೇಳಬೇಕಾಗಿತ್ತು. ಅದೇ ರೀತಿ ಬೇರೆ ಬೇರೆ ವಿಷಯಗಳ ಬಗ್ಗೆ ನಗರದ ಅಭಿವೃದ್ಧಿಯ ಕುರಿತು ಚರ್ಚಿಸಬೇಕಾಗಿತ್ತು. ಆದರೆ ಅದಕ್ಕೆ ಅವಕಾಶ ಇನ್ನೂ ಕಂಡು ಬರಲಿಲ್ಲ ಎಂದು ಹೇಳಿದರು.
*ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಾಸ್ಯಕ್ಕೆ ಕಾರಣವಾದ ಮೊಟ್ಟೆ ಮತ್ತು ಟ್ಯೂಬ್ ಲೈಟ್*
ಕೆ ಎಸ್ ಉಮ್ಮರ್ ರವರು ಸಭೆಯಲ್ಲಿ ಕಪ್ಪು ಪಟ್ಟಿಯನ್ನು ಧರಿಸಿದಾಗ ವೆಂಕಪ್ಪ ಗೌಡರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ವಿಧಾನ ಈ ರೀತಿ ಸರಿಯಾದದ್ದು. ಅದು ಬಿಟ್ಟು ಮೊಟ್ಟೆಗಳನ್ನು ಎಸೆಯುವುದು ಸರಿಯಲ್ಲ ಎಂದು ಹೇಳಿದರು.
ಇದಕ್ಕೆ ಕೂಡಲೇ ಉತ್ತರಿಸಿದ ಬೂಡು ರಾಧಾಕೃಷ್ಣ ರೈಯವರು ಹೌದು ಅಧ್ಯಕ್ಷರೇ ಅವರು ಹೇಳಿದ್ದು ಸರಿ. ಮೊಟ್ಟೆ ಎಸೆಯುವುದು, ಟ್ಯೂಬ್ ಲೈಟ್ ಒಡೆಯುವುದು ಸರಿಯಲ್ಲ ಎಂದು ವೆಂಕಪ್ಪ ಗೌಡರಿಗೆ ಟಾಂಗ್ ನೀಡಿದರು. ಈ ವೇಳೆ ಸಭೆಯಲ್ಲಿ ಎಲ್ಲರೂ ನಗುತ್ತಾ ಹಳೆಯ ನೆನಪನ್ನು ಮೆಲುಕು ಹಾಕಿದರು.
*ಅಧ್ಯಕ್ಷರಿಂದ ಸಭೆಯಲ್ಲಿ ಮತ್ತೆ ಕೇಳಿ ಬಂದ ಕೀಬೋರ್ಡ್ ವಾರಿಯರ್ ಪದ*

ಸಭೆಯಲ್ಲಿ ಸದಸ್ಯ ಶರೀಫ್ ಕಂಠಿ ನಗರದ ರಸ್ತೆಗಳಲ್ಲಿ ಇರುವ ಹೊಂಡ ಗುಂಡಿಯ ಬಗ್ಗೆ ಪ್ರಸ್ತಾಪಿಸಿ ಕಳೆದ ಎರಡು ದಿನಗಳ ಹಿಂದೆ ಗಾಂಧಿನಗರದ ಓರ್ವ ಯುವಕ ಶ್ರಮದಾನದ ಮೂಲಕ ಆಲೆಟ್ಟಿ ಕ್ರಾಸ್ ಬಳಿ ಇರುವ ರಸ್ತೆಯ ಗುಂಡಿಯನ್ನು ಮುಚ್ಚಿರುವ ವಿಷಯದ ಬಗ್ಗೆ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಶಾಸಕರು ನಮ್ಮ ಎಮ್ಮೆ, ನಮ್ಮ ಅಧ್ಯಕ್ಷರು ನಮ್ಮ ಎಮ್ಮೆ ಎಂಬ ಬರವಣಿಗೆಯೊಂದಿಗೆ ಕೋಣಗಳ ಚಿತ್ರವನ್ನು ಇಟ್ಟು ಹಾಸ್ಯ ಮಾಡುತ್ತಿದ್ದಾರೆ. ಇದಕ್ಕೆ ನೀವು ಆಸ್ಪದ ಕೊಡುವುದೇಕೆ? ಸಮಸ್ಯೆಗಳಿಗೆ ಸ್ಪಂದಿಸಿದರೆ ಉತ್ತಮವಲ್ಲವೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ರಾಮ ಬಾರಿಗೆ ಮದ್ಯಪಾನ ಮಾಡಲು ಬರುವವರಿಗೆ ರಸ್ತೆಯ ಗುಂಡಿಗಳು ಕಾಣುವುದು, ಅಂಥವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಲೇಖನಗಳಿಗೆ ನಾನು ಬೆಲೆ ಕೊಡುವುದಿಲ್ಲ, ಇದಕ್ಕೂ ಮೊದಲು ನಾನು ಕೀಬೋರ್ಡ್ ವಾರಿಯರ್ ಎಂಬ ಪದವನ್ನು ಬಳಸಿದ್ದೆ. ಅದರಿಂದ ಅವರು ತುಂಬಾ ಹಿನ್ನಡೆಯನ್ನು ಅನುಭವಿಸಿದ್ದೂ ಆಯಿತು. ಈಗಲೂ ಕೂಡ ಆ ಪದವನ್ನು ಬಳಸಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದರಿಂದ ನನಗೆ ಯಾವುದೇ ಮುಜುಗರವಿಲ್ಲ ಎಂದು ಹೇಳಿದರು.
ಪತ್ರಿಕೆಗಳಲ್ಲಿಯೂ ಕೂಡ ಈ ರೀತಿಯ ಹಲವಾರು ವರದಿಗಳು ಬರುತ್ತಿರುತ್ತದೆ. ಪತ್ರಿಕೆಯವರು ಬರೆಯುತ್ತಾರೆ ಎಂದು ಅವೆಲ್ಲವನ್ನೂ ನಾವು ತಲೆಗೆ ಹಾಕಿಕೊಂಡರೆ ಆಗುವುದಿಲ್ಲ ಎಂದು ಮಾಧ್ಯಮದವರ ಮೇಲೂ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಪ್ಪ ಗೌಡರು, ಅಧಿಕಾರದಲ್ಲಿ ಇರುವವರನ್ನು ಜನಸಾಮಾನ್ಯರು ಪ್ರಶ್ನಿಸುವುದು ಸಹಜ. ಮಾಧ್ಯಮದವರು ಸಾರ್ವಜನಿಕರ ಪರವಾಗಿ ಕೆಲಸ ಕಾರ್ಯವನ್ನು ನಿರ್ವಹಿಸುವವರು. ತಪ್ಪುಗಳನ್ನು ಕಂಡರೆ ಮಾಧ್ಯಮದವರು ಮತ್ತು ಸಾರ್ವಜನಿಕರು ಕೇಳುವುದು ಸಹಜ. ಅಧಿಕಾರದಲ್ಲಿರುವ ನಾವು ಅವೆಲ್ಲವನ್ನು ಕೇಳುವ ತಾಳ್ಮೆ ಹೊಂದಿರಬೇಕೆಂದು ಹೇಳಿದರು.
ಇದಕ್ಕೆ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಮ್ಮ ಕಾಲದಲ್ಲಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ಇದ್ದವು. ಅವೆಲ್ಲವನ್ನು ದಾಟಿ ನಾವು ಹೋಗುತ್ತಿದ್ದೆವು. ಇತ್ತೀಚೆಗೆ ವಾಟ್ಸಪ್ ಗಳು ಬಂದ ಮೇಲೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗುತ್ತಿದೆ ಎಂದರು.
ಕೂಡಲೇ ಶರೀಫ್ ಕಂಠಿ, ನಿಮ್ಮ ಪಕ್ಷದವರು ಚುನಾವಣೆ ಪ್ರಣಾಳಿಕೆಯಲ್ಲಿ ಚಿನ್ನದ ರಸ್ತೆಯನ್ನು ನೀಡುತ್ತೀರಿ ಎಂದು ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಇದೀಗ ಸಾರ್ವಜನಿಕರು ಅದನ್ನು ಕೇಳುತ್ತಿದ್ದಾರೆ. ನೀವು ಹೇಳಿದ್ದನ್ನು ಮಾಡದ ಕಾರಣ ಸಾರ್ವಜನಿಕರು ಮತ್ತು ಮಾಧ್ಯಮದವರು ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಜನರ ಬಾಯನ್ನು ಕಟ್ಟಲು ಸಾಧ್ಯವಿಲ್ಲ. ನಮ್ಮ ಕೆಲಸ ಕಾರ್ಯಗಳನ್ನು ನಾವು ಮಾಡುತ್ತಾ ಜನರಿಗೆ ಸರಿಯಾದ ಆಡಳಿತವನ್ನು ನೀಡಬೇಕೆಂದು ವೆಂಕಪ್ಪ ಗೌಡರು ಹೇಳಿದರು. ಇತ್ತೀಚೆಗೆ ಕಾಲಕ್ಕೆ ಕೂಡ ಭಯಪಡಬೇಕಾಗುತ್ತದೆ ಎಂದು ಹೇಳಿದಾಗ ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಕಾಲಕ್ಕೆ ಭಯಪಡುವುದಕ್ಕಿಂತ ವಾಟ್ಸಪ್ ಗಳಿಗೆ ಭಯಪಡಬೇಕೆಂದು ಹೇಳಿದರು.
ಜನನ ಪ್ರಮಾಣ ಪತ್ರ ಮುಂತಾದ ದಾಖಲೆಗಳನ್ನು ನೀಡಲು ಸಾರ್ವಜನಿಕರನ್ನು ನಮ್ಮ ಕಚೇರಿಯಲ್ಲಿ ಸತಾಯಿಸುತ್ತಿರುತ್ತಾರೆ. ಕಲ್ಲು ಗುಂಡಿ ಪರಿಸರದ ಓರ್ವ ಮಹಿಳೆ ಅವರ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಕಚೇರಿಗೆ ಬಂದಾಗ ಎಂಟು ದಿನಗಳ ಬಳಿಕ ಬನ್ನಿ ಎಂದು ಕಳುಹಿಸಿದರು. ನಾನು ಅದನ್ನು ನೋಡಿ ನಾನು ಮತ್ತೆ ಅವರನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಕೂಡಲೇ ಎರಡು ಗಂಟೆಗಳಲ್ಲಿ ಜನನ ಪ್ರಮಾಣ ಪತ್ರ ನೀಡುವ ಕೆಲಸ ಮಾಡಿದರು ಎಂದು ಸದಸ್ಯೆ ಶಿಲ್ಪಾ ಸುದೇವ್ ತಮ್ಮ ಅನುಭವವನ್ನು ಹಂಚಿಕೊಂಡರು.
ನಾಮನಿರ್ದೇಶನ ಸದಸ್ಯ ರೋಹಿತ್ ಕೊಯಿಂಗೋಡಿ ಮಾತನಾಡಿ, ನಗರ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿಯನ್ನು ಪ್ರಾರಂಭಿಸಿ ಅದರ ದೂರವಾಣಿ ನಂಬರನ್ನು ಸಾರ್ವಜನಿಕರಿಗೆ ನೀಡುವಂತೆ ಸಲಹೆ ನೀಡಿದರು.
ಕಳೆದ ಎರಡು ದಿನಗಳಿಂದ ಸುಳ್ಯದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚೆಗಳು ನಡೆದಾಗ ಜಾಕ್ ವೆಲ್ ನಲ್ಲಿ ಹೂಳು ಎತ್ತುವ ಕಾರ್ಯ ನಡೆಯುತ್ತಿದ್ದು ನಾಳೆಯಿಂದ ನೀರಿನ ಪಂಪಿಂಗ್ ಆರಂಭಗೊಳ್ಳಬಹುದು ಎಂದು ಅಧ್ಯಕ್ಷರು ಹೇಳಿದರು.
ಅದೇ ರೀತಿ ಸಭೆಯಲ್ಲಿ ಕೆ ಎಫ್ ಡಿ ಸಿ ಕಾಲನಿಯ ಮೂಲಭೂತ ಸಮಸ್ಯೆಗಳ ಕೊರತೆಯ ಬಗ್ಗೆ, ಬೀರಮಂಗಲ ವಾರ್ಡ್ ನಲ್ಲಿ ಬೋರ್ವೆಲ್ ನಿರ್ಮಿಸುವ ಬಗ್ಗೆ, ಕೆಲವು ಕಡೆಗಳಲ್ಲಿ ಬೋರ್ವೆಲ್ ಗಳಲ್ಲಿ ಮಣ್ಣು ಮಿಶ್ರಿತ ನೀರು ಬರುವ ಬಗ್ಗೆ, ಸುಳ್ಯ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ವ್ಯಾಪಾರ ವ್ಯವಹಾರಗಳನ್ನು ರಾತ್ರಿ 11 ಗಂಟೆಗೆ ಮುಚ್ಚಿಸುವ ಬಗ್ಗೆ, ಸುಳ್ಯ ದಸರಾ ಸಮಿತಿಗೆ ಸರ್ಕಾರದಿಂದ ಅನುದಾನವನ್ನು ತರಿಸಿಕೊಡುವ ಬಗ್ಗೆ, ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಸುಳ್ಯ ನಗರದಲ್ಲಿ ನಿರ್ಮಿಸುವ ಬಗ್ಗೆ ಚರ್ಚೆ ನಡೆದ ವಿಷಯದ ಬಗ್ಗೆ, ಡಾ. ದಾಮ್ಲೆ ರವರು ರಚಿಸುವ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪುಸ್ತಕದ ಬಗ್ಗೆ, ಸುಳ್ಯ ನಗರದಲ್ಲಿ ನಮ್ಮ ಕ್ಲಿನಿಕ್ ಎಂಬ ಆರೋಗ್ಯ ಕೇಂದ್ರ ರಚಿಸುವ ಬಗ್ಗೆ, ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆದವು.
ವೇದಿಕೆಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ಕಿಶೋರಿ ಶೇಟ್,ಪೂಜಿತಾ ಶಿವಪ್ರಸಾದ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್, ಬುದ್ಧ ನಾಯ್ಕ್, ಯತೀಶ್ ಬೀರಮಂಗಲ ಉಪಸ್ಥಿತರಿದ್ದರು.

 

 

 

 

 

LEAVE A REPLY

Please enter your comment!
Please enter your name here