ಶಿರಾಡಿ: ಗ್ರಾಮಸಭೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ

0

  • ಪಿಡಿಒರವರಿಂದ ನಾಲ್ವರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು

ನೆಲ್ಯಾಡಿ: ಗ್ರಾಮಸಭೆಯಲ್ಲಿ ನಿರ್ಣಯ ಪುಸ್ತಕವನ್ನು ಬಲತ್ಕಾರವಾಗಿ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಆರೋಪಿಸಿ ನಾಲ್ವರು ಗ್ರಾಮಸ್ಥರ ವಿರುದ್ಧ ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್ ಪಿ.,ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜ.೨೮ರಂದು ಶಿರಾಡಿ ಗ್ರಾಮದ ಕಳಪ್ಪಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಗ್ರಾ.ಪಂ.ನ 2021-22ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಗುಂಡ್ಯದಲ್ಲಿರುವ ಅನಧಿಕೃತ ಅಂಗಡಿಗಳಿಗೆ ಮಾರುಕಟ್ಟೆ ಶುಲ್ಕ ವಿಧಿಸುವ ವಿಚಾರ ಪ್ರಸ್ತಾಪಗೊಂಡು ವರ್ತಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಗುಂಡ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಅಂಗಡಿಗಳಿಗೆ ಮಾರುಕಟ್ಟೆ ಶುಲ್ಕ ವಿಧಿಸಿ ವ್ಯಾಪಾರ ಪರವಾನಿಗೆ ನವೀಕರಣಗೊಳಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಆದೇಶ ಬಂದಿದೆ. ಅವರ ಆದೇಶದಂತೆ ಮಾರುಕಟ್ಟೆ ಶುಲ್ಕ ಪಾವತಿಸಿದ ಬಳಿಕವೇ ವ್ಯಾಪಾರ ಪರವಾನಿಗೆ ನವೀಕರಣಗೊಳಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಆದರೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲವೆಬ್ಬಿಸಿರುವುದಲ್ಲದೇ ನಿರ್ಣಯ ಪುಸ್ತಕವನ್ನು ಬಲಾತ್ಕಾರವಾಗಿ ತೆಗೆದುಕೊಂಡು ಕರ್ತವ್ಯಕ್ಕೆ ಪಡ್ಡಿಸಿ, ಅವಾಚ್ಯವಾಗಿ ಬೈದು ಗದ್ದಲವೆಬ್ಬಿಸಿದ್ದಾರೆ ಎಂದು ಆರೋಪಿಸಿ ಪಿಡಿಒ ವೆಂಕಟೇಶ್‌ರವರು ಗ್ರಾಮಸ್ಥರಾದ ಜಿಮ್ಸನ್, ಶರಣ್, ಶ್ರೀಶ್ಯಾಮ್, ಅಭಿಲಾಷ್ ಎಂಬವರ ವಿರುದ್ಧ ಜ.29ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಮಸಭೆಯಲ್ಲಿ ಅಹಿತಕರ ಘಟನೆ ನಡೆದಿಲ್ಲ, ಅಧ್ಯಕ್ಷರಿಂದ ದೃಢೀಕರಣ:
ಪಿಡಿಒ ವೆಂಕಟೇಶ್‌ರವರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಬೆನ್ನಲ್ಲೇ ಕಳಪ್ಪಾರು ಶಾಲೆಯಲ್ಲಿ ನಡೆದ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅಧ್ಯಕ್ಷೆ ವಿನೀತಾರವರು ಪೊಲೀಸರಿಗೆ ದೃಢೀಕರಣ ಪತ್ರ ನೀಡಿದ್ದಾರೆ. ಗ್ರಾಮಸಭೆಯಲ್ಲಿ ಲೆಕ್ಕಪತ್ರ ಮಂಡನೆ ವೇಳೆ ಕೆಲ ಗ್ರಾಮಸ್ಥರು ಆಕ್ರೋಶಿತರಾಗಿ ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆ ಸಭೆಯಲ್ಲಿ ಉತ್ತರ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಲಾಗಿದೆ. ಗ್ರಾಮಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅಧ್ಯಕ್ಷೆ ವಿನೀತಾರವರು ಉಪ್ಪಿನಂಗಡಿ ಪೊಲೀಸರಿಗೆ ದೃಢೀಕರಣ ಪತ್ರ ನೀಡಿದ್ದಾರೆ.

LEAVE A REPLY

Please enter your comment!
Please enter your name here