ಫಿಲೋಮಿನಾ ಕಾಲೇಜು, ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್, ಕೈಕಾರದ ಜನತೆಯ ಜಂಟಿ ಆಶ್ರಯದಲ್ಲಿ ಪಾಟ್ನಾ ಪೈರೇಟ್ಸ್ ಕಪ್ತಾನ ಪ್ರಶಾಂತ್ ರೈಯವರಿಗೆ ಪೌರ ಸನ್ಮಾನ

0

  • ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ, ಶಿಸ್ತು, ಬದ್ಧತೆ ಮುಖ್ಯ-ಪ್ರಶಾಂತ್ ರೈ

ಪುತ್ತೂರು: ಪ್ರೌಢಶಿಕ್ಷಣ ಹಂತದವರೆಗೂ ನನಗೆ ಕ್ರೀಡೆಯಲ್ಲಿ ಅಷ್ಟೊಂದು ಆಸಕ್ತಿಯಿರಲಿಲ್ಲ. ಫಿಲೋಮಿನಾ ಕಾಲೇಜಿಗೆ ಸೇರ್ಪಡೆಯಾದ ಬಳಿಕ ನಾನು ಮೊದಲಿಗೆ ವೈಟ್‌ಲಿಪ್ಟಿಂಗ್ ಬಳಿಕ ಕಬಡ್ಡಿ ಆಟಕ್ಕೆ ಮರುಳಾದೆ. ಕ್ರೀಡಾಪಟುವಿನಲ್ಲಿ ಕಠಿಣ ಪರಿಶ್ರಮ, ಶಿಸ್ತು ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡಾಗ ವ್ಯಕ್ತಿಯು ಉನ್ನತ ಹಂತಕ್ಕೆ ತಲುಪುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಪ್ರೊ ಕಬಡ್ಡಿ ಆಟಗಾರ, ಪ್ರಸ್ತುತ ವರ್ಷದ ರನ್ನರ್ಸ್ ಅಫ್ ಪಾಟ್ನಾ ಪೈರೇಟ್ಸ್ ತಂಡದ ಕಪ್ತಾನ, ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಪ್ರಶಾಂತ್ ಕುಮಾರ್ ರೈ ಕೈಕಾರರವರು ಹೇಳಿದರು.

 


ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು, ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಪ್ರಶಾಂತ್ ರೈಯವರ ಹುಟ್ಟೂರಿನ ಕೈಕಾರದ ಜನತೆ ಇವರುಗಳ ಜಂಟಿ ಆಶ್ರಯದಲ್ಲಿ ಮಾ.7ರಂದು ಪೂರ್ವಾಹ್ನ ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯ ರನ್‌ರ್ಸ್ ಅಪ್ ವಿಜೇತ ಪಾಟ್ನಾ ಪೈರೇಟ್ಸ್ ತಂಡದ ಕಪ್ತಾನ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪುತ್ತೂರ್‍ದ ಮುತ್ತು ಪ್ರಶಾಂತ್ ರೈ ಕೈಕಾರರವರಿಗೆ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಮಾ.೭ ರಂದು ಏರ್ಪಡಿಸಲಾಗಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಫಿಲೋಮಿನಾ ಕಾಲೇಜಿಗೆ ನನ್ನನ್ನು ಸೇರ್ಪಡೆಗೊಳಿಸಲು ಬಹಳ ನನ್ನ ತಂದೆ ಬಹಳ ಉತ್ಸುಕರಾಗಿದ್ದರು. ಮನೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದುದರಿಂದ ಪ್ರೌಢಶಾಲೆಯಲ್ಲಿ ನಾನು ಮೂರು ಸಲ ಅನುತ್ತೀರ್ಣಗೊಂಡಿದ್ದೆ. ಕೈಕಾರದ ಶಿವರಾಮ ನಾಕ್‌ರವರು ಉತ್ತಮ ವೈಟ್‌ಲಿಪ್ಟರ್ ಎಂದು ನನ್ನನ್ನು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರಲ್ಲಿ ಪರಿಚಯಿಸಿದ್ದರು. ಆದರೆ ನಾನು ಎಂದಿಗೂ ಕ್ರೀಡೆಯಲ್ಲಿ ಭಾಗವಹಿಸಿರಲಿಲ್ಲ. ಆದರೂ ನಾನು ವೈಟ್‌ಲಿಪ್ಟಿಂಗ್ ಅಭ್ಯಾಸ ಮಾಡತೊಡಗಿದೆ. ಕಾಲೇಜು ಕ್ರೀಡಾಂಗಣದಲ್ಲಿನ ಕಬಡ್ಡಿ ಕೋರ್ಟಿನಲ್ಲಿ ನನ್ನ ಗೆಳೆಯರು ಕಬಡ್ಡಿ ಆಭ್ಯಾಸ ಮಾಡಿದ ಸಂದರ್ಭದಲ್ಲಿ ತನ್ನನ್ನು ಕಬಡ್ಡಿ ಆಡಲು ಹುರಿದುಂಬಿಸಿದರು. ಕ್ರಮೇಣ ನಾನು ವೈಟ್‌ಲಿಪ್ಟಿಂಗ್ ಬಿಟ್ಟು ಕಬಡ್ಡಿಯನ್ನು ಆಯ್ಕೆ ಮಾಡಿಕೊಂಡೆ ಎಂದ ಅವರು ನನ್ನ ಈ ಪಯಣದಲ್ಲಿ ಚಂದ್ರಣ್ಣ, ಎಲ್ಯಾಸ್ ಪಿಂಟೋ, ಹಬೀಬ್ ಮಾಣಿರಂಥವರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಜೊತೆಗೆ ಈ ಫಿಲೋಮಿನಾ ಸಂಸ್ಥೆ ಕೂಡ. ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಇಷ್ಟೊಂದು ಎತ್ತರಕ್ಕೆ ಏರಿಸಿದ್ದು ಹಿರಿಯರ ಆಶೀರ್ವಾದವಾಗಿದೆ. ಸಾಧನೆ ಮಾಡುವ ಕ್ರೀಡಾಪಟುಗಳು ಮಾತ್ರ ಕ್ರೀಡಾಂಗಣದಲ್ಲಿ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಆಭ್ಯಾಸ ಮಾಡುತ್ತಾರೆ. ಕ್ರೀಡಾಪಟುಗಳ ಕಷ್ಟ ಏನು ಅಂತ ಮತ್ತೋರ್ವ ಕ್ರೀಡಾಪಟುಗಳಿಗೆ ಮಾತ್ರ ಗೊತ್ತಾಗುತ್ತದೆ. ಕ್ರೀಡಾಪಟುಗಳು ಕ್ರೀಡೆ ಸಮೀಪಿಸುತ್ತಿದ್ದಂತೆ ಆಭ್ಯಾಸ ಮಾಡುವುದು ಬಿಟ್ಟು ದಿನನಿತ್ಯ ಆಭ್ಯಾಸ ಮಾಡುವವರಾಗಿ ಎಂದು ಅವರು ಹೇಳಿದರು.


ಕಬಡ್ಡಿಯಲ್ಲಿ ಕಾಲೆಳೆದರೆ ಅಂಕಗಳು ಪ್ರಾಪ್ತಿಯಾಗುವುದು-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಪ್ರಶಾಂತ್ ರೈಯವರಂತಹ ಸಾಮಾನ್ಯ ವ್ಯಕ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಅಭಿನಂದನೆಗಳು. ರಾಜಕೀಯದಲ್ಲಿ ಕಾಲೆಳೆದರೆ ಯಾವುದೂ ಅಂಕಗಳು ಸಿಗುವುದಿಲ್ಲ. ಆದರೆ ಕಬಡ್ಡಿಯಲ್ಲಿ ಕಾಲೆಳೆದರೆ ಅಂಕಗಳು ಪ್ರಾಪ್ತಿಯಾಗುವುದು. ಯಾವನೇ ವ್ಯಕ್ತಿಯು ಸಾಧನೆ ಮಾಡಿದಾಗ, ಆ ವ್ಯಕ್ತಿಗೆ ಗುರು-ಹಿರಿಯರ ಸಮ್ಮುಖದಲ್ಲಿ ಹುಟ್ಟೂರ ಸನ್ಮಾನ ಮಾಡುವುದಕ್ಕಿಂತ ಬೇರೆ ಸನ್ಮಾನ ಬೇಕಾಗಿರುವುದಿಲ್ಲ. ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಕ್ರೀಡೆಯಲ್ಲೂ ಪರಿಪೂರ್ಣವಾಗಿ ಭಾಗವಹಿಸಿ. ವಿದ್ಯಾರ್ಥಿದೆಸೆಯಲ್ಲಿದ್ದಾಗ ಕಡಿಮೆ ಅಂಕಗಳನ್ನು ಪಡೆದಂತಹ ಪ್ರಶಾಂತ್ ರೈಯವರು ಇಂದು ಯಾವ ಸಾಧನೆ ಮಾಡಿದ್ದಾರೆ ಎಂಬುದು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದ ಅವರು ಈ ಫಿಲೋಮಿನಾ ವಿದ್ಯಾಸಂಸ್ಥೆಯಿಂದ ರಾಜ್ಯಕ್ಕೆ ಮುಖ್ಯಮಂತ್ರಿ, ಕೇಂದ್ರಕ್ಕೆ ಮಂತ್ರಿಗಳು, ಸಂಗೀತ ಕ್ಷೇತ್ರದಲ್ಲಿ ಚಂದನ್ ಶೆಟ್ಟಿ ಹೀಗೆ ವಿವಿಧ ಕ್ಷೇತ್ರದಲ್ಲಿ ಬೆಳಗಿದ ಮಹನೀಯರು ಕಾಣಸಿಗುತ್ತಾರೆ. ಯಾವುದೇ ಕ್ಷೇತ್ರವಿರಲಿ, ಅಂತಹ ಪ್ರತಿಭಾವಂತರನ್ನು ಫಿಲೋಮಿನಾ ವಿದ್ಯಾಸಂಸ್ಥೆಯು ತೆರೆಮರೆಯಲ್ಲಿ ಬೆಳೆಸಿದೆ ಎನ್ನುವುದು ಸತ್ಯ ಎಂದು ಅವರು ಹೇಳಿ ಪ್ರಶಾಂತ್ ರೈಯವರ ಮುಂದಿನ ಕ್ರೀಡಾ ಭವಿಷ್ಯವು ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.

 


ನಗರಸಭಾ ಸ್ವಚ್ಛತಾ ರಾಯಭಾರಿಯಾಗಿದ್ದರು ಪ್ರಶಾಂತ್ ರೈಯವರು-ಜೀವಂಧರ್ ಜೈನ್:
ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ಮಾತನಾಡಿ, ಪುತ್ತೂರು ನಗರಸಭೆಗೂ, ಪ್ರಶಾಂತ್ ರೈಯವರಿಗೂ ಐದು ವರ್ಷದ ಸಂಬಂಧವಿದೆ. ಭಾರತ ಸರ್ಕಾರದ ಸ್ವಚ್ಛತೆ ಯೋಜನೆಯಡಿ ತಾಲೂಕಿನ ಸ್ವಚ್ಛತಾ ರಾಯಭಾರಿಯಾಗಿ ಯಾರನ್ನು ಮಾಡುವುದು ಎಂದಾಗ ಅಂದಿನ ಪೌರಾಯುಕ್ತರಾದ ರೂಪ ಶೆಟ್ಟಿಯವರು ಪ್ರಶಾಂತ್ ರೈಯವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ನೇಮಿಸಿದ್ದರು. ಫಿಲೋಮಿನಾ ವಿದ್ಯಾಸಂಸ್ಥೆಯು ಉತ್ತಮ ಹಿನ್ನೆಲೆಯುಳ್ಳಂತಹ ಸಂಸ್ಥೆಯಾಗಿದೆ. ಪ್ರಶಾಂತ್ ರೈಯವರು ತಾನು ಕಲಿತ ಸಂಸ್ಥೆ, ಇಲ್ಲಿನ ಗುರುಗಳ ಮೇಲೆ ಹಾಗೂ ಕಾಲೇಜಿನ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿ ಪ್ರಶಾಂತ್ ರೈಯವರ ಮುಂದಿನ ಜೀವನವು ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ ಎಂದರು.


ಪ್ರಶಾಂತ್ ರೈಯವರ ಸಾಧನೆ ಎಲ್ಲರಿಗೂ ಪ್ರೇರಣೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಪ್ರಶಾಂತ್ ರೈಯವರ ಆಗಮನದಿಂದ ಫಿಲೋಮಿನಾ ಕ್ಯಾಂಪಸ್ ಪುಳಕಿತಗೊಂಡಿದೆ ಮಾತ್ರವಲ್ಲ ಅವರ ಸಾಧನೆಯ ಕುರಿತಾಗಿ ಇಂದು ಹಮ್ಮಿಕೊಂಡಿರುವ ಕಾರ್ಯಕ್ರಮ ಅಭಿನಂದನೀಯ. ಗ್ರಾಮೀಣ ಸೊಗಡಿನ, ಈ ಮಣ್ಣಿನ ಕ್ರೀಡೆಯಾಗಿರುವ ಕಬಡ್ಡಿಗೆ ಈಗ ಬಹಳ ಪ್ರಾಶಸ್ತ್ಯವಿದ್ದು ಈ ಕಬಡ್ಡಿ ಕ್ರೀಡೆ ಇಂದು ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸುತ್ತಿದೆ. ಪ್ರಶಾಂತ್ ರೈಯವರು ವಿದ್ಯಾರ್ಥಿದಿಸೆಯಲ್ಲಿರುವಾಗಲೇ ಅವರು ತಮ್ಮ ತಂದೆ-ತಾಯಿಯನ್ನು ಕಳಕೊಂಡಿದ್ದರೂ, ಇಂದು ಅವರು ಮಾಡಿರುವ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದ ಅವರು ಯಾರಲ್ಲಿ ಪ್ರತಿಭೆಯಿದೆ, ಅವರು ತಮ್ಮ ಪ್ರತಿಭೆಯನ್ನು ಸೂಕ್ತ ಸಮಯದಲ್ಲಿ ಸಮಾಜಕ್ಕೆ, ದೇಶಕ್ಕೆ ಪ್ರಚುರಪಡಿಸುವವರಾಗಬೇಕು. ಪ್ರತಿಯೋರ್ವರು ಈ ದೇಶದ ಸಂಪತ್ತು. ಸೌಹಾರ್ದತೆಯಿಂದ ನಾವೆಲ್ಲ ಈ ದೇಶ ಕಟ್ಟುವಲ್ಲಿ ಶ್ರಮಿಸಬೇಕಾಗಿದೆ ಎಂದು ಹೇಳಿ ಪ್ರಶಾಂತ್ ರೈಯವರ ಸಾಧನೆಗೆ ಮೆಚ್ಚುಗೆ ಸೂಚಿಸಿದರು.

ಪ್ರಶಾಂತ್‌ರವರಲ್ಲಿನ ವಿಧೇಯತೆ, ಶಿಸ್ತು, ಶ್ರದ್ಧೆಯೇ ಸಾಧನೆಯ ಹಿಂದಿರುವ ಅಭಿಮಾನವಾಗಿದೆ-ವಂ|ಡಾ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಪಾಟ್ನಾ ಪೈರೇಟ್ಸ್ ತಂಡದ ಕಪ್ತಾನ ಪ್ರಶಾಂತ್ ರೈಯವರು ಇಂದು ದೇಶವ್ಯಾಪಿ ಪ್ರಸಿದ್ಧಿ ಹೊಂದಿದಂತಹ ಆಟಗಾರರಾಗಿದ್ದಾರೆ. ಅವರು ಈ ಹಂತಕ್ಕೆ ಬರಲು ೨೨ ವರ್ಷದ ಕಠಿಣ ತಪಸ್ಸಿದೆ. ಯಾವುದೇ ಆಟವಾಗಿರಲಿ ಅಥವಾ ಪಾಠವಾಗಿರಲಿ, ಸಾಧನೆ ಮಾಡಲು ಅವಿರತ ಶ್ರಮ ಬೇಕಾಗುತ್ತದೆ. ಪ್ರಶಾಂತ್‌ರವರಲ್ಲಿರುವ ವಿನಯತೆ, ವಿಧೇಯತೆ, ಶಿಸ್ತು, ಶ್ರದ್ಧೆಯೇ ಅವರ ಸಾಧನೆಯ ಹಿಂದಿರುವ ಅಭಿಮಾನ ಹಾಗೂ ಸಂತೋಷವಾಗಿದೆ ಎಂದ ಅವರು ಫಿಲೋಮಿನಾವು ಚಾರಿತ್ರಿಕವಾಗಿ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದ ಕಾಲೇಜಾಗಿದೆ. ಮೇಜರ್ ವೆಂಕಟ್ರಾಮಯ್ಯ, ಎವರೆಸ್ಟ್ ರೊಡ್ರಿಗಸ್, ಎಲ್ಯಾಸ್ ಪಿಂಟೋ, ಪ್ರಕಾಶ್ ಡಿ’ಸೋಜರವರು ಕ್ರೀಡಾಪಟುಗಳ ಪ್ರತಿಭೆಯನ್ನು ಎತ್ತಿ ಹಿಡಿಯುವಲ್ಲಿ ಪ್ರೋತ್ಸಾಹಿಸಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮುಖೇನ ಸಂಸ್ಥೆಗೆ ಹೆಸರನ್ನು ತರುವವರಾಗಿ ಎಂದು ಹೇಳಿ ಪ್ರಶಾಂತ್ ರೈಯವರ ಸಾಧನೆಗೆ ಅವರು ಹರ್ಷವನ್ನು ವ್ಯಕ್ತಪಡಿಸಿದರು.

ಚಂದ್ರಹಾಸರವರಿಲ್ಲದಿರುತ್ತಿದ್ದರೆ ಪ್ರಶಾಂತ್‌ರವರಿಗೆ ಸಾಧನೆಗೈಯಲು ಸಾಧ್ಯವಾಗುತ್ತಿರಲಿಲ್ಲವೇನೋ-ದಯಾನಂದ ಕೋರ್ಮಂಡ:
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಬಡ್ಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸಿದ ಪುತ್ತೂರಿನ ಹೆಮ್ಮೆಯ ಕುವರ ನಮ್ಮ ಪ್ರಶಾಂತ್‌ರವರು. ದೈ.ಶಿ.ನಿ ಎಲ್ಯಾಸ್ ಪಿಂಟೋರವರ ಮಾರ್ಗದರ್ಶನ ಹಾಗೂ ಹಬೀಬ್‌ರವರ ನುರಿತ ತರಬೇತುದಾರುವಿಕೆಯಿಂದ ಪ್ರಶಾಂತ್‌ರವರು ಇಂದು ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ. ಬೆಟ್ಟಂಪಾಡಿಯಲ್ಲಿ ಅಂದು ನಡೆದ ಕಬಡ್ಡಿ ಪಂದ್ಯವೊಂದರಲ್ಲಿ ವಿಜಯಾ ಬ್ಯಾಂಕ್ ತಂಡದಲ್ಲಿ ಓರ್ವ ಅತಿಥಿ ಆಟಗಾರನಾಗಿ ಆಡಿದ್ದ ಪ್ರಶಾಂತ್‌ರವರು ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿ ಬೆಸ್ಟ್ ರೈಡರ್ ಎನಿಸಿಕೊಂಡವರು. ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿಯವರಿಲ್ಲದಿರುತ್ತಿದ್ದರೆ ಪ್ರಶಾಂತ್ ರೈಯವರಿಗೆ ಇಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ಹೇಳಿದರು.

ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಪ್ರತಿಭಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಸ್ವಾಗತಿಸಿ, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ವಂದಿಸಿದರು. ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುಗುತ್ತು, ನವನೀತ್ ಬಜಾಜ್, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ರೈ, ಕಬಡ್ಡಿ ತರಬೇತುದಾರ ಹಬೀಬ್ ಮಾಣಿರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ..
ಬೆಳಿಗ್ಗೆ ಒಂಭತ್ತು ಗಂಟೆಗೆ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈಯವರನ್ನು ದರ್ಬೆಯಿಂದ ಫಿಲೋಮಿನಾ ಕಾಲೇಜು ಕ್ಯಾಂಪಸ್ಸಿನೊಳಗಿರುವ ಸಭಾಂಗಣದವರೆಗೆ ಉದ್ಯಮಿ ಕೃಷ್ಣಪ್ರಸಾದ್ ಆಳ್ವರವರಿಂದ ಶೃಂಗಾರಗೊಂಡ ತೆರೆದ ಜೀಪಿನಲ್ಲಿ ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಕ್ರೀಡಾಪಟುಗಳು, ಹಿರಿಯ ಕ್ರೀಡಾಪಟುಗಳು, ಹಿರಿಯ-ಕಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರಶಾಂತ್ ರೈಯವರಿಗೆ ಹೂಹಾರ ಹಾಕುವುದರೊಂದಿಗೆ ಸ್ವಾಗತಿಸಲಾಯಿತು. ಮೆರವಣಿಗೆಯುದ್ದಕ್ಕೂ ಬೆಟ್ಟಂಪಾಡಿಯ ಚೆಂಡೆ ವಾದ್ಯದೊಂದಿಗೆ ಕಾಲೇಜಿನ ವಿದ್ಯಾರ್ಥಿಳು-ವಿದ್ಯಾರ್ಥಿನಿಯರು ಡ್ಯಾನ್ಸ್ ಮಾಡುವುದರ ಮೂಲಕ ಮೆರವಣಿಗೆಯು ಹೆಚ್ಚಿನ ಮೆರುಗನ್ನು ಹೊಂದಿತ್ತು. ಕಾರ್ಯಕ್ರಮದ ಬಳಿಕ ಪ್ರಶಾಂತ್ ರೈಯವರು ತನ್ನ ಸಹಪಾಠಿಗಳೊಡನೆ ತಾನು ಕಲಿತ ಕಾಲೇಜಿನ ಕ್ಲಾಸ್‌ರೂಂಗಳಿಗೆ ಭೇಟಿಯಿತ್ತಿರುವುದು ವಿಶೇಷತೆಯಾಗಿದೆ.

ಸೆಲ್ಪಿ ಗೀಳು..
ಕಾರ್ಯಕ್ರಮದ ಬಳಿಕ ತಮ್ಮ ನೆಚ್ಚಿನ ಸೆಲೆಬ್ರಿಟಿ ಪ್ರಶಾಂತ್ ರೈಯವರೊಂದಿಗೆ ಸೆಲ್ಫಿ ಫೊಟೊ ಕ್ಲಿಕ್ಕಿಸಲು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು `ತಾ ಮುಂದು’ ಎಂಬ ಹಠಕ್ಕೆ ಬಿದ್ದವರಂತೆ ಕಂಡು ಬಂದಿತ್ತು. ಕೆಲವರಂತೂ ವಿದ್ಯಾರ್ಥಿನಿಯರು ಎರಡೆರಡು ಬಾರಿ ಫೊಟೊ ಕ್ಲಿಕ್ಕಿಸಿದ್ದುಂಟು. ಇದೇ ಸಂದರ್ಭದಲ್ಲಿ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳು ಕಪ್ಪು ಟೀಶರ್ಟ್ ದಿರಿಸಿನೊಂದಿಗೆ `ಬೌನ್ಸರ್‍ಸ್’ ತರಹ ಕಾರ್ಯಕ್ರಮದುದ್ದಕ್ಕೂ ಗಮನ ಸೆಳೆದಿರುತ್ತಾರೆ.

ಪ್ರಶಾಂತ್ ರೈಯವರು ಭಾರತ ತಂಡದಲ್ಲಿ ಗುರುತಿಸಿಕೊಳ್ಳುವಂತಾಗಲಿ..
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ಪ್ರಶಾಂತ್ ರೈಯವರನ್ನು ದಿ.ಮುತ್ತಪ್ಪ ರೈ ಹಾಗೂ ವಿಜಯಾ ಬ್ಯಾಂಕಿನ ನಿವೃತ್ತ ಸೀನಿಯರ್ ಪ್ರಬಂಧಕರಾದ ಜಯಕರ್ ಶೆಟ್ಟಿಯವರ ಮೂಲಕ ವಿಜಯಾ ಬ್ಯಾಂಕಿಗೆ ಸೇರ್ಪಡೆಗೊಳಿಸುವಲ್ಲಿ ಕಿಂಚಿತ್ತ್ ಸಹಾಯ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಪ್ರಶಾಂತ್ ರೈಯವರಲ್ಲದೆ ಅನೇಕ ಪ್ರತಿಭಾನ್ವಿತ ಯುವಕರನ್ನು ಅವರ ಗುರುತು ಪರಿಚಯ ಇಲ್ಲದಿದ್ದರೂ ವಿಜಯಾ ಬ್ಯಾಂಕಿಗೆ ಸೇರ್ಪಡೆಗೊಳಿಸಿರುತ್ತೇನೆ. ಪ್ರಶಾಂತ್ ರೈಯವರು ಇಂದು ಸಾಧನೆ ಮಾಡಲು ಅವರಲ್ಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆ. ಕ್ರೀಡೆ ಅಂದರೆ ಅದು ಫಿಲೋಮಿನಾ ಎಂಬ ಹೆಸರನ್ನು ಫಿಲೋಮಿನಾ ಸಂಸ್ಥೆ ಹೊಂದಿತ್ತು ಎಂದ ಅವರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಕ್ರೀಡೆ ಎಂದಿಗೂ ಅವರ ಕೈ ಬಿಡೋದಿಲ್ಲ. ಪ್ರಶಾಂತ್ ರೈಯವರು ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂಬುದೇ ನನ್ನ ಹಾರೈಕೆಯಾಗಿದೆ. – ಎನ್.ಚಂದ್ರಹಾಸ ಶೆಟ್ಟಿ, ಗೌರವಾಧ್ಯಕ್ಷರು, ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್

LEAVE A REPLY

Please enter your comment!
Please enter your name here