ಲಂಚ ಭ್ರಷ್ಟಾಚಾರದಿಂದ ಜನರ ಜೀವನ, ದೇಶ ಹಾಳಾಗುವುದನ್ನು ನೋಡಿ ಸುಮ್ಮನಿರುವುದೇಕೆ?

0

  • ಗುಲಾಮರಂತೆ, ನಾಯಿ,ನರಿಗಳಂತೆ ಹೆದರಿ ಬದುಕಬೇಕೇ? ರಾಜರಂತೆ ಬದುಕಬೇಕೇ?
  • ನಿಮ್ಮ ಮಕ್ಕಳ ಭವಿಷ್ಯಕ್ಕಾದರೂ ಲಂಚ, ಭ್ರಷ್ಟಾಚಾರ ಮೆಟ್ಟಿ ನಿಲ್ಲಬೇಡವೇ?
  •  ಅಧಿಕಾರಿಗಳೇ, ಜನರ ರಕ್ತ ಹೀರಲಿಕ್ಕಾಗಿ, ಎಂಜಲು ಕಾಸಿಗಾಗಿ ಹಾತೊರೆಯಬೇಡಿ. ಜನರ ಶಾಪ ಪಡೆಯಬೇಡಿ
  •  ಜನ ಸೇವಕರಾಗಿ ಉತ್ತಮ ಸೇವೆ ನೀಡಿ. ಜನರ ಪ್ರೀತಿ ಆಶೀರ್ವಾದ ಪಡೆಯಿರಿ. ನಿಮ್ಮ ಬೆಂಬಲಕ್ಕೆ ಜನರಿದ್ದೇವೆ.

ಲಂಚ, ಭ್ರಷ್ಟಾಚಾರದ ತೊಂದರೆಗಳ ಬಗ್ಗೆ ಚರ್ಚೆಯಲ್ಲಿ ಸಮಯ ಕಳೆಯುತ್ತಿದ್ದೇವೆ. ಅದು ಸಾಧ್ಯವಿಲ್ಲ ಎಂದು ಕೊರಗುತ್ತಾ, ನರಳುತ್ತಾ ಇರುವುದೇಕೆ? ಅದು ನಿಲ್ಲಬೇಕು. ಉತ್ತಮ ಸೇವೆ ದೊರಕಬೇಕು ಎಂದು ಜನರು ಬಯಸಿದರೆ ಈ ಪ್ರಜಾಪ್ರಭುತ್ವದಲ್ಲಿ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಯಾಕೆಂದರೆ ನಾವೇ ರಾಜರು. ನಮ್ಮಿಂದ ಆಯ್ಕೆಯಾದ ಜನಪ್ರತಿನಿಽಗಳು, ಅವರಿಂದ ಸರಕಾರ, ನಮಗಾಗಿ ನಡೆಯುವ ನಮ್ಮದೇ ಆಡಳಿತವಿದು. ಜನಪ್ರತಿನಿಧಿಗಳು ನಮ್ಮ ಸೇವೆಗಾಗಿ ಆಯ್ಕೆಯಾದ ಪ್ರತಿನಿಧಿಗಳು. ಅಧಿಕಾರಿಗಳು ನಮ್ಮ ಸೇವೆಗೆ ನೇಮಕಗೊಂಡವರು ಎಂದಾದ ಮೇಲೆ ನಾವು ಗುಲಾಮರಂತೆ ನರಿ, ನಾಯಿಗಳಂತೆ ಹೆದರಿ ಬದುಕುವುದೇಕೆ?. ನಾವು ಓಟು ಹಾಕಿ ಗೆಲ್ಲಿಸುವ ಜನಪ್ರತಿನಿಧಿಗಳ ಬಳಿ ಲಂಚ, ಭ್ರಷ್ಟಾಚಾರ ನಿಲ್ಲಿಸಲು ಮತ್ತು ಲಂಚದ ಹಣ ವಾಪಸ್ ಜನರಿಗೆ ತೆಗಿಸಿಕೊಡಲು ಸಾಧ್ಯವಿಲ್ಲವೇ ಎಂದು ವಿಚಾರಿಸಿ. ಕೇಳಿನೋಡಿ. ಅವರು ಖಂಡಿತಾ ನಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರಿಗೆ ನಾವು, ನಮ್ಮ ಓಟು ಬೇಕು. ನಾವಿಲ್ಲದಿದ್ದರೆ ಅವರು ಗೆಲ್ಲುವುದಿಲ್ಲ. ಯಾವ ಪಕ್ಷವೂ ಆಡಳಿತಕ್ಕೆ ಬರುವುದಿಲ್ಲ ಎಂಬುವುದರ ಅರಿವು ಅವರಿಗಿದೆ. ಆ ಅರಿವು ಮತದಾರ ರಾಜರುಗಳಾದ ನಮಗೆ ಇರಬೇಕು.

ನಾವು ರಾಜರುಗಳಾಗಿರುವಾಗ ಲಂಚ, ಭ್ರಷ್ಟಾಚಾರದಿಂದ ಜನರ ಜೀವನ ಹಾಳಾಗುತ್ತಿರುವುದನ್ನು ನೋಡಿ ಸುಮ್ಮನೆ ಇರುವುದು ಸರಿಯೇ? ಯುಕ್ರೇನ್-ರಷ್ಯಾ ಯದ್ಧದಲ್ಲಿ ಯುಕ್ರೇನ್‌ನ ನಾಗರೀಕರು ದೇಶದ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಹೀಗಿರುವಾಗ ನಾವು ಸಣ್ಣ ವಿಷಯವಾದ ಲಂಚ, ಭ್ರಷ್ಟಾಚಾರವನ್ನು ಎದುರಿಸಲಾಗದೆ ರಣ ಹೇಡಿಗಳಂತೆ ಬದುಕುವುದು ಸರಿಯೇ? ನಮ್ಮ ಮಕ್ಕಳ ಭವಿಷ್ಯತ್ತಿಗೆ ಎಷ್ಟೊಂದು ಕಷ್ಟ ಪಡುತ್ತೇವೆ, ತ್ಯಾಗ ಮಾಡುತ್ತೇವೆ. ಅವರ ಭವಿಷ್ಯ ಭದ್ರವಾಗಿರಲಿಕ್ಕಾಗಿ ಕನಸು ಕಟ್ಟುವ ನಾವು, ಅವರಿಗೆ ಎಂತಹ ಲಂಚಕೋರ, ಭ್ರಷ್ಟ ಸಮಾಜ ಬಿಟ್ಟು ಹೋಗುತ್ತಿದ್ದೇವೆ.? ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಲಿಕ್ಕೆ, ಒಳ್ಳೆಯ ಸಮಾಜಕ್ಕಾಗಿಯಾದರೂ ಲಂಚ, ಭ್ರಷ್ಟಾಚಾರವನ್ನು ಮೆಟ್ಟಿ ನಿಂತು ಅದರ ನಿರ್ಮೂಲನೆಗೆ ಪ್ರಯತ್ನ ಮಾಡೋಣ.

ಲಂಚದ ಹಣ ಬೇಕೇ ಬೇಕು ಎಂದಿದ್ದರೆ ಪಟ್ಟಿ ಕೊಡಿ. ಸಾರ್ವಜನಿಕರಿಂದ ವಂತಿಗೆ ಪಡೆದು ನೀಡುತ್ತೇವೆ. ಜನರಿಂದ ಸುಲಿಗೆ ಮಾಡಬೇಡಿ:
ಇಲಾಖೆಯ ಅಽಕಾರಿಗಳಿಗೆ, ಸಿಬ್ಬಂದಿಗಳಿಗೆ ಕೈ ತುಂಬಾ ಸಂಬಳ ಇದ್ದರೂ ಜನರನ್ನು ಸುಲಿಗೆ ಮಾಡಿ, ಅವರ ಬೆವರಿನ, ರಕ್ತದ ಹಣ ಹೀರುವ ಕೆಲಸ ಮಾಡಿದರೆ ಜನರ ಕಣ್ಣೀರಿನ, ಶಾಪ, ಪಾಪದ ಹಣ ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಒಳ್ಳೆಯದು ಮಾಡಲಿಕ್ಕಿಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ. ಗೃಹ ಸಚಿವ ಅರಗ ಜ್ಞಾನೇಂದ್ರರು ತಮ್ಮ ಇಲಾಖೆಯ ಕೆಲವರ ಭ್ರಷ್ಟಾಚಾರವನ್ನು ಉಲ್ಲೇಖಿಸಿ ಜನರ ಎಂಜಲಿನ ಹಣದ ಆಸೆಗೆ ಬೀಳಬೇಡಿ ಎಂದು ಹೇಳಿದ್ದಾರೆ. ಅದನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಲಂಚದ ಹಣ ಬೇಕೇ ಬೇಕು ಎಂದಿದ್ದರೆ ಯಾವ ಕೆಲಸಕ್ಕೆ ಎಷ್ಟು ಎಂದು ಪಟ್ಟಿ ನೀಡಿ,ಯಾಕೆ ಕೊಡಬೇಕು ಎಂಬ ವಿವರ ಕೊಡಿ. ಅದನ್ನು ಪ್ರಕಟಿಸಿ ಸಾರ್ವಜನಿಕರಿಂದ ವಂತಿಗೆಯಾಗಿ ಸಂಗ್ರಹಿಸಿ ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಜನರಿಂದ ಹಣ ವಸೂಲಿ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಹಣ ಪಡೆದರೆ ಅದನ್ನು ವಾಪಸ್ ಕೊಡಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ತಿಳಿಸಲು ಇಚ್ಛಿಸುತ್ತೇವೆ. ಅದು ಏನೇ ಇರಲಿ. ನಮ್ಮ ಊರಿನಲ್ಲಿ ಜನ ಸೇವಕರಾಗಿ ಉತ್ತಮ ಕೆಲಸ ಮಾಡಿದರೆ ಪ್ರೀತಿ, ವಿಶ್ವಾಸ ಮಾತ್ರವಲ್ಲ ಆಶೀರ್ವಾದ ದೊರೆಯುವುದು ಖಂಡಿತ. ಅದು ಪುಣ್ಯದ ಕೆಲಸವೂ ಹೌದು ಎಂದು ಹೇಳಲು ಬಯಸುತ್ತೇನೆ.

ಪ್ರಾಮಾಣಿಕವಾಗಿ ಕೆಲಸ ಮಾಡಲು ಅಡಚಣೆ, ತೊಂದರೆಗಳಿದ್ದರೆ ತಿಳಿಸಿ. ಪರಿಹರಿಸಲು ಬೆಂಬಲಕ್ಕೆ ನಿಲ್ಲುತ್ತೇವೆ:
ಈ ಮೇಲಿನ ವಿಷಯ ಜನರಿಗೆ ಹೌದು ಎಂದು ಕಂಡರೆ ಲಂಚ, ಭ್ರಷ್ಟಾಚಾರ ನಿರ್ಮೂಲನೆ ದೊಡ್ಡ ಜನಸೇವೆ, ದೇಶ ಸೇವೆ ಎಂದು ನಂಬುವುದಾದರೆ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಸುದ್ದಿ ಜನಾಂದೋಲನಕ್ಕೆ ಕೈ ಜೋಡಿಸಿರಿ. ಗ್ರಾಮ ಗ್ರಾಮಗಳಲ್ಲಿ ಜನರು ಒಗ್ಗಟ್ಟಾಗಿ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಅಧಿಕಾರಿಗಳನ್ನು ಭೇಟಿ ಮಾಡಿ “ಉತ್ತಮ ಸೇವೆ ನೀಡಿದರೆ ಪುರಸ್ಕರಿಸುತ್ತೇವೆ. ದಯವಿಟ್ಟು ಲಂಚ, ಭ್ರಷ್ಟಾಚಾರ ಮಾಡಬೇಡಿ. ಹಣಕ್ಕಾಗಿ ಜನರಿಗೆ ತೊಂದರೆ ಕೊಟ್ಟರೆ ಆ ಲಂಚವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಮಾಡುತ್ತೇವೆ. ಅವರನ್ನು ಬಹಿಷ್ಕರಿಸುತ್ತೇವೆ” ಎಂಬ ಮನವಿಯನ್ನು ನೀಡಬೇಕು. ಬಹಿರಂಗವಾಗಿ ಘೋಷಿಸಬೇಕು. ಅಧಿಕಾರಿಗಳಿಗೆ ತಮ್ಮ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಲು ಅಡಚಣೆಗಳಿದ್ದರೆ, ಬೇರೆಯವರಿಂದ ತೊಂದರೆಗಳಿದ್ದರೆ ಅದನ್ನು ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ ಸಹಕಾರದೊಂದಿಗೆ, ಶಾಸಕರೊಂದಿಗೆ ಸೇರಿಕೊಂಡು ಸರಿಪಡಿಸುತ್ತೇವೆ ಎಂಬ ಭರವಸೆ ನೀಡಬೇಕು. ತಾಲೂಕು ಮಟ್ಟದಲ್ಲಿಯೂ ಅದೇ ರೀತಿ ಜನರು ಸೇರಿ ಪ್ರತೀ ಇಲಾಖೆಯನ್ನು ಭೇಟಿಯಾಗಿ ಈ ಮೇಲಿನ ಮನವಿಯನ್ನು ನೀಡಬೇಕು. ಅಷ್ಟು ಮಾಡಿದರೆ ಇನ್ನು 72 ದಿವಸಗಳಲ್ಲಿ ನಮ್ಮ ಊರು, ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ ಎಂದು ಪುನರುಚ್ಚರಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here