ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆರೋಗ್ಯ ಸೇವೆ

0

  • ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ

 

ಪುತ್ತೂರು: ಸಂಪ್ಯದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ದೇವರ ಭಕ್ತರಿಗೆ ಪ್ರತಿ ತಿಂಗಳ ಮೊದಲ ಆದಿತ್ಯವಾರದಂದು ದೇವರ ಪ್ರಸಾದ ರೂಪದಲ್ಲಿ ಭಕ್ತರಿಗೆ ದೊರೆಯಲಿರುವ ಉಚಿತ ವೈದ್ಯಕೀಯ ಶಿಬಿರವು ಎ.3ರಂದು ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯರವರ ಯೋಚನೆ, ಯೋಜನೆಯೊಂದಿಗೆ ಉಚಿತ ವೈದ್ಯಕೀಯ ಶಿಬಿರವು ಪ್ರಾರಂಭಗೊಂಡಿದೆ. ಇದಕ್ಕೆ ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು ಸಾಥ್ ನೀಡಿದ್ದಾರೆ. ಶಿಬಿರದಲ್ಲಿ ಬ್ಲಡ್, ಶುಗರ್, ಬಿಪಿ ಸೇರಿದಂತೆ ಸಾಮಾನ್ಯ ಚಿಕಿತ್ಸೆಗಳನ್ನು ನಡೆಸಿ, ಸಾಧ್ಯವಾದಷ್ಟು ರೀತಿಯಲ್ಲಿ ಔಷಧಿಗಳನ್ನು ಸ್ಥಳದಲ್ಲಿಯೇ ವಿತರಿಸಲಾಯಿತು. ಶುಗರ್, ಸಾಮಾನ್ಯ ಚಿಕಿತ್ಸೆ ಹಾಗೂ ಬಿ.ಪಿ ತಪಾಸಣೆಗೆ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿತ್ತು. ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ, ನೆಹರುನಗರ ಸಂಜೀವಿನಿ ಕ್ಲಿನಿಕ್ ಡಾ.ರವಿನಾರಾಯಣ ಹಾಗೂ ಉಜಿರೆ ಎಸ್‌ಡಿಎಂನ ಡಾ.ದೀಕ್ಷಾ ಗೌಡ ಬೈಲಾಡಿ ವೈದ್ಯಕೀಯ ತಪಾಸಣೆಗಳನ್ನು ನಡೆಸಿದರು. ನಡೆಯಲು ಅನಾನುಕೂಲವಿದ್ದ ಶಿಬಿರಾರ್ಥಿಗಳಿಗೆ ವ್ಹೀಲ್ ಚೆಯರ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಸುಮಾರು ೧೦೦ಕ್ಕೂ ಅದಿಕ ಮಂದಿ ಶಿಬಿರ ಪ್ರಯೋಜನ ಪಡೆದುಕೊಂಡರು. ಶಿಬಿರಾರ್ಥಿಗಳಿಗೆ ಊಟ ಹಾಗೂ ಉಪಾಹಾರವನ್ನು ನೀಡಲಾಗಿತ್ತು.

 


ದಾನಿಗಳ ನೆರವು:
ಕಾರ್ಯಕ್ರಮವನ್ನು ಉದ್ಘಾಟಿಸಿ, ಚಾಲನೆ ನೀಡಿದ ಹಿರಿಯ ವೈದ್ಯೆ, ಸಂಪ್ಯ ಆನಂದಾಶ್ರಮದ ಮುಖ್ಯಸ್ಥೆ ಡಾ.ಗೌರಿ ಪೈಯವರು ರೂ.೧೫,೦೦೦ದ ಚೆಕ್‌ನ್ನು ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರಿಗೆ ಹಸ್ತಾಂತರಿಸಿದರು. ಅಲ್ಲದೆ ನೂರಾರು ಮಂದಿ ದಾನಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ. ಇನ್ನೂ ಹಲವು ಮಂದಿ ದಾನಿಗಳು ಪ್ರತಿ ತಿಂಗಳು ದೇಣಿಗೆ ನೀಡುವುದಾಗಿ ವಾಗ್ದಾನ ನೀಡಿರುತ್ತಾರೆ. ಲಕ್ಷ್ಮೀ ಟಿಂಬರ್&ಫರ್ನಿಚೇರ್‌ನ ಮ್ಹಾಲಕ ಭೀಮಯ್ಯ ಭಟ್‌ರವರು ವೈದ್ಯಕೀಯ ಶಿಬಿರಕ್ಕೆ ಆವಶ್ಯಕವಾದ ಪೀಠೋಪಕರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

 


ಮೇ.೧ಕ್ಕೆ ಮುಂದಿನ ಶಿಬಿರ:
ಪ್ರತಿ ತಿಂಗಳ ಮೊದಲ ಆದಿತ್ಯವಾರ ಉಚಿತ ವೈದ್ಯಕೀಯ ಶಿಬಿರ ನಡೆಯಲಿದ್ದು, ಮುಂದಿನ ವೈದ್ಯಕೀಯ ಶಿಬಿರವು ಮೇ.೧ರಂದು ನಡೆಯಲಿದೆ. ಶಿಬಿರದಲ್ಲಿ ಬ್ಲಡ್, ಶುಗರ್, ಬಿಪಿ ಸೇರಿದಂತೆ ಸಾಮಾನ್ಯ ಚಿಕಿತ್ಸೆಗಳ ಜೊತೆಗೆ ಇಸಿಜಿಯು ನಡೆಯಲಿದೆ. ಇದಕ್ಕಾಗಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗುವುದು. ದೇವರ ಭಕ್ತಾದಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಪ್ರಕಟಣೆ ತಿಳಿಸಿದೆ.

 


ಉತ್ತಮ ಯೋಜನೆ-ಸಾರ್ವಜನಿಕರಿಂದ ಪ್ರಸಂಶೆ:
ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದ ಬಹಳಷ್ಟು ಮಂದಿ ಬಡವರಿಗೆ ಈ ಶಿಬಿರವು ಅನುಕೂಲವಾಗಿದೆ. ಆಸ್ಪತ್ರೆಯಂತೆ ಇಲ್ಲಿ ಕಾಯಬೇಕಾದ ಆವಶ್ಯಕತೆಯಿಲ್ಲ. ಇಲ್ಲಿ ಬಂದು ಯಾವುದೇ ಅಡ್ಡಿಯಿಲ್ಲದೆ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಳ್ಳಲು ಉತ್ತಮ ಅವಕಾಶವನ್ನು ದೇವಸ್ಥಾನ ಹಾಗೂ ಆರೋಗ್ಯ ರಕ್ಷ ಸಮಿತಿಯವರು ಕಲ್ಪಿಸಿಕೊಟ್ಟಿರುವುದಾಗಿ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡ ಹಲವು ಮಂದಿ ಪ್ರಸಂಶಿಸಿದ್ದಾರೆ.

 


ಆರೋಗ್ಯ ನಿಧಿಗೆ ಚಾಲನೆ:
ಕಾರ್ಯಕ್ರಮದಲ್ಲಿ ನಾಗೇಶ್ ಸಂಪ್ಯ ಹಾಗೂ ಸುರೇಶ್ ಪೂಜಾರಿ ದೇಣಿಗೆಯನ್ನು ಆರೋಗ್ಯ ರಕ್ಷಾ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತರವರಿಗೆ ಹಸ್ತಾಂತರಿಸುವ ಮೂಲಕ ಆರೋಗ್ಯ ನಿಧಿಗೆ ಚಾಲನೆ ನೀಡಿದರು.

ವೈದ್ಯಕೀಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ.ಗೌರಿ ಪೈ ಮಾತನಾಡಿ, ಆರೋಗ್ಯದ ರಕ್ಷಣೆ ಪ್ರತಿಯೊಬ್ಬರಿಗೂ ಆವಶ್ಯಕ. ಈ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ಶಿಬಿರ ನಡೆಸುವುದು ಬಹಳಷ್ಟು ಉತ್ತಮ ಸೇವೆಯಾಗಿದೆ. ಇದನ್ನು ಸ್ಥಗಿತಗೊಳಿಸಬಾರದು. ಇದು ನಿರಂತರವಾಗಿ ನಡೆಯಬೇಕು. ಈ ಸೇವೆಯನ್ನು ಎಲ್ಲರೂ ಪ್ರತಿಜ್ಞೆಯಾಗಿ ಸ್ವೀಕರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಜನ ಸಾಮಾನ್ಯರಿಗೆ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗಳು ದೊರೆಯಬೇಕು. ಕಾಯಿಲೆಗಳನ್ನು ಪತ್ತೆ ಮಾಡಲು ಶಿಬಿರಗಳು ಅನುಕೂಲ. ಇಂತಹ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಸಹಕರಿಸಲಾಗುವುದು. ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಧುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದರು.

ಕ್ಷೇತ್ರದ ತಂತ್ರಿ ಪ್ರೀತಮ್ ಪುತ್ತೂರಾಯ ಮಾತನಾಡಿ, ಕ್ಷೇತ್ರದಲ್ಲಿ ಸಾನಿಧ್ಯ ವೃದ್ಧಿಗೆ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ವೈದ್ಯಕೀಯ ಸೇವೆಗಳನ್ನು ಆಯೋಜಿಸುವ ಮುಖಾಂತರ ಶ್ರದ್ಧಾ ಕೇಂದ್ರಗಳು ಪರಿಪೂರ್ಣತೆಗೆ ಸಾದ್ಯ. ದೇವರ ಪ್ರಸಾದದ ಜೊತೆಗೆ ಆರೋಗ್ಯ ಪ್ರಸಾದ ನೀಡುವ ಮೂಲಕ ತನ್ನ ಸೇವಾ ಅಧ್ಯಕ್ಷರ ಸೇವಾ ಕಾರ್ಯ ಶ್ಲಾಘಿಸಿದರು.

ನೆಹರುನಗರ ಸಂಜೀವಿನಿ ಕ್ಲಿನಿಕ್‌ನ ಡಾ. ರವಿನಾರಾಯಣ ಮಾತನಾಡಿ, ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಖಾಯಿಲೆ ಬಂದಾಗ ಮಾತ್ರ ಚಿಕಿತ್ಸೆ ನಡೆಸುವುದಲ್ಲ. ಆರೋಗ್ಯವಂತರೂ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇದಕ್ಕಾಗಿ ದೇವರ ಭಕ್ತರಿಗಾಗಿ ಉಚಿತ ಶಿಬಿರವನ್ನು ಆಯೋಜಿಸಿಕೊಳ್ಳಲಾಗಿದೆ. ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳ ಜೊತೆಗೆ ದೈಹಿಕ, ಸಾಮಾಜಿಕ ಆರೋಗ್ಯದ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಯೋಜನೆಯು ಇತರ ಎಲ್ಲಾ ಕಡೆಗಳಿಗೆಗೂ ಸ್ಫೂರ್ತಿ ದೊರೆಯುವಂತಾಗಲಿ ಎಂದರು. ಶಿಬಿರವು ಪ್ರತಿ ತಿಂಗಳು ನಡೆಯಲಿರುವುದು. ದೇವರ ಪ್ರಸಾದ ರೂಪದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಮುಂದೆ ಪ್ರತಿವಾರ ನಡೆಸುವ ಯೋಚನೆಯಿಂದೆ ಎಂದರು.

ಹರಿಣಿ ಪುತ್ತೂರಾಯ ಪ್ರಾರ್ಥಿಸಿದರು. ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರೇಮ, ತೇಜಸ್ ಗೌಡ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್, ರವಿ ಗೌಡ ಬೈಲಾಡಿ, ಮಂಜಪ್ಪ ಗೌಡ ಬೈಲಾಡಿ ಕುಂಞಣ್ಣ ಗೌಡ, ಸಂತೋಷ್ ಮುಕ್ರಂಪಾಡಿ, ರಮೇಶ್ ರೈ ಅತಿಥಿಗಳಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ ವಂದಿಸಿದರು. ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಂಪ್ಯ ನವಚೇತನಾ ಯುವಕ ಮಂಡಲದ ಸದಸ್ಯರು, ಮುಕ್ರಂಪಾಡಿ ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here