ಗಂಡಿಬಾಗಿಲು ಮಸೀದಿ ಆಡಳಿತ ಸಮಿತಿ ಸ್ಪಷ್ಟನೆ

0

  • ಮಸೀದಿಯ ಧ್ವನಿವರ್ಧಕದಿಂದ ತೊಂದರೆ ದೂರು ದುರುದ್ದೇಶಪೂರಿತ

ಉಪ್ಪಿನಂಗಡಿ: ಗಂಡಿಬಾಗಿಲು ಮಸೀದಿಯ ಧ್ವನಿವರ್ಧಕದಿಂದ ತೊಂದರೆ ಆಗುತ್ತಿದೆ, ಮಸೀದಿಯಲ್ಲಿ ಡಿ.ಜೆ. ಬಳಕೆ ಮತ್ತು ಗೋಹತ್ಯೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ವ್ಯಕ್ತಿಯೋರ್ವರು ಗ್ರಾಮ ಪಂಚಾಯಿತಿಗೆ ನೀಡಿರುವ ದೂರು ಸಂಪೂರ್ಣ ಸುಳ್ಳು ಆಗಿದ್ದು, ದುರುದ್ದೇಶಪೂರಿತವಾಗಿರುತ್ತದೆ ಎಂದು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ವ್ಯಕ್ತಿ ಗ್ರಾಮ ಪಂಚಾಯಿತಿಗೆ ನೀಡಿರುವ ದೂರಿನಂತೆ ಪತ್ರಿಕೆಯಲ್ಲಿ ವರದಿಯಾಗಿದ್ದು, ಈ ದೂರು ಕಪೋಲಕಲ್ಪಿತವಾಗಿದೆ ಮತ್ತು ಇದು ಸಂಪೂರ್ಣ ಸುಳ್ಳು ಮತ್ತು ಸ್ಥಳೀಯವಾಗಿ ಕೋಮುದ್ವೇಷವನ್ನು ಹರಡುವ ದುರುದ್ದೇಶದಿಂದ ಮಾಡಿರುವ ಆರೋಪ ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಕಳೆದ ೫೨ ವರ್ಷಗಿಂದ ನೆಲೆ ನಿಂತಿದೆ. ಇಸ್ಲಾಂ ಧರ್ಮ ನಿಯಾಮಾನುಸಾರ ಪರಿಸರದಲ್ಲಿ ಶಾಂತಿ-ಸೌಹಾರ್ದತೆಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಕಾರ‍್ಯಾಚರಿಸುತ್ತಿದೆ. ಮಸೀದಿಯಲ್ಲಿ ೫ ಬಾರಿ ನಮಾಜು ಸಲುವಾಗಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಸಹಜ ಪ್ರಕ್ರಿಯೆಯಂತೆ ಬಾಂಗ್ ಮೊಳಗಲಾಗುತ್ತದೆ. ಮತ್ತು ತಿಂಗಳಿಗೊಮ್ಮೆ ನಡೆಯುವ ಹರಕೆ ಸಂದರ್ಭದಲ್ಲಿ ಯಾವತ್ತೂ ಡಿ.ಜೆ.ಯನ್ನು ಬಳಕೆ ಮಾಡದೆ ಕೇವಲ ಮಸೀದಿಯ ಮೈಕ್ ಮೂಲಕ ಕಾರ‍್ಯಕ್ರಮ ನಡೆಸುವುದಾಗಿರುತ್ತದೆ. ಆದರೆ ಮಸೀದಿಯಲ್ಲಿ ಡಿ.ಜೆ. ಬಳಸಲಾಗುತ್ತದೆ ಎನ್ನುವುದು ಸುಳ್ಳು ಆಪಾದನೆ ಆಗಿರುತ್ತದೆ.
ಮಸೀದಿಯಲ್ಲಿ ವಾರ್ಷಿಕ ಹರಕೆ ಕಾರ‍್ಯಕ್ರಮ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ಪೊಲೀಸ್ ಇಲಾಖೆಯ ನಿಯಮ-ಸೂಚನೆ ಪ್ರಕಾರ, ನಿಬಂಧನೆಗೆ ಒಳಪಟ್ಟಂತೆ ಮೈಕ್ ಬಳಸಿಕೊಂಡು ಕಾರ‍್ಯಕ್ರಮ ನಡೆಸುವುದಾಗಿರುತ್ತದೆ. ಅದಾಗ್ಯೂ ಮಸೀದಿಯಲ್ಲಿ ಗೋಹತ್ಯೆ ಮಾಡಿ ಎಲ್ಲರಿಗೂ ಕಾಣುವಂತೆ ಗೋವನ್ನು ನೇತಾಡಿಸಿ ಚರ್ಮ ಸುಳಿದು ಇಡುವುದಾಗಿ ತಿಳಿಸಿರುತ್ತಾರೆ. ಇದು ಸಂಪೂರ್ಣ ಸುಳ್ಳು ಆಪಾದನೆ ಆಗಿರುತ್ತದೆ. ನಮ್ಮ ಮಸೀದಿಯಲ್ಲಿ ಅಂತಹ ಪ್ರಕ್ರಿಯೆ ನಡೆದಿರುವುದಿಲ್ಲ ಮತ್ತು ಅಂತಹವುಗಳಿಗೆ ಅವಕಾಶ ಯಾ ಆಸ್ಪದ ನೀಡುವುದಿಲ್ಲ. ಈ ಆರೋಪವೂ ಸುಳ್ಳು ಆಗಿರುತ್ತದೆ. ಒಟ್ಟಿನಲ್ಲಿ ಈ ದೂರಿನಲ್ಲಿ ಇರುವ ಆರೊಪಗಳು ಸುಳ್ಳಿನಿಂದ ಕೂಡಿದ್ದು, ಪರಿಸರದಲ್ಲಿ ಕೋಮು ದ್ವೇಷವನ್ನು ಹರಡುವ ದುರುದ್ದೇಶದಿಂದ ಮಾಡಿರುವ ಆರೋಪ ಆಗಿರುತ್ತದೆ ಎಂದು ಮಸೀದಿಯ ಆಡಳಿತ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here