ಕಲ್ಕಾರಿನಲ್ಲಿ ನೇಮೋತ್ಸವ, ಸವಣೂರು ಸೀತಾರಾಮ ರೈಯವರಿಗೆ ಹುಟ್ಟೂರ ಸನ್ಮಾನ

0

  • ಸರ್ವ ಕ್ಷೇತ್ರದಲ್ಲೂ ಸೀತಾರಾಮ ರೈ ಸಾಧನೆ- ಒಡಿಯೂರು ಶ್ರೀ

ಪುತ್ತೂರು: ಶೈಕ್ಷಣಿಕ, ಸಹಕಾರಿ, ಧಾರ್ಮಿಕ, ಸಾಮಾಜಿಕ, ಕ್ಷೇತ್ರ ಸೇರಿದಂತೆ ಸರ್ವ ಕ್ಷೇತ್ರದಲ್ಲೂ ಸವಣೂರು ಸೀತಾರಾಮ ರೈಯವರು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ ಅರ್ಹವಾಗಿ ರಾಜ್ಯ ಸರಕಾರದ ಸಹಕಾರಿ ರತ್ನ ಪ್ರಶಸ್ತಿ ದೊರೆತಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಮಂಚಿ ಗ್ರಾಮದ ಕಲ್ಕಾರು ಅಣ್ಣಪ್ಪ ಪಂಜುರ್ಲಿ,ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಕುಟುಂಬ ದೈವ ದೇವರುಗಳ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕ ಕಾರ‍್ಯಕ್ರಮವನ್ನು ಉದ್ಘಾಟಿಸಿ, ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ. ಸೀತಾರಾಮ ರೈಯವರಿಗೆ ಹುಟ್ಟೂರ ಸನ್ಮಾನ ಮಾಡಿ, ಆಶೀರ್ವಚನ ನೀಡಿದರು.

ಸೀತಾರಾಮ ರೈಯವರು ಹಳ್ಳಿ ಪ್ರದೇಶವಾಗಿದ್ದ ಸವಣೂರಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು, ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ್ದರು, ಅಮೂಲಕ ಸವಣೂರು ಎಂಬ ಪುಟ್ಟ ಊರು ಇಂದು ಶಿಕ್ಷಣ ಕ್ಷೇತ್ರದ ಕಾಶಿಯಾಗಿ ಪರಿವರ್ತನೆಗೊಂಡಿದೆ. ಸವಣೂರಿಗೆ ಹೆಸರು ತಂದ ಸೀತಾರಾಮ ರೈಯವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಒಡಿಯೂರು ಶ್ರೀ ಹೇಳಿದರು. ಸನ್ಮಾನ ಸ್ವೀಕರಿಸಿದ ಸವಣೂರು ಕೆ.ಸೀತಾರಾಮ ರೈಯವರು ಹೆತ್ತವರ ಒಳೆಯತನದಿಂದ ಸಮಾಜದಲ್ಲಿ ಮುಂಚೂಣಿಗೆ ಬರಲು ಸಹಕಾರಿ ಆಗಿದೆ. ಹುಟ್ಟೂರಿನ ಸನ್ಮಾನದಿಂದ ಅತೀವ ಆನಂದವಾಗಿದೆ ಎಂದು ಹೇಳಿದರು.

ಸನ್ಮಾನ
ಕೆ.ಸೀತಾರಾಮ ರೈ ಸವಣೂರು- ಕಸ್ತೂರಿಕಲಾ ಎಸ್.ರೈ ದಂಪತಿಗೆ ಹುಟ್ಟೂರ ಸನ್ಮಾನ ಪ್ರಧಾನ ಮಾಡಲಾಯಿತು.

ಸಾಧನೆಗಾಗಿ ಸಹಕಾರಿ ರತ್ನ ಪ್ರಶಸ್ತಿ- ರಾಜೇಶ್ ನಾಕ್
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಕ್‌ಯವರು ಮಾತನಾಡಿ ಸೀತಾರಾಮ ರೈಯವರು ತಮ್ಮ ಹುಟ್ಟೂರನ್ನು ಮರೆಯದೆ, ಕುಟುಂಬಕ್ಕೆ ಸದಾ ಮಾರ್ಗದರ್ಶನ ಮಾಡಿ, ಎಲ್ಲರನ್ನು ಒಗ್ಗೂಡಿಸಿ, ಕುಟುಂಬ ಪ್ರೀತಿಯನ್ನು ಬೆಳೆಸಿದ್ದಾರೆ. ಸಹಕಾರಿ ಕ್ಷೇತ್ರದ ತಮ್ಮ ಸಾಧನೆಗಾಗಿ ಸಹಕಾರಿ ರತ್ನ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ರೈಯವರ ಸಾಧನೆ ಯುವಕರಿಗೆ ಸ್ಪೂರ್ತಿ ಎಂದು ಹೇಳಿದರು.

ಉತ್ತಮ ಸಾಧನೆ- ರಮಾನಾಥ ರೈ
ಮಾಜಿ ಸಚಿವ ಬಿ.ರಮಾನಾಥ ರೈಯವರು ಮಾತನಾಡಿ ಸೀತಾರಾಮ ರೈಯವರು ಒಳ್ಳೆಯ ಮನಸಿನ ವ್ಯಕ್ತಿ,ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ, ಉಳಿದಂತೆ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಆಯುಕ್ತ ಟಿ. ಶ್ಯಾಮ್ ಭಟ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ(ರಂಗೋಲಿ) ಮಂಚಿ ಗ್ರಾ.ಪಂ, ಮಾಜಿ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಪುದ್ದೊಟ್ಟು, ಕಲ್ಕಾರು ಸೀತಾರಾಮ ಅಡ್ಯಂತಾಯ ಬೋಳಂತೂರುಗುತ್ತು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿಯವರು ಅಭಿನಂದನಾ ಭಾಷಣಗೈದರು. ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾಕೃಷ್ಣ ಅಡ್ಯಂತಾಯ ಸನ್ಮಾನ ಪತ್ರ ವಾಚಿಸಿದರು. ರಾಜೇಶ್ ಶೆಟ್ಟಿ ಎಡ್ನೂರುಪದವು ವಂದಿಸಿದರು. ಪುಷ್ವರಾಜ್ ಕುಕ್ಕಾಜೆ ಕಾರ‍್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ‍್ಯಕ್ರಮ
ಬಡಾಜೆ ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಸಾನಿಧ್ಯ ಶುದ್ಧಕಲಶ, ಗಣಹೋಮ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟ್ರಮಣ ದೇವರ ಮುಡಿಪು ಕಟ್ಟುವಕಾರ್ಯ, ಅನ್ನಸಂತರ್ಪಣೆ, ದುರ್ಗಾನಮಸ್ಕಾರ ಪೂಜಡ, ದೈವಗಳಿಗೆ ನೇಮೋತ್ಸವ, ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here