ಏಕಲವ್ಯ ಪ್ರಶಸ್ತಿ ಪುರಸ್ಕೃತ ಆಟಗಾರ ಉದಯ ಚೌಟರವರಿಗೆ ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಶ್ರದ್ಧಾಂಜಲಿ

0

  • ಉದಯ ಚೌಟರವರೋರ್ವ ಅಪ್ರತಿಮ ಆಟಗಾರ-ಚಂದ್ರಹಾಸ ಶೆಟ್ಟಿ

ಪುತ್ತೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ, ದ.ಕ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಂಘಟನಾ ಉಪಾಧ್ಯಕ್ಷ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆ ಉದಯ ಚೌಟರವರಿಗೆ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಮೇ 28 ರಂದು ದರ್ಬೆ ಬಳಿ ನಡೆಯಿತು.

ಉದಯ ಚೌಟರವರೋರ್ವ ಅಪ್ರತಿಮ ಆಟಗಾರ-ಚಂದ್ರಹಾಸ ಶೆಟ್ಟಿ:
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ಎಲ್ಲರೊಂದಿಗೆ ಬಹಳ ಆತ್ಮೀಯರಾಗಿದ್ದು, ಪ್ರೀತಿಯನ್ನು ಹೊಂದಿದ ವ್ಯಕ್ತಿತ್ವ ಉದಯ ಚೌಟರವರದ್ದು. ಕಬಡ್ಡಿ ಕ್ಷೇತ್ರದಲ್ಲಿ ಓರ್ವ ಅಪ್ರತಿಮ ಆಟಗಾರನಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೂ ಪುರಸ್ಕೃತರಾಗಿದ್ದರು. ಉದಯ ಚೌಟರವರು ಬ್ಯಾಂಕ್ ಆಫ್ ಬರೋಡದಲ್ಲಿ ಮತ್ತು ತಾನು ವಿಜಯ ಬ್ಯಾಂಕ್‌ನಲ್ಲಿ, ನಾವಿಬ್ಬರೂ ಲೋನ್ ರಿಕವರಿ ಟೀಮ್‌ನಲ್ಲಿ ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದೇವು. ಉದಯ ಚೌಟರವರು ನಿಧನರಾದ ಸುದ್ದಿಯನ್ನು ಕಬಡ್ಡಿ ಕೋಚ್ ಹಬೀಬ್‌ರವರು ಮುಂಜಾನೆ ತನಗೆ ತಿಳಿಸಿದಾಗ ನನಗೆ ಬಹಳ ಆಘಾತವಾಯಿತು. ಕಬಡ್ಡಿಯಲ್ಲಿ ಉತ್ತಮ ಸಾಧನೆಗೈದ ಉದಯ ಚೌಟರವರು ಸಣ್ಣ ಪ್ರಾಯದಲ್ಲಿಯೇ ನಮ್ಮನ್ನು ಅಗಲಿರುವುದು ನಮಗೆ ಮಾತ್ರವಲ್ಲ, ಉದಯರವರ ಸ್ನೇಹಿತ ವಲಯವನ್ನು ಘಾಸಿಗೊಳಿಸಿದೆ. ಹುಟ್ಟಿದ ಮೇಲೆ ಸಾವು ನಿಶ್ಚಿತವಾದರೂ ಉದಯ ಚೌಟರವರ ಅಕಾಲಿಕ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ಮಹಾಲಿಂಗೇಶ್ವರ ದೇವರು ಅವರ ಕುಟುಂಬಕ್ಕೆ ಅನುಗ್ರಹಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಉದಯ ಚೌಟರವರೋರ್ವ ಪ್ರತಿಭಾನ್ವಿತ, ಉತ್ತಮ ಸಂಘಟಕರಾಗಿದ್ದರು-ದಯಾನಂದ ರೈ:
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡರವರು ಸ್ವಾಗತಿಸಿ ಮಾತನಾಡಿ, ಖ್ಯಾತ ಕಬಡ್ಡಿ ಆಟಗಾರ ಉದಯ ಚೌಟರವರು ಪ್ರತಿಷ್ಠಿತ ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ ಆಟಗಾರರಾಗಿದ್ದಾರೆ. ಅತ್ಲೆಟಿಕ್ಸ್‌ನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಟಗಾರನಾಗಿ ಬೆಳೆದ ಉದಯ ಚೌಟರವರನ್ನು ಕಬಡ್ಡಿಗೆ ಕರೆ ತಂದವರು ಕೋಚ್ ಹಬೀಬ್‌ರವರು. ಫಿಲೋಮಿನಾ ಕಾಲೇಜಿನಲ್ಲಿನ ವಿದ್ಯಾಭ್ಯಾಸ ಸಂದರ್ಭದ ಉದಯರವರು ಕಬಡ್ಡಿಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಕಬಡ್ಡಿ ಕ್ರೀಡೆಯ ಜೊತೆಗೆ ಓರ್ವ ಅತ್ತ್ಯುತ್ತಮ ಮಾತುಗಾರನಾಗಿಯೂ ಬೆಳೆದಿದ್ದು, ಅವರ ಮಾತಿಗೆ ಎಂದಿಗೂ ಬೆಲೆ ಇರುತ್ತಿತ್ತು. ಅಂತಹ ಪ್ರತಿಭಾನ್ವಿತ, ಉತ್ತಮ ಸಂಘಟಕರಾಗಿರುವ ಉದಯ ಚೌಟರವರ ಅಗಲಿಕೆ ನಮಗೆ ದುಃಖವನ್ನುಂಟು ಮಾಡಿದೆ. ನಮ್ಮ ಸ್ನೇಹಿತರಾದ ಉದಯ ಚೌಟರವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.

ವಿಧಿ ಉದಯ ಚೌಟರವರ ಬಾಳಿನಲ್ಲಿ ಕ್ರೂರವಾಗಿ ನಡೆದುಕೊಂಡಿತು-ಎಲ್ಯಾಸ್ ಪಿಂಟೋ:
ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರು ಮಾತನಾಡಿ, ೧೯೯ರಲ್ಲಿ ತಾನು ಫಿಲೋಮಿನಾ ಕಾಲೇಜಿಗೆ ದೈಹಿಕ ಶಿಕ್ಷಣ ನಿರ್ದೇಶಕನಾಗಿ ಬಂದ ಮೇಲೆ ಎರಡು ವರ್ಷ ತನ್ನ ವಿದ್ಯಾರ್ಥಿಯಾಗಿದ್ದು, ನನಗಿಂತ ಮೊದಲು ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಎವರೆಸ್ಟ್ ರೊಡ್ರಿಗಸ್‌ರವರ ಗರಡಿಯಲ್ಲಿ ಎರಡು ವರ್ಷ ಉದಯ ಚೌಟರವರು ಆಡಿರುತ್ತಾರೆ. ಮಂಗಳೂರು ವಿವಿಯಲ್ಲಿ ನಿರಂತರ ನಾಲ್ಕು ವರ್ಷ ಕಬಡ್ಡಿಯಲ್ಲಿ ಚಾಂಪಿಯನ್ ಆಗಲು ಉದಯ ಚೌಟರವರ ಆಟ ಕಾರಣವಾಗಿತ್ತು. ಕಬಡ್ಡಿಯಲ್ಲಿ ಅವರಿಗೆ ಎಷ್ಟು ಪ್ರೀತಿ ಎಂದರೆ ಸ್ವತಹ ಪಿಕ್ಕಾಸು ಹಾಗೂ ಹಾರೆಯನ್ನು ತೆಗೆದುಕೊಂಡು ಅವರೇ ಕಬಡ್ಡಿ ಅಂಕಣವನ್ನು ಸಿದ್ಧಗೊಳಿಸುತ್ತಿದ್ದರು ಮಾತ್ರವಲ್ಲದೆ ಸದೃಢ ತಂಡವನ್ನು ಕೂಡ ಕಟ್ಟಿಕೊಳ್ಳುತ್ತಿದ್ದರು. ಆದರೆ ವಿಧಿ ಉದಯ ಚೌಟರವರ ಬಾಳಿನಲ್ಲಿ ಕ್ರೂರವಾಗಿ ನಡೆದುಕೊಂಡಿದ್ದು, ಇಂದು ನಾವು ಅವರನ್ನು ಕಳೆದುಕೊಂಡಿದ್ದೇವೆ. ಮಾತ್ರವಲ್ಲ ಉದಯ ಚೌಟರವರ ಕುಟುಂಬದಲ್ಲಿನ ಉದಯ ಚೌಟರವರ ಶೂನ್ಯ ಜಾಗವನ್ನು ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಅಶೋಕ್ ನೆಕ್ರಾಜೆ, ಕೋಶಾಧಿಕಾರಿ ರಝಾಕ್, ಸದಸ್ಯರಾದ ಉದ್ಯಮಿ ಶಿವರಾಂ ಆಳ್ವ, ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ, ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ಕೋಚ್ ಹಬೀಬ್ ಮಾಣಿ, ಬಿಪಿನ್ ಶೆಟ್ಟಿ, ರಫೀಕ್ ಎಂ.ಕೆ, ಬಾಲಕೃಷ್ಣ ರೈ ಪೊರ್ದಾಲ್‌ರವರು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ…
ಈ ಸಂದರ್ಭದಲ್ಲಿ ಅಗಲಿದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟರವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಉಪಸ್ಥಿತರಿದ್ದ ಸದಸ್ಯರು ಅಗಲಿದ ಉದಯ ಚೌಟರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here