ಕೆಮ್ಮಾರ: ರಸ್ತೆಗೆ ಬಾಗಿಕೊಂಡಿರುವ ಗಿಡಗಂಟಿ ಅಪಾಯಕ್ಕೆ ಆಹ್ವಾನ; ಹೆದ್ದಾರಿಯಲ್ಲಿಯೇ ಹೋಗಬೇಕಾದ ಪರಿಸ್ಥಿತಿ

0

ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಬದಿ ಕೆಮ್ಮಾರದಿಂದ ಕೊಯಿಲದ ತನಕ ಗಿಡಗಂಟಿಗಳು ಬೆಳೆದು ರಸ್ತೆಗೆ ಬಾಗಿಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕೆಲವು ಕಡೆಗಳಲ್ಲಿ ಗಿಡಗಂಟಿ ಚರಂಡಿ ಅಕ್ರಮಿಸಿಕೊಂಡು ಹೆದ್ದಾರಿ ಬದಿ ತನಕವೂ ಬೆಳೆದು ನಿಂತಿವೆ. ಡಾಮರು ರಸ್ತೆಯ ಅಂಚಿನ ತನಕವೂ ಹುಲ್ಲು ಬೆಳೆದಿವೆ. ಇದರಿಂದಾಗಿ ಶಾಲಾ ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.


ಕೆಮ್ಮಾರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆಗೆ ಬರುವ ಮಕ್ಕಳು ಹೆದ್ದಾರಿಯಲ್ಲಿಯೇ ನಡೆದುಕೊಂಡು ಹೋಗುತ್ತಾರೆ. ಮೇ 30ರಂದು ಬೆಳಿಗ್ಗೆ ಇಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬಾಲಕಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆದ್ದಾರಿಯ ಬದಿ ಹುಲ್ಲು ಬೆಳೆದಿರುವುದರಿಂದ ಶಾಲಾ ಮಕ್ಕಳು ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ. ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿದೆ. ಇಲ್ಲಿ ಇನ್ನಷ್ಟೂ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಹೆದ್ದಾರಿಗೆ ಬಾಗಿಕೊಂಡಿರುವ ಗಿಡಗಂಟಿ, ರಸ್ತೆಯ ಅಂಚಿನ ತನಕವೂ ಬೆಳೆದಿರುವ ಹುಲ್ಲುಗಳನ್ನು ತೆರವುಗೊಳಿಸಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹೆದ್ದಾರಿ ಬದಿ ಸರಾಗವಾಗಿ ನಡೆದುಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಎಚ್ಚರಿಕೆ ಫಲಕವಿಲ್ಲ:

ಕೆಮ್ಮಾರದಲ್ಲಿ ಸರಕಾರಿ ಶಾಲೆ ಇದ್ದು ಇಲ್ಲಿ ಯಾವುದೇ ಎಚ್ಚರಿಕೆ ಫಲಕವಿಲ್ಲ ಎಂಬ ಆರೋಪವು ಸಾರ್ವಜನಿಕರಿಂದ ಕೇಳಿಬಂದಿದೆ. ಶಾಲಾ ವಠಾರ, ನಿಧಾನವಾಗಿ ಚಲಿಸುವಂತೆ ವಾಹನ ಸವಾರರನ್ನು ಎಚ್ಚರಿಸುವ ಫಲಕ ಅಳವಡಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ. ಈ ಪರಿಸರದಲ್ಲಿ ಇನ್ನಷ್ಟೂ ಅಪಾಯ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಾರದಿಂದ ಕೊಯಿಲದ ತನಕ ಹೆದ್ದಾರಿ ಬದಿ ಹುಲ್ಲು, ಗಿಡಗಂಟಿ ಬೆಳೆದಿವೆ. ಇದರಿಂದಾಗಿ ಶಾಲಾ ಮಕ್ಕಳು, ಸಾರ್ವಜನಿಕರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ಬಗ್ಗೆ ಮೌಖಿಕವಾಗಿ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಲಾಗಿದೆ. ಮೇ ೩೦ರಂದು ಇಲ್ಲಿ ಶಾಲಾ ಬಾಲಕಿಗೆ ಸ್ಕಾರ್ಪಿಯೋ ಡಿಕ್ಕಿಯಾಗಿದೆ. ಇನ್ನಷ್ಟೂ ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲೆಯ ಬಳಿ ಎಚ್ಚರಿಕೆ ಫಲಕ ಅಳವಡಿಸಬೇಕು.-ಅಝೀಝ್ ಬಿ.ಕೆ.
ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ

 

LEAVE A REPLY

Please enter your comment!
Please enter your name here