ಪೆರಾಬೆ ಗ್ರಾ.ಪಂ. ಅಧ್ಯಕ್ಷರ ಸಹಿತ ಮೂವರ ಮೇಲೆ ಏಳು ಮಂದಿಯ ತಂಡದಿಂದ ಕತ್ತಿಯಿಂದ ಹಲ್ಲೆ

0

ಹಲ್ಲೆಗೊಳಗಾದ ಮೂವರು ಆಸ್ಪತ್ರೆಗೆ ದಾಖಲು-ಪ್ರಕರಣ ದಾಖಲು

ಕಡಬ: ಪೆರಾಬೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಮೂವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸುಮಾರು ಏಳು ಮಂದಿಯ ತಂಡ ಕಾರಿನಿಂದ ಹೊರಕ್ಕೆಳೆದು ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಜೂ.24ರ ರಾತ್ರಿ ಕುಂತೂರು ಶಾಲಾ ಬಳಿ ನಡೆದಿದೆ. ಹಲ್ಲೆಗೊಳಗಾದವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಮೋಹನ್ ದಾಸ್ ರೈವರು ಘಟನೆಯ ಬಗ್ಗೆ ಪೋಲಿಸರಿಗೆ ದೂರು ನೀಡಿ, ನಾನು ಜೂ.24ರಂದು ಕುಂತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ಹೋಗಿ ಬಳಿಕ ನನ್ನ ಕಾರಿನಲ್ಲಿ ಕೃಷಿ ಜಮೀನಿಗೆ ಹಳೇನೆರಂಕಿ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮಾಡಿ ನನ್ನ ಕೃಷಿ ಜಮೀನಿನಲ್ಲಿ ಕೆಲಸ ಮಾಡುವ ಅಲಂಕಾರು ನಿವಾಸಿ ರಾಘವ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ವಾಪಾಸ್ಸು ಮನೆ ಕಡೆಗೆ ಬರುತ್ತಿರುವಾಗ ಅಲಂಕಾರು ಪೇಟೆಯಲ್ಲಿದ್ದ ಪರಿಚಯದ ಶಿವರಾಮ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ರಾತ್ರಿ 08.45 ಗಂಟೆಗೆ ಅಲಂಕಾರಿನಿಂದ ಪೆರಾಬೆ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಕುಂತೂರು ಹಿರಿಯ ಪ್ರಾಥಮಿಕ ಶಾಲೆ ಬಳಿಗೆ ತಲುಪುತಿದ್ದಂತೆ ಅದೇ ರಸ್ತೆಯಲ್ಲಿ ಜನರ ಗುಂಪು ಸೇರಿಕೊಂಡು ಯಾವುದೋ ವಿಚಾರ ಮಾತನಾಡುತ್ತಿದ್ದು ನಂತರ ಆ ಗುಂಪಿನಲ್ಲಿದ್ದ ನನ್ನ ಪರಿಚಯದ ಇಬ್ರಾಹಿಂ ಎಂಬವರು ಕಾರಿನ ಬಳಿ ಬಂದು ನನ್ನ ಅಳಿಯ ಯಾವುದೋ ವಾಟ್ಸಾಪ್ ವಿಚಾರವಾಗಿ ಸಮಸ್ಯೆ ಮಾಡಿಕೊಂಡಿದ್ದು ಬಗೆಹರಿಸುವಂತೆ ಕೇಳಿಕೊಳ್ಳುತ್ತಿರುವ ಸಮಯ ಜನರ ಗುಂಪಿನಲ್ಲಿದ್ದ ರಾಜೀಕ್, ಜುಬೈರ್, ಜುನೈದ್, ಮೊಯಿದು ಕುಂಞ ,ಸಂಶು, ಅಮನ್, ಸಾಹುಲ್ ಹಮೀದ್ ಹಾಗೂ ಇತರರು ನನ್ನ ಕಾರಿನ ಹತ್ತಿರ ಬಂದು ನನ್ನನ್ನು ಕಾರಿನಿಂದ ಎಳೆದು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಿದ್ದು ಬಳಿಕ ಆರೋಪಿತ ರಾಜೀಕ್ ಎಂಬಾತನು ಕೈಯಲ್ಲಿದ್ದ ಕತ್ತಿಯನ್ನು ನನ್ನ ಮೇಲೆ ಬೀಸಿದ್ದು ಈ ವೇಳೆ ಕತ್ತಿ ನನ್ನ ಜತೆ ಇದ್ದ ಶಿವರಾಮ ಎಂಬವರ ಬೆನ್ನಿನ ಬಲಬದಿಗೆ ತಾಗಿ ಗಾಯವಾಗಿದೆ. ಕೂಡಲೇ ಹಲ್ಲೆಯಿಂದ ಗಾಯಗೊಂಡ ಶಿವರಾಮರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ ವೇಳೆ ಪುನ: ಆರೋಪಿತರು ನನ್ನ ಕಾರನ್ನು ತಡೆದು ನಿಲ್ಲಿಸಿ ನೀನು ನಮ್ಮವರ ವಿಚಾರಕ್ಕೆ ಬಂದರೆ ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಐ.ಪಿ.ಸಿ 341.323.324.504.506 ಆರ್.ಡಬ್ಲ್ಯೂ 149 ಅನ್ವಯ ಪ್ರಕರಣ ದಾಖಲಾಗಿದೆ.

ಹಲವರು ಪೋಲಿಸರ ವಶಕ್ಕೆ?

ಈ ಘಟನೆಗೆ ಸಂಬಂಧಿಸಿ ಕಡಬ ಪೋಲಿಸರು ರಾತ್ರಿಯೇ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ತಡರಾತ್ರಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಕಡಬಕ್ಕೆ ಆಗಮಿಸಿದ್ದಾರೆ. ಕಡಬ ಎಸ್.ಐ. ಆಂಜನೇಯ ರೆಡ್ಡಿ, ತನಿಖಾ ಎಸ್.ಐ. ಶ್ರೀಕಾಂತ್ ರಾಥೋಡ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪೆರಾಬೆ ಹಾಗೂ ಕಡಬದಲ್ಲಿ ಸಾರ್ವಜನಿಕರ ಜಮಾವಣೆ!

ಘಟನೆ ನಡೆದ ಕುಂತೂರಿನಲ್ಲಿ ಹಾಗೂ ಕಡಬ ಆಸ್ಪತ್ರೆಯ ಆವರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಮಾವಣೆಗೊಂಡು ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು ಪೋಲಿಸರು ಕಾರ್ಯಾಚರಣೆಗಿಳಿದಿರುವುದರಿಂದ ಶಾಂತಾ ವಾತಾವರಣ ನಿರ್ಮಾಣವಾಗಿತ್ತು.

LEAVE A REPLY

Please enter your comment!
Please enter your name here