ಮೊಟ್ಟೆತ್ತಡ್ಕದಲ್ಲಿ ತಡೆಗೋಡೆ ಕುಸಿದು ನಾಲ್ಕು ಮನೆ ಅಪಾಯದಲ್ಲಿ-ಮನೆ,‌ ನೀರಿನ‌ ಟ್ಯಾಂಕ್ ಗಳಿಗೆ ಹಾನಿ

0

ಪುತ್ತೂರು; ಕಳೆದ ಎರಡು‌ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೂ.30ರಂದು ಬೆಳಿಗ್ಗೆ ನಗರ ಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕದಲ್ಲಿ ತಡೆಗೋಡು ಜರಿದು ಬಿದ್ದು ಮನೆ, ನೀರಿನ‌ ಟ್ಯಾಂಕ್ ಗಳಿಗೆ ಹಾನಿಯಾಗಿರುವುದಲ್ಲದೆ, ನಾಲ್ಕು ಮನೆಗಳು ಅಪಾಯದಲ್ಲಿದೆ.


ಮೊಟ್ಟೆತ್ತಡ್ಕದ ಸುರೇಶ್ ಪೂಜಾರಿ ಹಾಗೂ ಆನಂದ ಕುಲಾಲ್ ಎಂಬವರ ಮನೆ ಹಿಂಭಾಗದ ತಡೆಗೋಡೆ ಕುಸಿತದಿಂದಾಗಿ ಸುರೇಶ್ ಪೂಜಾರಿಯವರ ಮನೆ ಹಿಂಭಾಗದ ಮಾಡಿನ ಶೀಟ್, ಹಂಚುಗಳು ಪುಡಿ ಪುಡಿಯಾಗಿದೆ. ಮಳೆ ನೀರು ಮನೆಯೊಳಗಡೆ ತುಂಬಿಕೊಂಡಿತ್ತು. ಆನಂದ ಕುಲಾಲ್ ರವರ ಮನೆಯ ಎರಡು ನೀರಿನ ಟ್ಯಾಂಕ್, ಅದರ ಸ್ಟ್ಯಾಂಡ್ ಗೆ ಹಾನಿಯಾಗಿದೆ.


ನಾಲ್ಕು ಮನೆಗಳು ಅಪಾಯದಲ್ಲಿ;
ತಡೆಗೋಡೆ ಕುಸಿತದಿಂದಾಗಿ ಸುರೇಶ್ ಪೂಜಾರಿ, ಆನಂದ ಕುಲಾಲ್ ರವರ ಮನೆ ಮೇಲ್ಭಾಗದಲ್ಲಿರುವ ರಾಘವೇಂದ್ರ ಹಾಗೂ ನಾರಾಯಣ ಪೂಜಾರಿಯವರ ಮನೆ ಗೋಡೆಯ ಅಂಚಿನ‌ ತನಕ‌ ಜರಿದು ಬಿದ್ದಿದೆ. ಮಳೆಯ ಎಡೆ ಬಿಡದೆ ಸುರಿಯುತ್ತಿದ್ದು ಅಲ್ಲಿ ಇನ್ನಷ್ಟು ಕುಸಿಯುವ ಭೀತಿಯಲ್ಲಿದೆ. ತಡೆಗೋಡೆ ಇನ್ನಷ್ಟು ಕುಸಿದರೆ ಅಲ್ಲಿ ನಾಲ್ಕು ಮನೆಗಳಿಗೆ ಅಪಾಯದಲ್ಲಿದ್ದು ಮನೆ ಮಂದಿ ಆತಂಕದಲ್ಲಿದ್ದಾರೆ.


ಮೇಲಿನ‌ ನೀರು ಬರುತ್ತಿರುವುದರಿಂದ ಕುಸಿತ;
ತಡೆಗೋಡೆ ಕುಸಿತಗೊಂಡಿರುವ ಪ್ರದೇಶ ಸ್ವಲ್ಪ ಇಳಿಜಾರು ಪ್ರದೇಶವಾಗಿದೆ. ಅಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಮೇಲ್ಬಾಗದಲ್ಲಿರುವ ಮನೆಗಳ ಮಳೆ ನೀರು ನೇರವಾಗಿ ಕುಸಿತಗೊಂಡಿರುವ ಜಾಗದಲ್ಲಿ ಹರಿಯುತ್ತಿರುವುದರಿಂದ ತಡೆಗೋಡೆ ಕುಸಿತಗೊಂಡಿದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಚರಂಡಿ‌ ವ್ಯವಸ್ಥೆಯಿಲ್ಲದೆ ನೀರು ಮನೆ ಪಕ್ಕದಲ್ಲಿ ಹರಿಯುತ್ತಿರುವ ಬಗ್ಗೆ ನಗರ ಸಭೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಭಾಗದ ನಗರ ಸಭಾ ಸದಸ್ಯರು ಚುನಾವಣೆ ಬಳಿಕ ಇಂದೇ ಈ ಭಾಗಕ್ಕೆ ಭೇಟಿ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಮತ್ತೆ ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಟರ್ಪಾಲುಗಳನ್ನು ಮುಚ್ಚಿ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಘಟನೆಯ ಬಳಿಕ ನಗರ ಸಭಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here