ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೀರಿನ ಸ್ಥಾವರಗಳ ಜವಾಬ್ದಾರಿ ಪ್ರತೀ ಸದಸ್ಯರಿಗೆ ಹಂಚಿಕೆ

ಕೌಡಿಚ್ಚಾರು ಕೆರೆಯ ಆಸುಪಾಸಿನಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ-ನಿರ್ಣಯ

ಚಿತ್ರ:ಯೂಸುಫ್ ರೆಂಜಲಾಡಿ

ಪುತ್ತೂರು: ಗ್ರಾ.ಪಂ ವ್ಯಾಪ್ತಿಯ ನೀರಿನ ಪಂಪು ದುರಸ್ತಿ, ಪೈಪ್ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಸ್ಥಾವರಗಳ ಜವಾಬ್ದಾರಿಯನ್ನು ಪ್ರತೀ ಸದಸ್ಯರಿಗೆ ಹಂಚಿಕೆ ಮಾಡಿ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆ ಗ್ರಾ.ಪಂ ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಸದಸ್ಯ ಮೋನಪ್ಪ ಪೂಜಾರಿ ಮಾತನಾಡಿ ನೀರು ಬರದೇ ಇದ್ದರೆ ನಮ್ಮನ್ನು ಕೇಳುವವರಿದ್ದಾರೆ, ಆದರೆ ಗ್ರಾ.ಪಂ.ನ ಪಂಪು ರಿಪೇರಿ ಮಾಡುವಾಗ ಸ್ಥಳೀಯ ಸದಸ್ಯರಿಗೆ ಯಾಕೆ ತಿಳಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಸದಸ್ಯ ಲೋಕೇಶ್ ಚಾಕೋಟೆ ಧ್ವನಿಗೂಡಿಸಿದರು. ಪಂಪು ರಿಪೇರಿಗೆ ದೊಡ್ಡ ಮೊತ್ತ ಕೊಟ್ಟಿದರೂ ಮಾಹಿತಿಯೇ ನೀಡಿಲ್ಲ ಎಂದು ಸದಸ್ಯರಾದ ಶಂಕರ ಮಾಡನ್ನೂರು ಹಾಗೂ ಮೋನಪ್ಪ ಪೂಜಾರಿ ಆರೋಪಿಸಿದರು. ಸದಸ್ಯರಾದ ಸಲ್ಮಾ ಅಮ್ಚಿನಡ್ಕ ಹಾಗೂ ಜಯಂತಿ ಪಿ ಧ್ವನಿಗೂಡಿಸಿದರು.

ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ಒಂದೊಂದು ನೀರಿನ ಸ್ಥಾವರಗಳ ಜವಾಬ್ದಾರಿಯನ್ನು ಒಬ್ಬೊಬ್ಬ ಸದಸ್ಯರಿಗೆ ವಹಿಸಿಕೊಡುವ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾದರೂ ಸದಸ್ಯೆ ಸಲ್ಮಾ ಅವರು ಆಕ್ಷೇಪ ಸೂಚಿಸಿದರು. ನಮ್ಮ ವ್ಯಾಪ್ತಿಯಲ್ಲಿ ಜವಾಬ್ದಾರಿ ಬೇಡ, ವಾಟರ್‌ಮೆನ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಹಾಗಾಗಿ ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಸಲ್ಮಾ ಹೇಳಿದರು.

ಸದಸ್ಯ ಹರೀಶ್ ರೈ ಜಾರತ್ತಾರು ಮಾತನಾಡಿ ಸದಸ್ಯರಿಗೆ ನೀರಿನ ಸ್ಥಾವರ ಜವಾಬ್ದಾರಿ ಹಂಚಿಕೆ ಮಾಡಿಕೊಡುವುದು ಒಳ್ಳೆಯ ವಿಚಾರ. ನಮ್ಮ ವ್ಯಾಪ್ತಿಯಲ್ಲಿ ನಾಲ್ಕು ಸ್ಥಾವರಗಳಿದ್ದು ನೀರಿನ ವಿಚಾರವಾಗಿ ಎಲ್ಲ ಕಡೆಯಿಂದಲೂ ಜನರ ಕಾಲ್ ಬರುತ್ತಿರುತ್ತದೆ, ಹಾಗಾಗಿ ಜವಾಬ್ದಾರಿ ಹಂಚಿಕೆ ಮಾಡುವುದು ಸೂಕ್ತ ಎಂದು ಹೇಳಿದರು.

ಜವಾಬ್ದಾರಿ ಹಂಚಿಕೆ ಮಾಡುವ ಮಾಡುವ ಬಗ್ಗೆ ಸದಸ್ಯರೊಳಗೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯರವರ ನೇತೃತ್ವದಲ್ಲಿ ಸ್ಥಾವರಗಳ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಇನ್ನು ಮುಂದಕ್ಕೆ ನೀರಿನ ಪಂಪು ಮತ್ತಿತರ ವಿಚಾರಗಳಲ್ಲಿ ಸಮಸ್ಯೆ ಉಂಟಾದರೆ ವಾಟರ್‌ಮೆನ್‌ಗಳು ಜವಾಬ್ದಾರಿ ಹೊತ್ತ ಸದಸ್ಯರಿಗೆ ತಿಳಿಸಬೇಕು. ಸದಸ್ಯರು ಗ್ರಾ.ಪಂಗೆ ತಿಳಿಸಬೇಕು. ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಪಂಪ್ ದುರಸ್ತಿ ಮಾತ್ರವಲ್ಲ ಪೈಪ್ ಒಡೆದು ಹೋದ್ರೂ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು ಸದಸ್ಯರು ಇದನ್ನು ಕ್ರಮ ಬದ್ಧವಾಗಿ ಪಾಲಿಸಬೇಕೆಂದು ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ ಹೇಳಿದರು. ಪಿಡಿಓ ಪದ್ಮಕುಮಾರಿ ಮಾತನಾಡಿ ನೀರಿನ ಸ್ಥಾವರಗಳ ಜವಾಬ್ದಾರಿಯನ್ನು ಸದಸ್ಯರಿಗೆ ಹಂಚಿಕೆ ಮಾಡಿರುವುದು ನನಗೆ ಬಹಳ ಇಷ್ಟವಾಯಿತು. ನಿಮಗೆ ನನ್ನ ಧನ್ಯವಾದ ಎಂದು ಹೇಳಿದರು.

ಕುಂಬ್ರಕ್ಕೆ 108 ಆಂಬ್ಯುಲೆನ್ಸ್-ವರ್ತಕರ ಸಂಘ ಮನವಿ

ಕುಂಬ್ರಕ್ಕೆ 108 ಆಂಬ್ಯುಲೆನ್ಸ್ ಬೇಕು ಎನ್ನುವ ಕುಂಬ್ರ ವರ್ತಕರ ಸಂಘದಿಂದ ನೀಡಲಾಗಿದ್ದ ಮನವಿ ಪತ್ರವನ್ನು ವಾಚಿಸಲಾಯಿತು. ಇದು ಒಳ್ಳೆಯ ವಿಚಾರ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಈ ಬಗ್ಗೆ ಸಂಬಂಧಪಟ್ಟವರಿಗೆ ಬರೆದುಕೊಳ್ಳುವುದೆಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು.

ಕೌಡಿಚ್ಚಾರು ಕೆರೆಯ ಆಸುಪಾಸಿನಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ:

ಗ್ರಾ.ಪಂ ವ್ಯಾಪ್ತಿಯ ಕೌಡಿಚ್ಚಾರು ಪಳ್ಳ ಮದಕ ಸರಕಾರಿ ಕೆರೆಯ ಆಸುಪಾಸಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದಕ್ಕೆ, ಅಂಗಡಿ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯ ಹರೀಶ್ ರೈ ಜಾರತ್ತಾರು ಆಗ್ರಹಿಸಿದರು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಗ್ರಾ.ಪಂಗೆ ತಿಳಿಸದೇ ವ್ಯಾಪಾರ ಮಾಡುವಾಗ ಏನು ಮಾಡಲು ಸಾಧ್ಯ ಎಂದು ಕೇಳಿದರು. ಸ್ಥಳೀಯವಾಗಿ ವ್ಯಾಪಾರ, ಅಂಗಡಿಗಳಿಗೆ ಅವಕಾಶ ನೀಡಿದರೆ ಅಪಘಾತಗಳೂ ಆಗುವ ಸಂಭವವಿರವುದರಿಂದ ಅವಕಾಶ ನೀಡಬಾರದು ಎಂದು ಅನೇಕ ಸದಸ್ಯರು ಅಭಿಪ್ರಾಯಪಟ್ಟರು. ನಂತರ ಎಲ್ಲರ ಅಭಿಪ್ರಾಯದಂತೆ ಕೆರೆಯ ಆಸುಪಾಸು ರಸ್ತೆ ಬದಿಯಲ್ಲಿ ಯಾವುದೇ ವ್ಯಾಪಾರ, ಅಂಗಡಿಗಳಿಗೆ ಅವಕಾಶವಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಮರ ಕಡಿದ ವಿಚಾರ ಚರ್ಚೆ:

ಗ್ರಾ.ಪಂ ವ್ಯಾಪ್ತಿಯಲ್ಲಿ ಮರವೊಂದನ್ನು ಕಡಿಯಲು ಗ್ರಾ.ಪಂನಿಂದ ಹಣ ನೀಡಿದ ಬಗ್ಗೆ ಚರ್ಚೆ ನಡೆಯಿತು. ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಮರ ರಸ್ತೆಗೆ ವಾಲಿಕೊಂಡಿದ್ದರಿಂದ ಮರ ಕಡಿಸಲು ಹಣ ನೀಡುವುದಕ್ಕೆ ಆಕ್ಷೇಪವಿಲ್ಲ ಆದರೆ ಕಡಿದ ಮರವನ್ನು ಮಾರಾಟ ಮಾಡುವುದು ಯಾರು ಎಂದು ಸದಸ್ಯ ರಾಜೇಶ್ ಮಣಿಯಾಣಿ ಕೇಳಿದರು. ಕಡಿದ ಮರವನ್ನು ಖಾಸಗಿಯವರೇ ತೆಗೆದುಕೊಳ್ಳುತ್ತಾರೆ ಎನ್ನುವ ಉತ್ತರಕ್ಕೆ ಆಕ್ಷೇಪ ಸೂಚಿಸಿದ ರಾಜೇಶ್ ಮಣಿಯಾಣಿಯವರು ಕಡಿದ ಮರವನ್ನು ಮಾರಾಟ ಮಾಡಿ ಪಂಚಾಯತ್‌ನಿಂದ ನೀಡಿದ ಹಣವನ್ನು ಸರಿದೂಗಿಸಬೇಕು ಎಂದು ಸಲಹೆ ನೀಡಿದರು.

ದಾರಿದೀಪ ದುರಸ್ತಿಗೆ ದರಪಟ್ಟಿ ಆಹ್ವಾನ:

ಅರಿಯಡ್ಕ ಮತ್ತು ಮಾಡ್ನೂರು ಗ್ರಾಮದಲ್ಲಿ ದಾರಿ ದೀಪ ದುರಸ್ತಿಗೆ ದರಪಟ್ಟಿ ಆಹ್ವಾನ ಮಾಡಬೇಕೆಂದು ಸದಸ್ಯ ಲೋಕೇಶ್ ಚಾಕೋಟೆ ಹೇಳಿದರು. ನಂತರ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ರಾಷ್ಟ್ರಧ್ವಜದ ಗೌರವ ಕಾಪಾಡಬೇಕು-ಪಿಡಿಓ

ಆ.15ರಂದು ಬೆಳಿಗ್ಗೆ 8 ಗಂಟೆಗೆ ಗ್ರಾ.ಪಂನಲ್ಲಿ ಧ್ವಜಾರೋಹಣ ನಡೆಯಲಿದ್ದು ಸದಸ್ಯರೆಲ್ಲರು ಕಡ್ಡಾಯವಾಗಿ ಉಪಸ್ಥಿತರಿರಬೇಕೆಂದು ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಹೇಳಿದರು.

ಪಿಡಿಓ ಪದ್ಮಕುಮಾರಿ ಮಾತನಾಡಿ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಆದ ಕಾರಣ ನಾವೆಲ್ಲಾ ಸೇರಿಕೊಂಡು ವಿಜೃಂಭಣೆಯಿಂದ ಆಚರಿಸೋಣ, ಮನೆ-ಮನೆಯಲ್ಲಿ ಧ್ವಜ ಹಾಕುವಾಗ ಸರಿಯಾಗಿ ಅಳವಡಿಸಲು ವಾರ್ಡ್ ಸದಸ್ಯರು ತಿಳಿಸುವುದು ಉತ್ತಮ. ಧ್ವಜದ ಗೌರವ ಕಾಪಾಡಬೇಕು ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗಬಾರದು ಎಂದು ಅವರು ಹೇಳಿದರು.

ಇತರ ವಿಷಯಗಳು:

94 ಸಿ ವಿಚಾರವಾಗಿ ಸದಸ್ಯ ದಿವ್ಯನಾಥ ಶೆಟ್ಟಿ ಮಾತನಾಡಿದರು. ವಿಲಚೇತನರ ವಿಷಯವೊಂದಕ್ಕೆ ಸಂಬಂಧಿಸಿ ಮೋನಪ್ಪ ಪೂಜಾರಿ ಮಾತನಾಡಿದರು. ಗ್ರಾ.ಪಂ ವ್ಯಾಪ್ತಿಯ ಅಂಗಡಿದಾರರ ಬಾಡಿಗೆ ವಿಚಾರದಲ್ಲಿಯೂ ಚರ್ಚೆ ನಡೆಯಿತು.

ಸಭೆಯಲ್ಲಿ ಸದಸ್ಯರಾದ ಸದಾನಂದ ಮಣಿಯಾಣಿ, ವಿಜಿತ್ ಕೆ, ನಾರಾಯಣ ಚಾಕೋಟೆ, ಸಾವಿತ್ರಿ ಪೊನ್ನೆತ್ತಳ, ಮೀನಾಕ್ಷಿ ಪಾಪೆಮಜಲು, ಭಾರತಿ ವಸಂತ್, ಪುಷ್ಪಲತಾ ಮರತ್ತಮೂಲೆ, ಉಷಾರೇಖಾ ರೈ, ಅನಿತಾ ಆಚಾರಿಮೂಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವರಾಮ ಮೂಲ್ಯ ವರದಿ ವಾಚಿಸಿದರು. ಸಿಬ್ಬಂದಿ ಪ್ರಭಾಕರ ಅರ್ಜಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.