ಫಿಲೋಮಿನಾದಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಎಲ್-ಡೊರಾಡೊ’ ಸಮಾರೋಪ

ತುಳುವ ಮಾಣಿಕ್ಯ ‘ಬೋಳಾರ್’ ಡಯಲಾಗ್‌ಗೆ ವಿದ್ಯಾರ್ಥಿಗಳು ಫಿದಾ..

ವಿದ್ಯಾರ್ಥಿಗಳ ಶಿಳ್ಳೆ, ಕರತಾಡತನದಿಂದ ಸ್ವಾಗತ | ಕ್ಯಾಂಪಸ್‌ನಲ್ಲಿ ಬೋಳಾರ್ ಹವಾ | ತುಂಬಿ ತುಳುಕಿದ ಸಭಾಂಗಣ

ವರದಿ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಬೋಳಾರ್…ಬೋಳಾರ್…ಎಂದು ಕಾಲೇಜಿನ ವಿದ್ಯಾರ್ಥಿ ಸಮೂಹ ಅದ್ಭುತ ಶಿಳ್ಳೆ, ಕರತಾಡನದಿಂದ ತುಳುನಾಡಿನ ಮಾಣಿಕ್ಯ, ಚಿತ್ರನಟ ಅರವಿಂದ ಬೋಳಾರ್‌ರವರನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಸ್ವಾಗತಿಸಿದ ಪರಿ ಹುಬ್ಬೇರಿಸುವಂತಹುದು. ಸಂಜೆ 4.30ಕ್ಕೆ ಸಮಾರೋಪ ಕಾರ್ಯಕ್ರಮವಿದ್ದರೂ, ಮುಂಚಿತವಾಗಿ 3.30 ಗಂಟೆಗೆ ಶಟರ್‌ಬಾಕ್ಸ್ ಫಿಲ್ಮ್ಸ್‌ನ ನಿರ್ದೇಶಕ ಸಚಿನ್ ಎಸ್.ಶೆಟ್ಟಿಯವರೊಂದಿಗೆ ಕ್ಯಾಂಪಸ್‌ಗೆ ಆಗಮಿಸಿದ ಅರವಿಂದ ಬೋಳಾರ್‌ರವರನ್ನು ಸ್ವಾಗತಿಸಲು, ಕಣ್ತುಂಬಿಕೊಳ್ಳಲು ವಿದ್ಯಾರ್ಥಿ ಸಮೂಹ ತರಗತಿಗಳನ್ನು ಬಿಟ್ಟು ನೆರೆದಿರುವುದು ಬೋಳಾರ್‌ರವರು ಎಂಥ ಅಪ್ರತಿಮ ನಟ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು.

ಹೌದು, ಆ.5 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಫ್ಯಾಕುಲಾ 2022 ಪ್ರಸ್ತುತಪಡಿಸುವ, ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ(ಐಕ್ಯೂಎಸಿ) ಇದರ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಎಲ್-ಡೊರಾಡೊ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅರವಿಂದ ಬೋಳಾರ್‌ರವರು ಫಿಲೋ ಕ್ಯಾಂಪಸ್‌ಗೆ ಆಗಮಿಸಿದ ಸಂದರ್ಭದಲ್ಲಿ ಕಾಣ ಸಿಕ್ಕಿದ ವೈವಿಧ್ಯಮಯ ಕ್ಷಣವಾಗಿತ್ತು. ಒಟ್ಟಾರೆ ಫಿಲೋ ಕ್ಯಾಂಪಸ್‌ನಲ್ಲಿ ಅರವಿಂದ್ ಬೋಳಾರ್ ಹವಾ ಸೃಷ್ಟಿಯಾಗಿತ್ತು. ಕೆಲ ವರ್ಷಗಳ ಹಿಂದೆ ಇದೇ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದವರು ತಮ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ರ‍್ಯಾಪರ್ ಕಿಂಗ್ ಚಂದನ್ ಶೆಟ್ಟಿರವರು ಆಗಮಿಸಿದಾಗ ನೆರೆದ ಪ್ರೇಕ್ಷಕರು ಶಿಳ್ಳೆ, ಕರತಾಡತನದಿಂದ ಚಂದನ್ ಶೆಟ್ಟಿಯವರನ್ನು ಸ್ವಾಗತಿಸಿದ ಪರಿ ಮತ್ತೊಮ್ಮೆ ನೆನಪಿಸುವಂತಾಗಿತ್ತು.

ಪ್ರೇಕ್ಷಕರಿಂದ ‘ಅಯ್ಯೋ ದೇವಾ..’ಡಯಲಾಗ್:

ಮಾತು ಆರಂಭಿಸಿದ ಅರವಿಂದ ಬೋಳಾರ್‌ರವರಿಗೆ ಮಾತು ಮುಂದುವರೆಸಲು ಸಭಾಂಗಣದಲ್ಲಿ ತುಂಬಿ ತುಳುಕಿದ ಪ್ರೇಕ್ಷಕ ವಿದ್ಯಾರ್ಥಿ ಸಮೂಹದಿಂದ ಬಹಳ ಕಷ್ಟಕರವಾಗಿತ್ತು. ಯಾಕೆಂದರೆ ಬೋಳಾರ್‌ರವರಿಗೆ ವಿದ್ಯಾರ್ಥಿ ಸಮೂಹ ಅಷ್ಟೊಂದು ಫಿದಾ ಆಗಿದ್ದರು. ಬೋಳಾರ್‌ರವರು ವಿದ್ಯಾರ್ಥಿ ಸಮೂಹಕ್ಕೆ ಶಾಂತವಾಗಿರಿ, ಮಾತನಾಡಲು ಬಿಡಿ ಎಂದಾಗ ವಿದ್ಯಾರ್ಥಿ ಸಮೂಹ ‘ಡಯಲಾಗ್’ ಹೇಳಿ ಎಂದರು. ಬೋಳಾರ್‌ರವರು ‘ಡಯಲಾಗ್’ ಹೇಳಲು ನೀವು ಬಿಟ್ಟರೆ ತಾನೆ ಎಂದಾಗ ಅತ್ತ ವಿದ್ಯಾರ್ಥಿ ಸಮೂಹ ಬೋಳಾರ್‌ರವರ ಫೇಮಸ್ ಡಯಲಾಗ್ ಆಗಿರುವ ‘ಅಯ್ಯೋ ದೇವಾ..’ ಎಂದಾಗ ಬೋಳಾರ್‌ರವರೂ ಕೂಡ ವಿದ್ಯಾರ್ಥಿ ಸಮೂಹದ ಕರತಾಡನಕ್ಕೆ ಅವರದೇ ಧಾಟಿಯಲ್ಲಿ ತಲೆಗೆ ಕೈ ಹಿಡಿದು ‘ದಾದಂಬೆ ಮರ‍್ಲಯಾ..ಅಯ್ಯೋ ದೇವಾ..’ ಎಂದರು. ಕೂಡಲೇ ಸಭಾಂಗಣದ ತುಂಬಾ ನಗು ಉಕ್ಕಿ ಬಂತು.

ಬೋಳಾರ್‌ರವರಿಂದ ಕೊಂಕಣಿ ಮಾತು:

ಪ್ರೇಕ್ಷಕರ ಮಾತಿಗೆ ಮಣಿದು ಬೋಳಾರ್‌ರವರು ‘ಅಶೆಂ ಜಾಲೆ ಕಶೆಂ’ ಎಂಬ ಕೊಂಕಣಿ ಚಿತ್ರದ ಕಾಮಿಡಿ ತುಣುಕೊಂದನ್ನು ಕೊಂಕಣಿ ಭಾಷೆಯಲ್ಲಿಯೇ ಮಾತನಾಡಿ ರಂಜಿಸಿದರು. ಕಾರ್ಯಕ್ರಮದ ಮೊದಲಿಗೆ ಪ್ರಾಂಶುಪಾಲರ ಕೊಠಡಿಯಲ್ಲಿ ಬೋಳಾರ್‌ರವರು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರಲ್ಲಿ ಕೊಂಕಣಿ ಭಾಷೆಯಲ್ಲಿ ಮಾತು ಮುಂದುವರೆಸಿದಾಗ ವಂ|ಆಂಟನಿ ಪ್ರಕಾಶ್‌ರವರು ನಿಮಗೆ ಹೇಗೆ ಕೊಂಕಣಿ ಬರುತ್ತದೆ ಎಂದಾಗ ಬೋಳಾರ್‌ರವರು ತಾನು ಹುಟ್ಟಿ ಬೆಳೆದದ್ದು ಕೊಂಕಣಿ ಭಾಷಿಗರ ನಡುವೆ. ಆದ್ದರಿಂದ ಕೊಂಕಣಿ ಭಾಷೆ ಮಾತನಾಡಲು ಸಾಧ್ಯವಾಗಿದೆ ಆದರೆ ನಿಮ್ಮಾಗೆ ಮಾತನಾಡಲು ಆಗುವುದಿಲ್ಲ ಎಂದರು. ಅದರಂತೆ ಫಿಲೋಮಿನಾ ಕಾಲೇಜು ಕ್ರಿಶ್ಚಿಯನ್ ಸಮುದಾಯದವರ ಸಂಸ್ಥೆಯಾದ್ದರಿಂದ ಸಭಾಂಗಣದಲ್ಲಿ ಕೊಂಕಣಿ ಭಾಷೆ ಮಾತನಾಡಿ ಪ್ರೇಕ್ಷಕರನ್ನು ರಂಜಿಸಿದರು.

ತಲೆಕೂದಲು ಹೋದರೇನಂತೆ, ಬ್ರೈನ್ ಅದೇ:

ಬೋಳಾರ್‌ರವರು ಲವ್ ಮಾಡುತ್ತಾರಾ, ಅವರ ತಲೆಯಲ್ಲಿ ಕೂದಲೇ ಇಲ್ಲ ಎಂದು ಕೆಲವರು ಅಂದಾಗ ತಾನೂ ಕೂಡ ಬಾಲ್ಯ, ಯೌವನ ದಾಟಿ ಮುಪ್ಪು ಹೊಂದಿದ್ದೇನೆ. ನೇರವಾಗಿ ಮುಪ್ಪು ಹೊಂದಿದವನಲ್ಲ. ಮುಪ್ಪು ಹೊಂದಿದರೇನಂತೆ, ಬ್ರೈನ್ ಅದೇ. ಯಾಕೆ ನಾನು ಕೂಡ ಲವ್ ಮಾಡಬಾರದಾ?. ಎಂದಾಗ ಅಲ್ಲಿಯೇ ಹತ್ತಿರಲ್ಲಿದ್ದ ಹುಡುಗನೊಬ್ಬ ‘ಎಂಕ್ ಶಿಲ್ಪ ಬೋಡು’ ಎಂಬ ಡಯಲಾಗ್ ಹೇಳಿದಾಗ ಬೋಳಾರ್‌ರವರು ಮತ್ತೊಮ್ಮೆ ಅದೇ ಡಯಲಾಗ್‌ನ್ನು ಪುನರುಚ್ಚರಿಸಿ, ಇಂದೇನ್ ಯಾನ್ ಪನ್ನೆ ಅತ್ತ್, ಆಯೆ ಪನ್ನೆ, ಶಿಲ್ಪರವರು ಇಲ್ಲಿದ್ದಾರಾ..ಆಯೆ ಶಿಲ್ಪ ಬೋಡು ಪನ್ನಗ ಆಲ್ ಪೋಯಲಾಂದ್ ಎಂಬ ಡಯಾಲಾಗ್‌ಗೆ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಾಡಿದರು.

ಯಕ್ಷಗಾನ ಗಂಡುಕಲೆ..|

ಮಾತು ಮುಂದುವರೆಸಿದ ಬೋಳಾರ್‌ರವರು ತಾನು ಚಲನಚಿತ್ರ, ನಾಟಕ, ಯಕ್ಷಗಾನದಲ್ಲಿ ಪಾತ್ರ ವಹಿಸಿದ್ದೇನೆ. ಅದರಲ್ಲೂ ಯಕ್ಷಗಾನ ಎಂಬುದು ಗಂಡುಕಲೆಯಾಗಿದೆ. ಯಕ್ಷಗಾನವನ್ನು ತಾನು ಸಾಗರಕ್ಕೆ ಹೋಲಿಸಬಲ್ಲೆ. ಸಾಗರದಲ್ಲಿ ಈಜಾಡಲು ಅಷ್ಟು ಸುಲಭವಿಲ್ಲ. ಯಾಕೆಂದರೆ ಯಕ್ಷಗಾನದಿಂದ ಕಲಿಯಲು ಸಾಕಷ್ಟಿದೆ. ಇದೇ ಕಾಲೇಜಿನ ಪ್ರಶಾಂತ್ ರೈಯವರು ಓರ್ವ ಭಾಗವತಿಕೆದಾರರಾಗಿದ್ದು, ಅವರ ಭಾಗವತಿಕೆಯಲ್ಲಿ ತಾನು ಹಲವಾರು ಬಾರಿ ಅಭಿನಯಿಸಿದ್ದೇನೆ. ಬಹಳ ಒಳ್ಳೆಯ ಭಾಗವತಿಕೆಯನ್ನು ಪ್ರಶಾಂತ್ ರೈಯವರು ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಭಾಗವಹಿಸಿ, ಪ್ರಶಾಂತ್ ರೈಯವರಲ್ಲಿ ನಿರ್ದೇಶನ ಪಡೆದುಕೊಳ್ಳಿ ಎಂದರು. ಬಳಿಕ ಮುಂದುವರೆಸಿದ ಅವರು ತನಗೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದೆ. ಪ್ರಶಾಂತ್‌ರವರು ಹೇಳಿದ್ದಕ್ಕೆ ಇಲ್ಲಿಗೆ ಬಂದಿದ್ದೇನೆ. ಆಂಡ ಪ್ರಶಾಂತೆರ್ ತೋಜ್ಜೆರ್. ಬಹುಶ ಆರ್ ಭಾಗವತಿಕೆಕ್ ಪೋದುಪ್ಪೋಡು. ಆರ್ ಏಪಲಾ ಬಿಝಿ ನರಮನಿ ಎಂದರು.

ಎಚ್.ಎಂ ‘ಮರ‍್ಲೆ’ ಎಂದಿದ್ದಕ್ಕೆ ತಾನು ಇಂದು ಫೇಮಸ್:

ಶಾಲಾ ಬಾಲಕನಾಗಿದ್ದ ಸಂದರ್ಭದಲ್ಲಿ ತಾನು ಕಲಿಯುವುದರಲ್ಲಿ ಸ್ವಲ್ಪ ಹಿಂದಿದ್ದೆ. ಶಾಲಾ ಎಚ್.ಎಂ ನನಗೆ ‘ಮರ‍್ಲೆ’ ಎಂದು ಹೇಳಿದಾಗ ತಾನು ಶಾಲೆಯಲ್ಲಿನ ನಾಟಕ ಸಂದರ್ಭದಲ್ಲಿ ಹಠದಿಂದ ‘ಮರ‍್ಲ’ನ ರೋಲ್ ಮಾಡಿದ್ದೆ. ಬಹುಮಾನ ವಿತರಣಾ ಸಂದರ್ಭದಲ್ಲಿ ಅದೇ ಎಚ್.ಎಂರವರು ಮಕ್ಕಳನ್ನುದ್ದೇಶಿಸಿ ಯಾರಿಗೆ ಪ್ರಥಮ ಬಹುಮಾನ ಸಿಗಬಹುದು ಎಂದಾಗ ಎಚ್.ಎಂರವರು ‘ಮರ‍್ಲ’ನ ರೋಲ್ ಮಾಡಿದ ಅರವಿಂದನಿಗೆ ಪ್ರಥಮ ಬಹುಮಾನ ಎಂದರು. ಅದೇ ‘ಮರ‍್ಲ’ ಹೀಗ ಪ್ರಬುದ್ಧ ಕಲಾವಿದನಾಗಿ ಇಲ್ಲಿವರೆಗೆ ಬರಲು ಸಾಧ್ಯವಾಯಿತು ಎಂದು ಹೇಳಲು ಖುಶಿಯಾಗುತ್ತದೆ ಎಂದರು.

ಕಲಿತ ಸಂಸ್ಥೆಯನ್ನು ಮರೆಯಬೇಡಿ, ಗೌರವಿಸಿ:

ಪ್ರತಿಯೋರ್ವನಲ್ಲೂ ಪ್ರತಿಭೆ ಇದ್ದೇ ಇದೆ. ಆದರೆ ಆ ಪ್ರತಿಭೆಯನ್ನು ಹೇಗೆ ಪ್ರಚುರಪಡಿಸುವುದು ಎಂಬುದು ವಿದ್ಯಾರ್ಥಿಗೆ ಗೊತ್ತಾಗಬೇಕು. ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ದೊರಕಲು ಅವಕಾಶ ಮಾಡಿಕೊಡುತ್ತದೆ. ಏನೂ ಇಲ್ಲದ ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದ್ದು ತಾನು ಕಲಿತ ವಿದ್ಯಾಸಂಸ್ಥೆಯಾಗಿದೆ. ಹೆತ್ತವರು, ಶಿಕ್ಷಕರು ಮಕ್ಕಳಿಗೆ ಬೈದರು ಎಂಬ ಕಾರಣಕ್ಕೆ ಮಕ್ಕಳು ಹಾಳಾಗುವುದಿಲ್ಲ. ಅವರು ಯಾಕೆ ಬೈದರು ಎಂಬುದನ್ನು ಮಕ್ಕಳು ಅಲೋಚಿಸಬೇಕಾಗಿದೆ. ವಿದ್ಯಾರ್ಥಿಗಳು ತಮಗೆ ವಿದ್ಯಾಭ್ಯಾಸ ನೀಡಿದ ವಿದ್ಯಾಸಂಸ್ಥೆಯನ್ನು ಖಂಡಿತಾ ಮರೆಯಬೇಡಿ, ಗೌರವಿಸಿ ಎಂದು ಅರವಿಂದ ಬೋಳಾರ್‌ರವರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಸಂಪಾದಿಸಿ-ಸಚಿನ್ ಎಸ್.ಶೆಟ್ಟಿ:

ಶಟರ್ ಬಾಕ್ಸ್ ಫಿಲ್ಮ್ಸ್‌ನ ನಿರ್ದೇಶಕ ಸಚಿನ್ ಎಸ್.ಶೆಟ್ಟಿಯವರು ಮಾತನಾಡಿ, ತನಗೆ ಎಡಿಟಿಂಗ್, ಆನಿಮೇಶನ್, ಬೈಕಿಂಗ್ ಬಹಳ ಇಷ್ಟ. ತಾನು ತನ್ನ ಸ್ವಂತ ಪರಿಶ್ರಮದಿಂದ ಎಲ್ಲವನ್ನೂ ಸಂಪಾದಿಸಿದ್ದೇನೆ. ಪುತ್ತೂರಿನಲ್ಲಿ ಈ ಹಿಂದೆ ವಿವೇಕಾನಂದ ಕಾಲೇಜಿಗೆ ಬಂದಿದ್ದೇ, ಈಗ ಫಿಲೋಮಿನಾ ಕಾಲೇಜಿಗೆ ಬಂದಿದ್ದೇನೆ. ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಜನತೆ ನನಗೆ ಬಹಳ ಪ್ರೋತ್ಸಾಹದ ಸ್ವಾಗತ ನೀಡಿದೆ. ವಿದ್ಯೆ ಮುಖ್ಯ, ವಿದ್ಯಾರ್ಥಿಗಳು ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಸಂಪಾದಿಸಿ ಎಂದರು.

ಜೀವನವನ್ನು ಹಗುರವಾಗಿ ಕಾಣಬೇಡಿ-ಆಂಟನಿ ಪ್ರಕಾಶ್:

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, ಅರವಿಂದ ಬೋಳಾರ್‌ರವರು ಓರ್ವ ಅಪ್ರತಿಮ ನಟ ಎಂಬುದಕ್ಕೆ ಇಂದಿಲ್ಲಿ ನೆರೆದ ಪ್ರೇಕ್ಷಕರೇ ಸಾಕ್ಷಿ. ಅವರು ನಿರರ್ಗಳವಾಗಿ ಕೊಂಕಣಿ ಭಾಷೆ ಮಾತನಾಡುತ್ತಿರುವುದು ನೋಡಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಓರ್ವ ಸೆಲೆಬ್ರಿಟಿಯನ್ನು ಕಾಣಲು ಎಷ್ಟೊಂದು ಮಂದಿ ಉತ್ಸುಕರಾಗಿರುತ್ತಾರೆ, ಅದೇ ಸೆಲೆಬ್ರಿಟಿ ವೇದಿಕೆ ಬಿಟ್ಟು ಹೋದಾಗ ಸಭಾಂಗಣ ಖಾಲಿಯಾಗುವುದು ನೋಡಿದಾಗ ಸಭಿಕರು ಆ ಸೆಲೆಬ್ರಿಟಿಯನ್ನು ಎಷ್ಟೊಂದು ಹಚ್ಚಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಅದೇ ಸೆಲೆಬ್ರಿಟಿ ತನ್ನ ಜೀವನದಲ್ಲಿ ಎಷ್ಟೊಂದು ಏಳು-ಬೀಳುಗಳನ್ನು ಕಂಡು ಮೇಲೆ ಬಂದಿದ್ದಾರೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಎಂದಿಗೂ ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಉದಯ ಕೆ, ಬಿಬಿಎ ವಿಭಾಗದ ಮುಖ್ಯಸ್ಥ ಡಾ|ರಾಧಾಕೃಷ್ಣ ಗೌಡ, ವಿದ್ಯಾರ್ಥಿ ಸಂಯೋಜಕ ಪ್ರಖ್ಯಾತ್ ರೈಯವರು ಉಪಸ್ಥಿತರಿದ್ದರು. ಸ್ಟಾಫ್ ಸಂಯೋಜಕ ಅಭಿಷೇಕ್ ಸುವರ್ಣ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಪ್ರಶಾಂತ್ ರೈ ಸ್ವಾಗತಿಸಿ, ಅಂತಿಮ ಬಿಬಿಎ ವಿದ್ಯಾರ್ಥಿನಿ ಹೆಲೆನ್ ವಂದಿಸಿದರು. ವಿದ್ಯಾರ್ಥಿನಿಯರಾದ ರಾಶಿ ರೈ ಹಾಗೂ ನಿರೀಕ್ಷಾ ಅತಿಥಿಗಳ ಪರಿಚಯ ಮಾಡಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿ ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


ಕೆನರಾ ಕಾಲೇಜು ವಿನ್ನರ‍್ಸ್, ವಿವೇಕಾನಂದ ರನ್ನರ್ಸ್..

ಈ ಮ್ಯಾನೇಜ್‌ಮೆಂಟ್ ಫೆಸ್ಟ್‌ನಲ್ಲಿ ಮಂಗಳೂರಿನ ಕೆನರಾ ಕಾಲೇಜು ವಿನ್ನರ‍್ಸ್ ಆಗಿ ಹೊರಹೊಮ್ಮಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ರನ್ನರ್ರ‍್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಸ್ಪರ್ಧಾವಾರು ನಡೆದ ಸ್ಪರ್ಧೆಗಳಲ್ಲಿ ದಿ ಸಿಎಫ್‌ಒ ಸ್ಪರ್ಧೆಯಲ್ಲಿ ಎಸ್‌ಡಿಎಂ ಉಜಿರೆ(ಪ್ರ), ಕೆನರಾ ಕಾಲೇಜು(ದ್ವಿ), ಸಿಇಒ ಸ್ಪರ್ಧೆಯಲ್ಲಿ ಕೆನರಾ ಕಾಲೇಜು(ಪ್ರ), ರೀಲ್ ಡೀಲ್ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜು(ಪ್ರ), ಎಸ್‌ಡಿಎಂ ಉಜಿರೆ(ದ್ವಿ), ಶಾರ್ಕ್ ಟ್ಯಾಂಕ್ ಸ್ಪರ್ಧೆಯಲ್ಲಿ ಎನ್‌ಎಂಸಿ ಸುಳ್ಯ(ಪ್ರ), ಕೆನರಾ ಕಾಲೇಜು(ದ್ವಿ), ಸ್ಟ್ಯಾಂಡ್‌ಅಪ್ ಕಾಮಿಡಿ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜು(ಪ್ರ), ಜಿಎಫ್‌ಜಿಸಿ ತೆಂಕನಿಡಿಯೂರು(ದ್ವಿ), ಡಿಜಿಟಲ್ ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜು(ಪ್ರ), ಕೆನರಾ ಕಾಲೇಜು(ದ್ವಿ), ಎಚ್.ಆರ್ ಸ್ಪರ್ಧೆಯಲ್ಲಿ ಕೆನರಾ ಕಾಲೇಜು(ಪ್ರ), ಎಸ್‌ಡಿಎಂ ಉಜಿರೆ(ದ್ವಿ) ಪ್ರಶಸ್ತಿಯನ್ನ ಪಡೆದುಕೊಂಡಿದೆ. ಒಟ್ಟು 15 ಕಾಲೇಜಿನ ತಂಡಗಳು ಕೂಟದಲ್ಲಿ ಭಾಗವಹಿಸಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.