ವಿದ್ಯಾಮಾತಾ ಅಕಾಡೆಮಿ ವತಿಯಿಂದ ಅಗ್ನಿಪಥ್ ಪೂರ್ವಭಾವಿ ತರಬೇತಿ ಶಿಬಿರ : 121 ವಿದ್ಯಾರ್ಥಿಗಳ ಭಾಗವಹಿಸುವಿಕೆ,ರ‍್ಯಾಲಿಗೆ ಉಚಿತ ಬಸ್ಸಿನ ವ್ಯವಸ್ಥೆ ಘೋಷಿಸಿದ ಶಾಸಕ ಸಂಜೀವ ಮಠಂದೂರು.

0

ಸೆಪ್ಟೆಂಬರ್ 1 ರಿಂದ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ನೇಮಕಾತಿ 2022 ರ ಅಡಿಯಲ್ಲಿ “ಅಗ್ನಿವೀರ” ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಯಲಿರುವ ರ‌್ಯಾಲಿ ಗೆ ಪೂರ್ವಭಾವಿಯಾಗಿ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಅ. 21 ಬೆಳಿಗ್ಗೆ 7.30 ರಿಂದ 1.30 ರ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಕೊಂಬೆಟ್ಟು ಪುತ್ತೂರು ಇಲ್ಲಿ ದೈಹಿಕ ಸದೃಢತೆಯ ತರಬೇತಿ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ರವರು ವಿದ್ಯಾಮಾತಾ ಅಕಾಡೆಮಿಯ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಹಾವೇರಿಯಲ್ಲಿ ಅಗ್ನಿಪಥ್ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಅಭ್ಯರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷರಾದ ಭಾಗ್ಯೇಶ್ ರೈ ಯವರ ಮನವಿಗೆ ಸ್ಪಂದಿಸಿದ ಸಚಿವರು ಅಗ್ನಿಪಥ್ ರ‌್ಯಾಲಿಗೆ ಪುತ್ತೂರಿನಿಂದ ಹಾವೇರಿಗೆ ತೆರಳಲು ಉಚಿತವಾಗಿ ಬಸ್ಸಿನ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮತ್ತು ವಿದ್ಯಾಮಾತಾ ಅಕಾಡೆಮಿಯ ಪರವಾಗಿ ಗೌರವ ತರಬೇತುದಾರರಾದ ದಯಾನಂದ ರೈ ಕೋರ್ಮಂಡ ರವರು ಶಾಸಕರನ್ನು ಗೌರವಿಸಿದರು.
ನಂತರ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ದಾಖಲಾತಿಗಳು,ರ‌್ಯಾಲಿಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಪುತ್ತೂರು ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಪುಚ್ಚೇರಿ, ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷರಾದ ಮ್ಯಾಥ್ಯೂ ಟಿ.ಜಿ, ಪದಾಧಿಕಾರಿ ಸೈಮನ್ ಕೆ.ಸಿ. ರವರು ಮತ್ತು ನಿವೃತ್ತ ಯೋಧ ವೆಂಕಪ್ಪ ಗೌಡ ರವರು ಸವಿಸ್ತಾರವಾಗಿ ಮಾಹಿತಿಯನ್ನು ತಿಳಿಸಿಕೊಟ್ಟರು.
ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀಕಾಂತ್ ರಾಥೋಡ್ ರವರು ಆಗಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿನಿಂದ ಅಗ್ನಿಪಥ್ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಕೊಂಬೆಟ್ಟು ಮೈದಾನದಲ್ಲಿ ತರಬೇತಿ ನೀಡುತ್ತಿರುವ ನಿವೃತ್ತ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಮತ್ತು ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಕರಾದ ಮೋನಪ್ಪ ಎಂ ರವರನ್ನು ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ಮಾಹಿತಿ ಕಾರ್ಯಾಗಾರದ ನಂತರ ಅಗ್ನಿಪಥ್ ರ‌್ಯಾಲಿಯಲ್ಲಿ ನಿಗದಿಪಡಿಸಿದ 1600 ಮೀಟರ್ ಓಟ, 10 -Pull Ups ಸ್ಪರ್ಧೆಗಳನ್ನು ಏರ್ಪಡಿಸಿ ಅಭ್ಯರ್ಥಿಗಳ ದೈಹಿಕ ಕ್ಷಮತೆಯನ್ನು ಪರೀಕ್ಷಿಸಲಾಯಿತು. ಸ್ಪರ್ಧೆಗಳಲ್ಲಿ ಶೇ.75 ರಷ್ಟು ಅಭ್ಯರ್ಥಿಗಳು ಅರ್ಹತೆ ಪಡೆದರು. ಪುತ್ತೂರು ಅಲ್ಲದೇ ಕಡಬ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಕಾಸರಗೋಡು, ಇತರ ಕಡೆಗಳಿಂದ ಅಭ್ಯರ್ಥಿಗಳು ಹುಮ್ಮಸ್ಸಿನಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಿಜೇತ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರವ, ನಿವೃತ್ತ ಯೋಧ ವೆಂಕಪ್ಪ ಗೌಡ ರವರು ಪದಕಗಳನ್ನು ವಿತರಿಸಿ ಶುಭಹಾರೈಸಿದರು. ಆ.22 ರಿಂದ ಇನ್ನೂ 7 ದಿನ ಕೊಂಬೆಟ್ಟು ಮೈದಾನದಲ್ಲಿ ಬೆಳಿಗ್ಗೆ 7 ರಿಂದ 9 ರ ವರೆಗೆ ಮೈದಾನ ತರಬೇತಿಯು ನಡೆಯಲಿದೆ. ದೈಹಿಕ ಕ್ಷಮತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಎಲ್ಲಾ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯು ಉಚಿತವಾಗಿ ಲಿಖಿತ ಪರೀಕ್ಷಾ ತರಬೇತಿಯನ್ನು ನೀಡುವುದಾಗಿ ಘೋಷಿಸಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರಾದ ದೀಕ್ಷಿತಾ ರೈ, ಚಂದ್ರಕಾಂತ್, ಮಿಲನ ಗೌಡ, ಹರ್ಷಿತಾ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here