ಪುತ್ತೂರು: ಗ್ರಾಮಾಂತರ ಭಾಗದಲ್ಲಿ ಗೋವು ಇಲ್ಲದ ಮನೆಯಿಲ್ಲ. ಹಾಗೆ ಗೋವಿನ ಪೂಜೆಯೂ ಪ್ರತಿ ಮನೆಯಲ್ಲೂ ನಡೆಯುತ್ತದೆ. ಆದರೆ ನಗರ ಪ್ರದೇಶದಲ್ಲಿ ಸ್ಥಳವಕಾಶದ ಕೊರತೆಯಿಂದಾಗಿ ಗೋವು ಸಾಕಲು ಅನಾನುಕೂಲ ಆಗುವ ಸಂದರ್ಭದಲ್ಲಿ ಗೋವಿನ ಪೂಜೆಯಲ್ಲಿ ಯಾರೂ ವಂಚಿತರಾಗಬಾರದು ಎಂದು ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದಲ್ಲಿ ಸಾಮೂಹಿಕ ಗೋ ಪೂಜೆ ಅ.26 ರಂದು ಸಂಜೆ ನಡೆಯಿತು. ಗೋ ಪೂಜೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರತ್ಯೇಕವಾಗಿ ಗೋವಿಗೆ ಆರತಿ ಬೆಳಗಿಸಿ, ತಿನಸು ಅರ್ಪಣೆಗೆ ಅವಕಾಶ ಮಾಡಿಕೊಡಲಾಯಿತು.
ಆಚರಣೆಗಳು ಎಲ್ಲಾ ರೋಗಗಳಿಗೆ ಪರಿಹಾರ:
ಸಂಜೆ ಗೋ ಪೂಜೆಯ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯ ಉಪೇಂದ್ರ ಅವರು ಮಾತನಾಡಿ ಆಚಾರವೇ ಧರ್ಮದ ಮೂಲ ಅಡಿಪಾಯ, ನಮಗೆ ನಮ್ಮ ಸಂಸ್ಕೃತಿಯ ಬಗ್ಗೆ ಕೀಳರಿಮೆ ಬೇಡ. ಎಲ್ಲಾ ರೋಗಗಳಿಗೂ ಸರಿಯಾದ ಆಚರಣೆಯೇ ಪರಿಹಾರ ಎಂದರು.
ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ, ಜ್ಯೋತಿ ಇಲೆಕ್ಟ್ರಿಕಲ್ಸ್‌ನ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಸದಸ್ಯ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ಗೋ ಪೂಜೆಗೆ ಅವಕಾಶ ನೀಡಲಾಯಿತು. ಮಂದಿರದ ಅರ್ಚಕ ರಘುರಾಮ ಭಟ್ ಅವರ ವೈದಿಕತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಪ್ರತಿಯೊಬ್ಬರಿಗೂ ಗೋವಿಗೆ ಆರತಿ ಬೆಳಗಿಸಿ, ಅವಲಕ್ಕಿ, ಬಾಳೆಹಣ್ಣು, ದೋಸೆ ನೀಡಲು ಅವಕಾಶ ಮಾಡಿಕೊಡಲಾಯಿತು. ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬ ಆಚರಿಸಲಾಯಿತು.