ಪುತ್ತೂರು:ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ದತಿ ಬದಲು ನೇರ ಪಾವತಿಗೆ ತರಲು ಸಿದ್ದತೆಗಳು ನಡೆದಿರುವುದಾಗಿ ಪೌರಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಶಿವಸ್ವಾಮಿ ಅವರು ಪ್ರತಿಭಟನೆ ನಿರತರಿಗೆ ಮಾಹಿತಿ ನೀಡಿರುವುದಾಗಿ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಅವರು ತಿಳಿಸಿದ್ದಾರೆ.
ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಜಂಟಿ ನಿರ್ದೇಶಕರು ಮನವಿ ಸ್ವೀಕರಿಸಿ ಮಾಹಿತಿ ನೀಡಿದ್ದಾರೆ.11,138 ಪೌರಕಾರ್ಮಿಕರ ನೇಮಕಾತಿಗೆ ಈಗಾಗಲೇ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರುವ ಸಂಬಂಧ ಸಚಿವರು ಹಾಗೂ ಕಾರ್ಯದರ್ಶಿಗಳ ಮಟ್ಟದಲ್ಲಿ ಮೂರು ಸಭೆಗಳು ನಡೆದಿವೆ.ಶೀಘ್ರವಾಗಿ ನೇರಪಾವತಿ ಘೋಷಣೆ ಹೊರಬೀಳಲಿದೆ.ಸಂಕಷ್ಟ ಭತ್ಯೆಯನ್ನು ಹೊರಗುತ್ತಿಗೆ ನೌಕರರಿಗೂ ವಿಸ್ತರಿಸುವ ಸಲುವಾಗಿ 180 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ಪ್ರಸ್ತಾವನೆ ಒಪ್ಪಿಗೆಯಾದಲ್ಲಿ ಎಲ್ಲ ಹೊರಗುತ್ತಿಗೆ ನೌಕರರಿಗೆ ವೇತನದ ಜತೆಗೆ ಪ್ರತೀ ತಿಂಗಳು ರೂ.2000 ಸಂಕಷ್ಟ ಭತ್ಯೆ ಸಿಗಲಿದೆ.ಅಧಿಕಾರಿಗಳ ಕಿರುಕುಳ ಇದ್ದಲ್ಲಿ ನಿರ್ದಿಷ್ಟ ದೂರು ನೀಡುವಂತೆ ತಿಳಿಸಿದ್ದಾರೆ ಎಂದು ಜಂಟಿ ನಿರ್ದೇಶಕರು ಮಾಹಿತಿ ನೀಡಿರುವುದಾಗಿ ಅಣ್ಣಪ್ಪ ಕಾರೆಕ್ಕಾಡು ತಿಳಿಸಿದ್ದಾರೆ.
ನೇರಪಾವತಿ ಘೋಷಣೆ ಮಾಡದಿದ್ದರೆ ಡಿ.20ಕ್ಕೆ ಪ್ರತಿಭಟನೆ: ನೇರಪಾವತಿ ಘೋಷಣೆ ಮಾಡದಿದ್ದಲ್ಲಿ ಡಿ.20ರಿಂದ ರಾಜ್ಯದ 319 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತೆ, ಕುಡಿಯುವ ನೀರು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ತಿಳಿಸಿರುವುದಾಗಿ ಅಣ್ಣಪ್ಪ ಕಾರೆಕ್ಕಾಡು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕದ ಸಂಚಾಲಕರಾದ ಸಿದ್ರಾಮ ಪಾಟೀಲ. ಬೆಳಗಾವಿ ವಿಭಾಗ ಸಂಚಾಲರಾದ ರಾಜೂ ಹೊಸಮನಿ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು, ಜಿಲ್ಲಾಧ್ಯಕ್ಷರುಗಳಾದ ಚನ್ನಕೇಶವ, ವಿನಯ್, ದುಗ್ಗೇಶ್, ಶಿವರಾಜ್, ಪುಟ್ಟಸ್ವಾಮಿ ಯಲ್ಲಪ್ಪ ನಾಗರಾಜು ಬಂಡಿ ಯಲ್ಲಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.