ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರವು ಡಿ.6 ರಂದು ಜರಗಿತು.
ಮಂಗಳೂರು ದೇರಳಕಟ್ಟೆ ಯೇನಪೋಯ ಡೀಮ್ಡ್ ವಿಶ್ವವಿದ್ಯಾನಿಲಯದ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ನಿತ್ಯಾಶ್ರೀರವರು ಮಾತನಾಡಿ, ಪ್ರಥಮ ಚಿಕಿತ್ಸೆ ಎಂಬುದು ವೈದ್ಯಕೀಯ ಕ್ಷೇತ್ರದ ಒಂದು ಭಾಗವಾಗಿದೆ. ತುರ್ತು ಸಂದರ್ಭದಲ್ಲಿ ಗಾಯ ಅಥವಾ ಅವಘಡಗಳಾದಾಗ ತಕ್ಷಣ ಒದಗಿಸುವ ಆರಂಭಿಕ ಆರೈಕೆಯೇ ಪ್ರಥಮ ಚಿಕಿತ್ಸೆಯಾಗಿದೆ. ಜೀವವನ್ನು ಉಳಿಸುವುದು ಹಾಗೂ ಕಾಪಾಡುವುದು. ಅವಘಡಕ್ಕೆ ಕಾರಣವಾಗಿರುವ ಪರಿಸ್ಥಿತಿಯಿಂದ ಗಾಯಾಳುವನ್ನು ಸಂರಕ್ಷಿಸುವುದು, ಅವಘಡವು ತೀವೃವಾಗದಂತೆ ತಡೆಯುವುದು ಇತ್ಯಾದಿ ಪ್ರಥಮ ಚಿಕಿತ್ಸೆಯಿಂದ ಸಾಧ್ಯವಾಗುವುದು. ಪ್ರಥಮ ಚಿಕಿತ್ಸೆಯನ್ನು ನೀಡುವವರು ಪ್ರಾಥಮಿಕ ಜ್ಞಾನವನ್ನು ಹೊಂದಿರಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ರೆಡ್ ಕ್ರಾಸ್ ಘಟಕದ ದೂರದೃಷ್ಟಿ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಮಾನವನ ಸಂಕಟವನ್ನು ತಡೆಗಟ್ಟುವುದು ಹಾಗೂ ನಿವಾರಿಸುವ ಮೂಲಕ ಮಾನವನ ಜೀವನ ಮತ್ತು ಆರೋಗ್ಯವನ್ನು ರಕ್ಷಿಸುವುದಾಗಿದೆ. ಪ್ರತಿಯೊಬ್ಬನ ಜೀವವೂ ಅಮೂಲ್ಯವೇ. ಪ್ರಥಮ ಚಿಕಿತ್ಸಾ ಕೌಶಲ್ಯಗಳನ್ನು ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿರ್ವಹಿಸಬಹುದು ಎಂದರು.
ಕಾಲೇಜಿನ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ಉಪನ್ಯಾಸಕಿ ಜ್ಯೋತಿ ಎಂ ಹಾಗೂ ಸಹ ಕೌನ್ಸಿಲರ್ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಶ್ರೇಯಸ್ ಕಾಮತ್ ವಂದಿಸಿದರು. ವಿದ್ಯಾರ್ಥಿನಿ ಚೈತ್ರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.