ಕಡಬದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಪಾನ್ ಬೀಡ ಅಂಗಡಿಯ ಮಾಲಕನಿಗೆ ಥಳಿತ

0

  • ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿಯೇ ಪರಾರಿ
  • ಕಡಬ ಏಕಾಹ ಭಜನಾ ಕರ್ತವ್ಯಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ
  • ರಾತ್ರಿಯೇ ಕಡಬಕ್ಕೆ ದೌಡಾಯಿಸಿದ ಸರ್ಕಲ್ ಇನ್ಸ್ ಪೆಕ್ಟರ್‌ ಉಮೇಶ್ ಉಪ್ಪಳಿಕೆ

ಕಡಬ: ಏಕಾಹ ಭಜನಾ ಮಹೋತ್ಸವಕ್ಕೆ ನಿಯೋಜನೆಗೊಂಡಿದ್ದ ಉಪ್ಪಿನಂಗಡಿ ಠಾಣೆಯ ಪೊಲೀಸರೊಬ್ಬರು ಪಾನ್ ಅಂಗಡಿ ಮಾಲಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಹೊಡೆದು ಅಂಗಡಿ ಧ್ವಂಸ ಮಾಡಿ ಕರ್ತವ್ಯದ ನಡುವೆಯೇ ಕಾರಿನಲ್ಲಿ ಪರಾರಿಯಾದ ಘಟನೆ ಎ.೮ರಂದು ಮಧ್ಯರಾತ್ರಿ ನಡೆದಿದೆ.

ವರ್ಷಂಪ್ರತಿ ಅದ್ದೂರಿಯಾಗಿ ನಡೆಯುವ ಏಕಾಹ ಭಜನ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಡು ರಾತ್ರಿ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ನಡೆದುಕೊಂಡು ಬಂದ ಶಿಶಿಲದ ಮೋಹನ್, ಸೀತರಾಮ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿಗಳು ಬೀಡ ಜಗಿದು ಹಣ ನೀಡದೆ ಹೋಗಲು ಮುಂದಾಗಿದ್ದರು. ಪಾನ್ ಅಂಗಡಿಯವರು ಹಣ ಕೊಡುವಂತೆ ವಿನಂತಿಸಿದ್ದರು. ಇದರಿಂದ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ‘ಪೊಲೀಸರ ಜೊತೆನೇ ದುಡ್ಡು ಕೇಳ್ತೀಯಾ’ ಅಂತ ಬೈದು ತನ್ನ ಕೈಯಲ್ಲಿದ್ದ ಲಾಠಿಯಿಂದ ಯದ್ವತದ್ವಾ ಹೊಡೆದು ಪಾನ್ ಸ್ಟಾಲನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಸಿಬ್ಬಂದಿಯ ದುರ್ವರ್ತನೆಯನ್ನು ಪ್ರಶ್ನಿಸಿದ ಸಾರ್ವಜನಿಕರು ಪೊಲೀಸರಿಬ್ಬರು ದುರ್ವರ್ತನೆ ತೋರಿದ ಬಳಿಕ ತಮ್ಮ ಕಾರಿನಲ್ಲಿ ಹೋಗಿ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋಹನ್ ಎಂಬವರು ಎಸ್ಕೇಪ್ ಆಗಿದ್ದು ಸೀತಾರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿ ತರಾಟೆಗೆತ್ತಿಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಮಾಯಕನ ಮೇಲೆ ಲಾಠಿ ಏಟು ನೀಡಿದನ್ನು ಪ್ರಶ್ನಿಸಿದ್ದಾರೆ.

ಆಸ್ಪತ್ರೆಗೆ ದಾಖಲು
ಪೊಲೀಸ್ ಸಿಬ್ಬಂದಿ ಹೊಡೆದ ಏಟಿಗೆ ಅಸ್ಪಸ್ಥಗೊಂಡ ಅಂಗಡಿಯ ಮಾಲಕ ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಹಿತಿ ತಿಳಿದ ಎಸ್.ಐ. ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಈ ವೇಳೆ ಸಂಘಟನೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು ಬೀಡ ಸ್ಟಾಲ್ ನಾಶ ಪಡಿಸಿದಕ್ಕೆ ಸುಮಾರು ೫ ಸಾವಿರ ರೂ ಮೊತ್ತ ಹಾಗೂ ಕ್ಷಮೆಯಾಚಿಸುವುದಾಗಿ ತೀರ್ಮಾನಕ್ಕೆ ಬರಲಾಯಿತು ಎಂದು ಮಾಹಿತಿ ಲಭ್ಯವಾಗಿದೆ.

ಘಟನೆಯ ಗಂಭೀರತೆ ತಿಳಿದು ನಡುರಾತ್ರಿ ಠಾಣೆಗೆ ದೌಡಾಯಿಸಿದ ವೃತ್ತ ನಿರೀಕ್ಷಕರು:
ಕಡಬದಲ್ಲಿ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ರಾತ್ರೋ ರಾತ್ರಿ ಠಾಣೆಗೆ ಬಂದು ಮಾಹಿತಿ ಪಡೆದಿದ್ದಾರೆ. ಇಲಾಖೆಗೆ ಕಪ್ಪು ಚುಕ್ಕೆ ತಂದ ಸಿಬ್ಬಂದಿಯ ನಡೆಗೆ ಗರಂ ಗೊಂಡ ವೃತ್ತ ನಿರೀಕ್ಷಕರು ಎಸ್.ಐ ಅವರಿಗೆ ಕೂಡಲೇ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿದರು. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು, ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಕ್ಕೆ ಅವರು ತಿಳಿಸಿದರು

LEAVE A REPLY

Please enter your comment!
Please enter your name here