ಕುಂಬ್ರ ಪೇಟೆಯಲ್ಲಿ ಅನಿಯಮಿತ ವಿದ್ಯುತ್ ಕಡಿತ-ವರ್ತಕರಿಗೆ ತೊಂದರೆ-ಸಿಟಿ ಫೀಡರ್ ಅಳವಡಿಕೆಗೆ ವರ್ತಕರ ಸಂಘದಿಂದ ಮೆಸ್ಕಾಂಗೆ ಮನವಿ

0

ಪುತ್ತೂರು: ಕುಂಬ್ರ ಪೇಟೆಯಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ವರ್ತಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಕುಂಬ್ರಕ್ಕೆ ಸಿಟಿ ಫೀಡರ್ ಅಳವಡಿಸುವಂತೆ ಕುಂಬ್ರ ಮೆಸ್ಕಾಂ ಎ.ಇ.ಇ ವಸಂತ ಕುಮಾರ್‌ರವರಿಗೆ ಕುಂಬ್ರ ವರ್ತಕರ ಸಂಘದಿಂದ ಏ.28 ರಂದು ಮನವಿ ಸಲ್ಲಿಸಲಾಯಿತು.

ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ವರ್ತಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಕುಂಬ್ರಕ್ಕೆ ಸಿಟಿ ಫೀಡರ್ ಅಳವಡಿಸುವಂತೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರ್ತಕರು ಹೇಳಿದರು. ಇದಕ್ಕೆ ಉತ್ತರಿಸಿದ ಎ.ಇ.ಇ ವಸಂತ ಕುಮಾರ್‌ರವರು, ಈಗಾಗಲೇ ಕಾವುನಲ್ಲಿ ನೂತನ ಫೀಡರ್ ನಿರ್ಮಾಣ ಕೆಲಸ ನಡೆಯುತ್ತಿದೆ. ಮುಂದಕ್ಕೆ ಕುಂಬ್ರ ಪೇಟೆಯಲ್ಲಿ ನೂತನ ಟಿ.ಸಿ ಅಳವಡಿಕೆ ಮಾಡುವ ಮೂಲಕ ವಿದ್ಯುತ್ ಟ್ರಿಪ್ ಆಗುವುದನ್ನು ತಪ್ಪಿಸಲು ಪ್ರಯತ್ನ ಪಡುತ್ತೇವೆ, ಸಿಟಿ ಫೀಡರ್ ಅಳವಡಿಕೆ ಸದ್ಯಕ್ಕೆ ಅಸಾಧ್ಯ, ಮುಂದಿನ ಹಂತದಲ್ಲಿ ಪ್ರಯತ್ನಿಸಲಾಗುವುದು, ಕೆಲಸಗಾರರ ಸುರಕ್ಷತೆಯ ದೃಷ್ಟಿಯಲ್ಲಿ ಸಂಪೂರ್ಣ ಪವರ್ ಆಫ್ ಮಾಡಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳರವರು ಮಾತನಾಡಿ, ಸಿಟಿ ಫೀಡರ್ ಅಳವಡಿಕೆ ಬಹಳ ಅವಶ್ಯವಿದ್ದು ಈ ಬಗ್ಗೆ ಪ್ರಯತ್ನಿಸುವಂತೆ ಕೇಳಿಕೊಂಡರು. ಇದಲ್ಲದೆ ಸದ್ಯಕ್ಕೆ ಕೈಕಾರ ಅಥವಾ ಪರ್ಪುಂಜದಲ್ಲಿ ಜಿ.ಒ.ಸಿ ಅಳವಡಿಸುವ ಮೂಲಕ ತುರ್ತು ಕೆಲಸದ ಸಂದರ್ಭದಲ್ಲಿ ವಿದ್ಯುತ್ ಆಫ್, ಆನ್ ಮಾಡುವ ಮೂಲಕ ಕುಂಬ್ರ ಪೇಟೆಗೆ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದರು. ಇದಕ್ಕೆ ಎ.ಇ.ಇ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕುಂಬ್ರ ಜೆಇ ರವೀಂದ್ರ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ಪದಾಧಿಕಾರಿಗಳಾದ ಹನೀಫ್, ಪಿ.ಕೆ ಮಹಮ್ಮದ್, ಶುತಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

` ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುವುದರಿಂದ ವರ್ತಕರಿಗೆ ತೊಂದರೆಯಾಗುತ್ತಿದೆ. ರೆಫ್ರೀಜರೇಟರ್‌ನಲ್ಲಿ ಇಟ್ಟಿರುವ ಹಾಲು,ಮೊಸರು,ಐಸ್‌ಕ್ರೀಮ್ ಇತ್ಯಾದಿ ಕೆಟ್ಟ ಹೋಗುತ್ತದೆ. ಕುಂಬ್ರಕ್ಕೆ ಸಿಟಿ ಫೀಡರ್ ಅಳವಡಿಕೆ ಮಾಡಿದರೆ ಬಹಳ ಉತ್ತಮ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಗಮನಹರಿಸಬೇಕಾಗಿ ವಿನಂತಿ.’
——————ರಫೀಕ್ ಅಲ್‌ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ

LEAVE A REPLY

Please enter your comment!
Please enter your name here