ಪುತ್ತೂರು:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಮೂಲಕ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಲು ಸಮಿತಿ ರಚಿಸುವುದು ಹಾಗೂ ಕಡಬ ತಾಲೂಕು ಸಂಘ ಸ್ಥಾಪನೆಗೆ ಸಭೆ ನಡೆಸಿ ಸಂಚಲನಾ ಸಮಿತಿ ರಚಿಸುವುದಾಗಿ ಸಂಘದ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಘದ 47ನೇ ಸಭೆಯು ಜು.23ರಂದು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ಸಂಘದ ಮುಖಾಂತರ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸುವಂತೆ ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ, ವಿದ್ಯಾ ಸಂಸ್ಥೆ ಪ್ರಾರಂಭಿಸಲು ಪೂರಕವಾಗಿ ಪ್ರತ್ಯೇಕ ಸಮಿತಿ ರಚಿಸಿಕೊಂಡು ಮುಂದಿನ ಕ್ರಮಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಕಡಬಕ್ಕೆ ಸಂಚಲನಾ ಸಮಿತಿ:
ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬಂದಿರುವ ಕಡಬ ತಾಲೂಕಿಗೆ ಬಿಲ್ಲವ ಸಂಘ ಸ್ಥಾಪಿಸುವ ಸಭೆಯಲ್ಲಿ ಚರ್ಚಿಸಿ ಕಡಬದಲ್ಲಿ ಸಂಚಲನಾ ಸಮಿತಿ ರಚಿಸುವುದು ಹಾಗೂ ಇದಕ್ಕಾಗಿ ಸಭೆ ನಡೆಸಿ ಸಂಚಲನಾ ಸಮಿತಿ ರಚಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರ ಘೋಷಣೆ:
ಸಂಘದ 2023-24 ಮತ್ತು 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಘೋಷಣೆ ಮಾಡಿದರು. ಸಂಘದ ಮುಂದಿನ ಚುನಾವಣೆಗೆ ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ ಕೆಂಗುಡೇಲುರವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಸಂಘದ ಬೆಳವಣಿಗೆ ಹಾಗೂ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸದಸ್ಯರು ನಿರಂತರ ಸಹಕಾರ ನೀಡುವಂತೆ ವಿನಂತಿಸಿದರು.
ಸಂಘದ ಪ್ರಭಾರ ಕಾರ್ಯದರ್ಶಿ ಚಿದಾನಂದ ಸುವರ್ಣ ವರದಿ ವಾಚಿಸಿದರು. ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಸಂಘದ ಲೆಕ್ಕಪತ್ರ ಹಾಗೂ ಅಂದಾಜು ಬಜೆಟ್ ಮಂಡಿಸಿದರು. ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಗುರುಮಂದಿರದ ಲೆಕ್ಕಪತ್ರ ಮಂಡಿಸಿದರು. ಗುರುಮಂದಿರದ ಅರ್ಚಕ ಅಕ್ಷತ್ ಶಾಂತಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷರಾದ ಸದಾನಂದ ಕುಂದರ್ ಸ್ವಾಗತಿಸಿ, ಚಂದ್ರಕಲಾ ಮುಕ್ವೆ ವಂದಿಸಿದರು.